ಪಿ ಎಸ್ಸೈಯನ್ನು ಏಕವಚನದಲ್ಲೇ ಸಂಬೋಧಿಸಿದ್ದ ಸಚಿವ!
ಬಳ್ಳಾರಿ: ಡಿವೈಎಸ್ಪಿ ಅನುಪಮಾ ಶೆಣೈ ವರ್ಗಾವಣೆ ಪ್ರಕರಣದ ಬಳಿಕ ಬಳ್ಳಾರಿ ಉಸ್ತುವಾರಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಅವರ ವಿರುದ್ಧ ಮತ್ತೊಂದು ಅಪಸ್ವರ ಎದ್ದಿದೆ. ಪೊಲೀಸರ ಮೇಲಿನ ದರ್ಪದ ಬಗ್ಗೆ ಇಲಾಖೆ ಅಧಿಕಾರಿಯೊಬ್ಬರು ಧ್ವನಿ ಎತ್ತಿದ್ದು, ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಂಬ್ರಹಳ್ಳಿ ಠಾಣೆ ಪಿಎಸ್ ಐ ಭೀಮನ ಗೌಡ ಅವರ ಜತೆ ಸಚಿವರು ಅನುಚಿತವಾಗಿ ವರ್ತಿಸಿರುವುದು ಬೆಳಕಿಗೆ ಬಂದಿತ್ತು. ಇದೀಗ ಅಂಥದೇ ಮತ್ತೊಂದು ಪ್ರಕರಣ ಬಯಲಾಗಿದ್ದು, ಪೊಲೀಸ್ ಅಧಿಕಾರಿಯೊಬ್ಬರು ಸಚಿವರ ನಡೆ, ನುಡಿ ಹಾಗೂ ಅಧಿಕಾರ ದುರ್ಬಳಕೆ ಕುರಿತು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2012ರಲ್ಲಿ ಹಿರೇಹಡಗಲಿಯಲ್ಲಿ ಪಿಎಸ್ ಐ ಆಗಿ ಸೇವೆ ಸಲ್ಲಿಸುತ್ತಿದ್ದ ಮಹೇಂದ್ರ ನಾಯ್ಕ ಎಂಬುವರು ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಅವರ ಸರ್ವಾಧಿಕಾರ ಧೋರಣೆ ಹಾಗೂ ಅಧಿಕಾರ ದುರ್ಬಳಕೆ ಕುರಿತು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಇಂತಹ ಸಚಿವರಿಂದಾಗಿಯೇ ಪೊಲೀಸ್ ವ್ಯವಸ್ಥೆಯ ಬಗ್ಗೆ ಜನರಲ್ಲಿ ನಂಬಿಕೆ ಹಾಳಾಗುತ್ತಿದೆ. ಪೊಲೀಸ್ ಅಧಿಕಾರಿಗಳಿಗೆ ಕಿಂಚಿತ್ತೂ ಮರ್ಯಾದೆ ನೀಡದೆ ಏಕವಚನದಲ್ಲೇ ಸಂಬೋಧಿಸುತ್ತಿದ್ದ ಸಚಿವರ ವರ್ತನೆಯಿಂದ ಇಡೀ ಇಲಾಖೆಯ ಸಿಬ್ಬಂದಿ ರೋಸಿ ಹೋಗಿದ್ದಾರೆ. ಪೊಲೀಸರನ್ನು ಬಳಸಿಕೊಂಡು ಅಧಿಕಾರ ದುರುಪಯೋಗ ಮಾಡಿಕೊಳ್ಳುವುದನ್ನು ಯಾರೂ ಪ್ರಶ್ನಿಸುವ ಸ್ಥಿತಿಯಲ್ಲಿರಲಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.
ಅಕ್ರಮ ಮರಳು ಸಾಗಣೆ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುವಂತಿರಲಿಲ್ಲ. ಬಿಜೆಪಿಯವರ ವಿರುದ್ಧ ಕೇಸ್ ಮಾಡಿ ಎಂದು ತಾಕೀತು ಮಾಡುತ್ತಿದ್ದರು. ಅವರು ಹೇಳಿದ ಮಾತು ಕೇಳಲಿಲ್ಲವೆಂದರೆ ಸಸ್ಪೆಂಡ್ ಮಾಡಿಸುವುದಾಗಿ ಬೆದರಿಸುತ್ತಿದ್ದರು. ಅವರ ಸರ್ವಾಧಿಕಾರ ನೀತಿಯಿಂದ ಬೇಸತ್ತು ನಾನು ಎಷ್ಟೋ ಬಾರಿ ಅತ್ತಿದ್ದೇನೆ. ಬೇರೆಡೆಗೆ ವರ್ಗವಾಗಬೇಕು ಎಂದುಕೊಳ್ಳುತ್ತಿದ್ದೆ. ಕೊನೆಗೆ ಧಾರವಾಡದ ಕಲಘಟಗಿಗೆ ವರ್ಗಗೊಂಡೆ ಎಂದು ಮಹೇಂದ್ರ ನಾಯ್ಕ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ