
ಬೆಂಗಳೂರು: ಕೆಆರ್ ಪುರಂ ನ ಮಾಜಿ ಶಾಸಕ ನಂದೀಶ್ ರೆಡ್ಡಿ ವಿರುದ್ಧ ನಿವೇಶನ ಖರೀದಿ ವೇಳೆ ತಮ್ಮ ಬಳಿಯಿದ್ದ ದಾಖಲೆಗಳನ್ನು ಪಡೆದು ಕೋಟ್ಯಂತರ ರೂ. ವಂಚಿಸಿದ್ದಾರೆ ಎಂದು 46 ಮಂದಿ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಸಂಬಂಧ ಹಲಸೂರು ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳು ದೂರುದಾರರು ಮತ್ತು ನಂದೀಶ್ ರೆಡ್ಡಿ ಅವರನ್ನು ವಿಚಾರಿಸಿದ್ದಾರರೂ ನಂದೀಶ್ ರೆಡ್ಡಿ ದೂರಿನ ಸಂಬಂಧ ಪ್ರತಿಕ್ರಿಯೆ ನೀಡಿಲ್ಲ. ಕೆಆರ್ ಪುರ ಚಿನ್ನಪ್ಪನಹಳ್ಳಿ ಮಾಲೀಕ ಚಂದ್ರಶೇಖರ್ ಅವರು 2011 ರಲ್ಲಿ 1 ಎಕರೆ 35 ಗುಂಟೆ ಜಾಗದಲ್ಲಿ ಬೇರೆ ಬೇರೆ ಅಳತೆಯ 46 ನಿವೇಶನ ನಿರ್ಮಿಸಿ ಮಾರಾಟ ಮಾಡಿದ್ದರು. ನಿವೇಶನ ಖರೀದಿಸಿದವರು ಯಾರೂ ಮನೆ ನಿರ್ಮಿಸಿರಲಿಲ್ಲ. ಬದಲಾಗಿ ಶೆಡ್, ಗೋಡೆ ಹಾಕಿದ್ದರು.ಈ ನಡುವೆ ಲೇಔಟ್ ನ ಮಾಲೀಕ ಚಂದ್ರಶೇಖರ್ ಈಗಾಗಲೇ ಮಾರಾಟವಾಗಿದ್ದ ಜಾಗವನ್ನು ಮಾಜಿ ಶಾಸಕ ನಂದೀಶ್ ರೆಡ್ಡಿ ಅವರಿಗೆ ಮಾರಾಟ ಮಾಡಿದ್ದರು. ಜಾಗ ಖರೀದಿಸಿದ್ದ ನಂದೀಶ್ ರೆಡ್ಡಿ ಎಸ್ ವಿಎಸ್ ಪ್ರೈ.ಲಿ ಜತೆ ಸೇರಿ ನಿವೇಶನದಲ್ಲಿ ಅಪಾರ್ಟ್ ಮೆಂಟ್ ಕಟ್ಟಲು ಮುಂದಾಗಿದ್ದಾರೆ. ಸುದ್ದಿ ತಿಳಿದ ನಿವೇಶನದ ಮಾಲಿಕರುಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅವರನ್ನು ಸಮಾಧಾನ ಪಡಿಸಿದ್ದ ನಂದೀಶ್ ರೆಡ್ಡಿ, ಹಣ ನೀಡಿ ನಿವೇಶನ ಖರೀದಿಸುತ್ತೇವೆ ಎಂದು ಹೇಳಿ ಮುಂಗಡ ಹಣ ನೀಡಿದ್ದರು. 2014 ರಲ್ಲಿ ಕಾಮಗಾರಿ ಆರಂಭಿಸಿದ ರೆಡ್ಡಿ ನಿವೇಶನದ ಬಳಿ ಅಸಲಿ ದಾಖಲಾತಿ ಪಡೆದು ಹಣ ನೀಡಿದ್ದಾರೆ. ಬಾಕಿ ನೀಡಬೇಕಿದ್ದ ಹಣದ ಎಲ್ಲಾ ಚೆಕ್ ಗಳೂ ಬೌನ್ಸ್ ಆಗಿದೆ. ಇದನ್ನು ಪ್ರಶ್ನಿಸಿದ ಮಾಲೀಕರುಗಳಿಗೆ ನಂದೀಶ್ ರೆಡ್ಡಿ ಹಣ ನೀಡುವುದಾಗಿ ಹೇಳುತ್ತಾ ಬಂದಿದ್ದು ಈ ವರೆಗೂ ಹಣ ನೀಡದ ಕಾರಣ ಪೊಲೀಸ್ ಮೊರೆ ಹೋಗಿದ್ದಾರೆ.
Advertisement