ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ನಿಂದ ಮದರಸಾ ಪಠ್ಯಗಳಲ್ಲಿ ದೇಶಭಕ್ತಿ ಬಿತ್ತುವ ಅಂಶಗಳ ಅಳವಡಿಕೆ

ದೇಶದ 25 ಸಾವಿರ ಮದರಸಾಗಳಲ್ಲಿ ಶಿಕ್ಷಣದ ಆಮೂಲಾಗ್ರ ಬದಲಾವಣೆಗೆ ಮುಸ್ಲಿಂ ಸಂಘಟನೆಗಳು ಒಂದಾಗಿವೆ.
ಮದರಸಾ(ಸಂಗ್ರಹ ಚಿತ್ರ)
ಮದರಸಾ(ಸಂಗ್ರಹ ಚಿತ್ರ)
Updated on

ಬೆಂಗಳೂರು: ದೇಶದ 25 ಸಾವಿರ ಮದರಸಾಗಳಲ್ಲಿ ಶಿಕ್ಷಣದ ಆಮೂಲಾಗ್ರ ಬದಲಾವಣೆಗೆ ಮುಸ್ಲಿಂ ಸಂಘಟನೆಗಳು ಒಂದಾಗಿದ್ದು, ನೂತನ ಪಠ್ಯಪುಸ್ತಕಗಳಲ್ಲಿ  ದೇಶಪ್ರೇಮ, ದೇಶಭಕ್ತಿ ಬಿತ್ತುವಂತಹ ಅಂಶಗಳನ್ನು ಅಳವಡಿಸಲಾಗಿದೆ ಎಂದು ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಎಸ್ ಎ ಖಾದರ್ ತಿಳಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯಗಳಲ್ಲಿ ಭಾರತದ ಇತಿಹಾಸ, ಸ್ವಾತಂತ್ರ್ಯ ಪೂರ್ವದ ಹೋರಾಟ ಹಾಗೂ ಇಸ್ಲಾಂ ಸಮುದಾಯದ ಉದಯ, ಕುರಾನ್ ಏನು ಹೇಳುತ್ತದೆ ಎನ್ನುವುದೂ ಸೇರಿ ಪ್ರಮುಖ ವಿಷಯಗಳನ್ನು ಅಳವಡಿಸಲಾಗಿದೆ. ಅದರ ಅಡಿಯಲ್ಲೇ ಸಮುದಾಯದ ಯುವಕರು ಬೆಳೆಯುತ್ತಾರೆ. ದೇಶ ಪ್ರೇಮ ಹೆಚ್ಚಿಸುವಂತಹ ವಿಷಯಗಳನ್ನು ಹೆಚ್ಚು ಅಳವಡಿಸಲು ಎಜುಕೇಶನ್ ಬೋರ್ಡ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಭಯೋತ್ಪಾದನೆ ಕಡೆ ಮುಖ ಮಾಡುತ್ತಿರುವ ಯುವಕರನ್ನು ಬದಲಾಯಿಸಲಾಗುವುದು. ಇಂತಹ ಕಾರ್ಯವನ್ನು ಮದರಸಾಗಳಿಂದಲೇ ಆರಂಭಿಸುವುದರಿಂದ ಸಮುದಾಯಕ್ಕೂ, ದೇಶಕ್ಕೂ ಒಳ್ಳೆಯ ಹೆಸರು ಬರಲಿದೆ. ಹೀಗಾಗಿ 1 ರಿಂದ 12 ನೇ ತರಗತಿ ವರೆಗಿನ ಪಠ್ಯ ಕ್ರಮ ಬದಲಾಯಿಸಲಾಗಿದೆ ಎಂದರು.
ಉಗ್ರರು ಮುಸ್ಲಿಮರಲ್ಲ: ಶಿಕ್ಷಣ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ ಸೈಯದ್ ಮೊಹಮ್ಮದ್ ಅಶ್ರಫ್, ದೇಶದಲ್ಲಿ ಬಂಧನವಾಗಿರುವ ಶಂಕಿತ ಉಗ್ರರು ಇಸ್ಲಾಂ ಧರ್ಮಕ್ಕೆ ಸೇರಿದವರಲ್ಲ. ಇಸಿಸ್ ನಲ್ಲಿರುವವರು ಯಾರೂ ಮುಸಲ್ಮಾನರಲ್ಲ. ಅವರ ಧೋರಣೆಗಳು ಇಸ್ಲಾಂ  ವಿರುದ್ಧವಾಗಿದೆ. ಯಾಕೆಂದರೆ ಇಸ್ಲಾಂ ಧರ್ಮದಲ್ಲಿ ಭಯೋತ್ಪಾದನೆಗೆ ಜಾಗವಿಲ್ಲ. ಬಂಧಿತರು ತಪ್ಪು ಮಾಡಿದ್ದು ಸಾಬೀತಾದರೆ ಅವರಿಗೆ ಕಠಿಣ ಶಿಕ್ಷೆಯಾಗಬೇಕು. ಅದಕ್ಕೆ ಸಮುದಾಯದ ಸಹಕಾರವಿದೆ ಎಂದರು.
ಇಸ್ಲಾಂ ನಲ್ಲಿ 3 ಗುಂಪುಗಳಿವೆ, ಶಿಯಾ, ಸುನ್ನಿ, ವಹಾಬಿ, ಶಿಯಾ ಮತ್ತು ಸುನ್ನಿ ವರ್ಗಗಳು ಯಾವುದೇ ಉಗ್ರ ಚಟುವಟಿಕೆಗಳಲ್ಲಿ ತೊಡಗಿಲ್ಲ. ಆದರೆ ವಹಾಬಿ ಎಂಬ ವರ್ಗ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿದೆ. ಈ ನಿಟ್ಟಿನಲ್ಲಿ ದೇಶದ ಯುವಕರು ಇಂತಹ ವರ್ಗಕ್ಕೆ ಸೇರದಂತೆ ತಡೆಯಲು ಹೊಸ ಪಠ್ಯ ಕ್ರಮ ತರಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com