
ಬೆಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಗೆ ಹಲವು ಜಂಜಾಟಗಳ ನಡೆವೆಯೂ ಕಾಂಗ್ರೆಸ್ ನ ಮೂವರು ಅಭ್ಯರ್ಥಿಗಳ ಹೆಸರು ಬಹುತೇಕ ಅಂತಿಮವಾಗಿದ್ದು, ಶುಕ್ರವಾರದಂದು(ನಾಳೆ)ಪ್ರಕಟವಾಗುವ ಸಾಧ್ಯತೆ ಇದೆ.
ಬೀದರ್ ಗ್ರಾಮಾಂತರ ಕ್ಷೇತ್ರದಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತಗೊಂಡಿದ್ದ ರಹೀಂ ಖಾನ್ ಹಾಗೂ ದೇವದುರ್ಗ ಕ್ಷೇತ್ರದಿಂದ ಮಾಜಿ ಶಾಸಕ ಬಿ.ವೆಂಕಟೇಶ್ ನಾಯಕ್ ಅವರ ಪತ್ನಿ ಸಾವಿತ್ರಮ್ಮ ವೆಂಕಟೇಶ್ ನಾಯಕ್ ಹೆಸರು ಯಾವುದೇ ಗೊಂದಲ ಇಲ್ಲದೆ ಅಂತಿಮವಾಗಿದೆ. ಇನ್ನು ಸಾಕಷ್ಟು ಗೊಂದಲ ಸೃಷ್ಟಿಸಿದ ಬೆಂಗಳೂರು ನಗರದ ಹೆಬ್ಬಾಳ ಕ್ಷೇತ್ರದಲ್ಲಿ ಅಳೆದು ತೂಗಿ ಭೈರತಿ ಸುರೇಶ್ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆ ನಿಚ್ಚಳವಾಗಿದೆ. ಕೆಪಿಸಿಸಿ ಉನ್ನತ ಮಟ್ಟದಲ್ಲಿ ಈ ಮೂವರ ಹೆಸರು ಬಹುತೇಕ ಅಂತಿಮವಾಗಿದೆ. ಆದರೆ ಗುರುವಾರ ರಾತ್ರಿ ರಾಜ್ಯಕ್ಕೆ ಆಗಮಿಸುವ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಪರಿಶೀಲಿಸಿದ ನಂತರ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ.
ಇಂದು ಡಿಗ್ಗಿ ರಾಜ್ಯಕ್ಕೆ: ಇನ್ನೊಂದೆಡೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಜಿಲ್ಲಾ ಪಂಚಾಯತ್, ತಾಲ್ಲೂಕ್ ಪಂಚಾಯತ್ ಚುನಾವಣಾ ಪ್ರಣಾಳಿಕೆ ತಯಾರಿಸಿ ಸಮಿತಿ ರಚಿಸಿದ್ದೇವೆ. ತಾಲ್ಲೂಕು ಪಂಚಾಯತ್ ಗಳಿಗೆ ಹೆಚ್ಚಿನ ಬಲ ತುಂಬಲು ಚಿಂತನೆ ನಡೆಸಲಾಗಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಇಂದು ರಾಜ್ಯಕ್ಕೆ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಆಗಮಿಸಲಿದ್ದು, ಅವರೊಂದಿಗೆ ಚರ್ಚಿಸಿ ಪಟ್ಟಿ ಅಂತಿಮ ಮಾಡುತ್ತೇವೆ ಎಂದರು.
Advertisement