
ಧಾರವಾಡ: ನವಜಾತ ಶಿಶು ಕದ್ದು ಬಂಧನಕ್ಕೊಳಗಾಗಿದ್ದ ಮಹಿಳೆ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಸುರೇಖಾ ಧಾರವಾಡ ಸಬ್ ಜೈಲಿನಲ್ಲಿ ಬುಧವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೌಚಾಲಯದಲ್ಲಿ ವೇಲ್‌ನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆಕೆ ಸಾವಿಗೆ ಶರಣಾಗಿದ್ದಾರೆ.
ಮೂರು ದಿನಗಳ ಹಿಂದಷ್ಟೆ ವೈದ್ಯೆಯ ವೇಷದಲ್ಲಿ ಕಿಮ್ಸ್‌ಗೆ ಬಂದಿದ್ದ ಮಹಿಳೆ ಶಿಶು ಕಳವು ಮಾಡಿದ್ದರು. ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ವಿದ್ಯಾನಗರ ಪೊಲೀಸರು ಮಂಗಳವಾರ ಆಕೆಯನ್ನು ಬಂಧಿಸಿದ್ದರು. ಕಳೆದ 2 ವರ್ಷಗಳಲ್ಲಿ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದ ಮಗು ಅಪಹರಣದ ಮೂರನೇ ಪ್ರಕರಣ ಇದಾಗಿದೆ.
ಹಾವೇರಿಯ ಹತ್ತಿ ಮಿಲ್‌ನಲ್ಲಿ ಕೆಲಸ ಮಾಡುವ, ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆ ನರಸರಾವ್‌ಪೇಟೆಯ ಶ್ರೀನಿವಾಸ ಮತ್ತು ಅನಿತಾ ದಂಪತಿಯ 11 ದಿನಗಳ ಹೆಣ್ಣು ಶಿಶು ಕಳೆದ ಸೋಮವಾರ ಕಳ್ಳತನವಾಗಿತ್ತು.
ನಾಲ್ಕು ವರ್ಷದ ಹಿಂದೆ ವಿವಾಹವಾಗಿರುವ ಅವರಿಗೆ ಎರಡು ವರ್ಷದ ಗಂಡು ಮಗುವಿದೆ. ಎರಡನೇ ಹೆರಿಗೆಗೆಂದು ಪತ್ನಿ ಅನಿತಾರನ್ನು ಜ. 15ರಂದು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಮರುದಿನ ಹೆಣ್ಣು ಮಗು ಜನಿಸಿತ್ತು.
ತನ್ನನ್ನು ವೈದ್ಯೆ ಎಂದು ಪರಿಚಯಿಸಿಕೊಂಡಿದ್ದ 35ರಿಂದ 40 ವರ್ಷ ವಯಸ್ಸಿನ ಮಹಿಳೆ ಈ ದಂಪತಿಯೊಂದಿಗೆ ತುಂಬಾ ಆತ್ಮೀಯತೆಯಿಂದ ಇದ್ದಳು. ಮಧ್ಯಾಹ್ನ ಅನಿತಾ ಇದ್ದ ಕೊಠಡಿಗೆ ಬಂದಿದ್ದಳು. ಅಲ್ಲಿ ಅನಿತಾರ ತಾಯಿ ಗಂಗಮ್ಮ ಕೂಡ ಇದ್ದರು. ''ಮಗುವಿನ ಹಣೆ ಕೆಂಪಗಾಗಿದೆ, ಇಂಜೆಕ್ಷನ್ ಕೊಡಬೇಕು. ಅಜ್ಜಿ ಜತೆ ಮಗುವನ್ನು ಕಳಿಸಿ. ನೀವು ಇಲ್ಲೇ ಇರಿ,'' ಎಂದು ಹೇಳಿ ಕಾರ್ಡಿಯಾಲಜಿ ಕ್ಯಾತ್‌ಲ್ಯಾಬ್‌ಗೆ ಕರೆ ತಂದಿದ್ದಾಳೆ. ಒಳಹೋದ ಬಳಿಕ, ಅಜ್ಜಿಗೆ ಬಟ್ಟೆಯೊಂದನ್ನು ಕೊಟ್ಟು ''ತೊಳೆದುಕೊಂಡು ಬನ್ನಿ,'' ಎಂದು ಹೇಳಿದ್ದಾಳೆ. ಅಜ್ಜಿ ಆಚೆ ಹೋಗುತ್ತಿದ್ದಂತೆಯೇ ಮಗುವಿನೊಂದಿಗೆ ಪರಾರಿಯಾಗಿದ್ದಳು.
Advertisement