
ಬೆಂಗಳೂರು: ಕರ್ನಾಟಕ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದು, ಅಭಿವೃದ್ಧಿಯತ್ತ ಸಾಗುತ್ತಿದೆ. ಆರೋಗ್ಯ, ಶಿಕ್ಷಣ ನೈರ್ಮಲ್ಯ, ವಿಜ್ಞಾನ, ತಂತ್ರಜ್ಞಾನ ವಿಭಾಗದಲ್ಲಿ ಹೊಸತನ ರೂಢಿಸಿಕೊಳ್ಳುತ್ತಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಶ್ಲಾಘನೆ ವ್ಯಕ್ತಪಡಿಸಿದರು.
ಕರ್ನಾಟಕ ಔದ್ಯೋಗಿಕ ನೀತಿ ಅಡಿಯಲ್ಲಿ ಕಳೆದೆರಡು ವರ್ಷದಲ್ಲಿ ರಾಜ್ಯಕ್ಕೆ 1.2 ಲಕ್ಷ ಕೋಟಿ ರೂ. ಬಂಡವಾಳ ಹರಿದುಬಂದಿದೆ ಎಂದು ರಾಜ್ಯಪಾಲ ವಿ.ಆರ್. ವಾಲಾ ತಿಳಿಸಿದರು.
67ನೇ ಗಣರಾಜ್ಯೋತ್ಸವ ನಿಮಿತ್ತ ಮಂಗಳವಾರ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
2014-19ರವರೆಗೆ ರಾಜ್ಯದಲ್ಲಿ ಔದ್ಯೋಗಿಕ ನೀತಿ ಜಾರಿಗೊಳಿಸಲಾಗಿದೆ. ಕಳೆದೆರಡು ವರ್ಷದಲ್ಲಿ 450ಕ್ಕೂ ಹೆಚ್ಚು ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ. ಫೆ.3ರಿಂದ 5ರವರೆಗೆ ಆಯೋಜಿಸಿರುವ ಇನ್ವೆಸ್ಟ್ ಕರ್ನಾಟಕ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗಿದೆ ಎಂದರು. ಭೂಚೇತನ ಯೋಜನೆಯಡಿ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವುದು ಹಾಗೂ ನಿರ್ವಹಣೆಗೆ ಒತ್ತು ನೀಡಲಾಗುತ್ತಿದೆ. ನೀರಾವರಿ ಹಾಗೂ ಕೃಷಿ ಉಪಕರಣಗಳಿಗೆ ಸಹಾಯಧನ ನೀಡಲಾಗುತ್ತಿದೆ. ರೈತರ ಹಿತಾಸಕ್ತಿಗೆ ಸರ್ಕಾರ ಬದ್ಧವಾಗಿದೆ ಎಂದರು.
ಸ್ವಚ್ಛತೆಯಲ್ಲಿ ದೈವತ್ವವಿದೆ ಎಂದ ರಾಜ್ಯಪಾಲರು, ಅರಮನೆ ನಗರ ಮೈಸೂರನ್ನು ಸರ್ವಾಂಗೀಣ ಸ್ವಚ್ಛತೆಗಾಗಿ ದೇಶದಲ್ಲೇ ಪ್ರಥಮ ನಗರವೆಂದು ಘೊಷಿಸಲಾಗಿದೆ. ಮೈಸೂರು ನಗರದಿಂದ ಪ್ರೇರಿತಗೊಂಡು ಇತರೆ ನಗರಗಳೂ ಈ ನಿಟ್ಟಿನಲ್ಲಿ ಪ್ರಯತ್ನಿಸಲಿ ಎಂದು ಆಶಿಸಿದರು.
ಕಳೆದೆರಡು ವರ್ಷಗಳಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಗಣನೀಯ ಹೆಚ್ಚಳವಾಗಿದ್ದು, ವಿದ್ಯುತ್ ಬವಣೆ ನೀಗಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. 2020ನೇ ಸಾಲಿಗೆ ರಾಜದ್ಯದಿಂದ ಬೇರೆಡೆ ವಿದ್ಯುತ್ ಒದಗಿಸುವುದು ಆಶಯವಾಗಿದೆ ಎಂದು ತಿಳಿಸಿದರು.
Advertisement