
ಬಳ್ಳಾರಿ: ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ ಪರಮೇಶ್ವರ್ ನಾಯಕ್ ಅವರ ದೂರವಾಣಿ ಕರೆಗೆ ಸ್ಪಂದಿಸಲಿಲ್ಲ ಎಂಬ ಕಾರಣಕ್ಕೆ ಕೂಡ್ಲಿಗಿಯ ದಕ್ಷ ಡಿವೈಎಸ್ ಪಿ ಅನುಪಮಾ ಶೆಣೈ ಅವರನ್ನು ವರ್ಗಾವಣೆಗೊಳಿಸಿದ್ದಾರೆ ಎನ್ನುವ ವಿಚಾರ ಚರ್ಚೆಗೆ ಗ್ರಾಸವಾಗಿದೆ.
ಜ. 18ರಂದು ಸಚಿವ ಪರಮೇಶ್ವರ್ ನಾಯ್ಕ ಅವರ ಬೆಂಬಲಿಗನೊಬ್ಬ ಡಿವೈಎಸ್‍ಪಿ ಅನುಪಮಾ ಶಣೈಗೆ ಫೋನ್ ಕರೆ ಮಾಡಿ ಸಚಿವರು ಮಾತನಾಡಿತ್ತಾರೆ ಎಂದು ಹೇಳಿದ್ದಾರೆ. ಅದರಂತೆ ಸಚಿವರ ಮಾತಿಗೆ ಕಾಯುತ್ತಿದ್ದ ವೇಳೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಕರೆ ಬಂದಿದೆ. ಹಾಗಾಗಿ ಸಚಿವರ ಕರೆಯನ್ನು ಹೋಲ್ಡ್ ನಲ್ಲಿರಿಸಿ, ಅಧಿಕಾರಿಯೊಂದಿಗೆ ಮಾತನಾಡಿದ್ದಾರೆ. ನಂತರ ಸಚಿವರ ಕರೆಯನ್ನು ಕನೆಕ್ಟ್ ಮಾಡಿಕೊಂಡಿದ್ದಾರೆ. ಇದರಿಂದ ಕುಪಿತರಾದ ಸಚಿವರು ಫೋನ್ ನಲ್ಲೇ ಡಿವೈಎಸ್ಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಿಸಿದ್ದಾರೆ ಎನ್ನಲಾಗುತ್ತಿದೆ.
ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ವರ್ಗಾವಣೆಯಾಗಿರುವುದು ಗಮನಾರ್ಹ. ಜ.19 ರಂದು ಅಥಣಿಗೆ ವರ್ಗಾವಣೆಯಾಗಿದ್ದ ಶೆಣೈ ಮರು ದಿನವೇ ಇಂಡಿಗೆ ಎತ್ತಂಗಡಿಯಾದರು.ಇದು ಸೇಡಿನ ರಾಜಕೀಯ ಎಂಬುದು ಕೂಡ್ಲಿಗಿಯ ಸಾರ್ವಜನಿಕರ ಅಭಿಪ್ರಾಯ. ಶೆಣೈ ಕೂಡ್ಲಿಗಿ ಡಿವೈಎಸ್ಪಿ ಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅಕ್ರಮ ಮರಳು , ಮಧ್ಯ, ಮಟ್ಕಾ ದಂಧೆಗೆ ಕಡಿವಾಣ ಹಾಕಿದ್ದರು.ತಮ್ಮದೇ ಸರ್ಕಾರವಿದ್ದರೂ. ದುಡ್ಡು ಮಾಡಿಕೊಳ್ಳಲು ಅವಕಾಶವಾಗುತ್ತಿಲ್ಲ ಎಂಬ ಕೊರಗಿನಲ್ಲಿ ಕಾರ್ಯಕರ್ತರು ಪಕ್ಷಾತೀತವಾಗಿ ಮರಳು ದಂಧೆಯಲ್ಲಿ ತೊಡಗಿದ್ದವರೂ ಡಿವೈಎಸ್ಪಿ ಅವರ ಕಠಿಣ ಕ್ರಮದಿಂದ ಬೇಸತ್ತಿದ್ದರು.
ಈ ಬಗ್ಗೆ ಸಚಿವರ ಸ್ವಕ್ಷೇತ್ರ ಹೂವಿನ ಹಡಗಲಿಯಲ್ಲೂ ಡಿವೈಎಸ್ ಪಿ ಶೆಣೈ ಸಿಂಗಂ ಆಗಿದ್ದರು. ಹಡಗಲಿ ಡಿವೈಎಸ್ಪಿ ರಜೆಯಲ್ಲಿದ್ದಾಗ ಪ್ರಭಾರಿಯಾಗಿ ಅಧಿಕಾರ ನಿರ್ವಹಿಸಿದ್ದಾಗಲೂ ಅಕ್ರಮ ಗಣಿಗಾರಿಕೆಗೆ ಆಸ್ಪದ ನೀಡಿರಲಿಲ್ಲ. ಈ ಎಲ್ಲಾ ಬೆಳವಣಿಗೆಗಳಿಂದ ಸಚಿವರು ಅಧಿಕಾರಿಯ ಸಣ್ಣ ತಪ್ಪಿಗೆ ಕಾದು ಕುಳಿತಿದ್ದರು. ಕರೆಗೆ ಕೂಡಲೇ ಸ್ಪಂದಿಸಲಿಲ್ಲ ಎಂಬ ನೆಪವೊಡ್ಡಿ ವರ್ಗ ಮಾಡಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
Advertisement