'ಏಕಾಗ್ರತೆಯಿಂದ ಸಾಧಕರಾಗಿ'

Updated on: 

ಆನೇಕಲ್: ಪ್ರತಿಯೊಬ್ಬರೂ ಎಲ್ಲ ಕೆಲಸಗಳನ್ನೂ ಶ್ರದ್ಧೆಯಿಂದ ಮಾಡಬೇಕು ಎಂದು  ಅರಳು ಮಲ್ಲಿಗೆ ಪಾರ್ಥ ಸಾರಥಿ ತಿಳಿಸಿದ್ದಾರೆ. ಅವರು ಶನಿವಾರ ಬೆಂಗಳೂರು ದಕ್ಷಿಣ, ಜಿಗಣಿಯ ನಿತ್ಯಾನಂದ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ಪ್ರಥಮ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ ವಿದ್ಯಾರ್ಥಿ ದೆಸೆಯಲ್ಲಿ ಕಲಿಕೆಗೆ ಮಾತ್ರ ಆದ್ಯತೆ ನೀಡಬೇಕು. ಕಲಿಕಾ ಸಮಯದಲ್ಲಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಶ್ರದ್ಧೆಯಿಂದ ಪಠ್ಯ ಕ್ರಮದಲ್ಲಿ ತೊಡಗಿಸಿಕೊಂಡರೇ ಉತ್ತಮ ವಿದ್ಯಾರ್ಥಿಯಾಗಿ ದೇಶಸೇವೆ ಮಾಡಬಹುದು ಎಂದರು. ಮೇಲ್ಮನೆ ವಿರೋಧ ಪಕ್ಷದ ಉಪನಾಯಕ ದಯಾನಂದ ತಮ್ಮ ಇತ್ತೀಚಿನ ಆಸ್ಟ್ರೇಲಿಯಾ  ಪ್ರವಾಸದ ಬಗ್ಗೆ ಮಾತನಾಡಿ ಇತರ ದೇಶದಲ್ಲಿ ಜನಸಂಖ್ಯೆ ಕಡಿಮೆ ಇದ್ದರೂ ದೇಶಭಕ್ತಿ ಇರುವ ಕಾರಣ ವೇಗವಾಗಿ ಅಭಿವೃದ್ಧಿ ಹೊಂದುತಾರೆ ಎಂದರು. ಪದವಿ ಪ್ರದಾನ ಸಮಾರಂಭದಲ್ಲಿ ಗುಲ್ಬರ್ಗ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ  ಡಾ. ಎಂ. ಮುನಿಯಮ್ಮ, ಎಂಇಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹೆಬ್ಬಣಿ ರಾಮಚಂದ್ರ ಭಾಗವಹಿಸಿದ್ದರು. ಪ್ರಾಂಶುಪಾಲ ಡಾ.ಕೆ. ರಘುನಾಥರಾವ್ ಸ್ವಾಗತ, ವಂದನೆ ಸಲ್ಲಿಸಿದರು.
ನಡೆಯದ ಉತ್ಸವ: ತೀವ್ರ ಅಸಮಾಧಾನ
ಚನ್ನರಾಯಪಟ್ಟಣ: ಜಿಲ್ಲೆಯ ಇತಿಹಾಸವನ್ನು ಸಾರುವ ಹೊಯ್ಸಳ ಉತ್ಸವ ಹಲವು ವರ್ಷಗಳಿಂದ ಆಚರಣೆ ಮಾಡದಿರುವುದು ಜಿಲ್ಲಾಡಳಿತದ ವೈಫಲ್ಯ ತೋರುತ್ತದೆ ಎಂದು ಸಾಹಿತ್ಯಾಭಿಮಾನಿಗಳು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ನೌಕರರ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಜನಾರ್ದನ ಅಧ್ಯಕ್ಷತೆಯಲ್ಲಿ ಕರೆದಿದ್ದ ಜಿಲ್ಲಾ ಕಸಾಪ ಪದಾಧಿಕಾರಿಗಳ ಸಭೆಯಲ್ಲಿ ತಾಲೂಕು ಹಾಗೂ ಜಿಲ್ಲಾ ಕಸಾಪ ಪದಾಧಿಕಾರಿಗಳು ಜಿಲ್ಲೆಯಲ್ಲಿ ಹೊಯ್ಸಳ ಉತ್ಸವ ಆಚರಣೆಯಲ್ಲಿ ತಾತ್ಸಾರ ತೋರುತ್ತಿರುವ ಜಿಲ್ಲಾಡಳಿತದ ವಿರುದ್ಧ ತೀವ್ರ ಅಸಮಧಾನ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಈ ಬಗ್ಗೆ ಸಭೆ ನಡೆಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲು ಮುಂದಾಗುವಂತೆ ಕಸಾಪ ಪದಾಧಿಕಾರಿಗಳು ಒತ್ತಾಯಿಸಿದರು.  ಜಿಲ್ಲಾಡಳಿತ ಹೊಯ್ಸಳ ಉತ್ಸವ ಹಮ್ಮಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕಸಾಪ ವತಿಯಿಂದ ಹೊಯ್ಸಳ ಉತ್ಸವ ಆಚರಿಸುವಂತೆಯೂ ಜಿಲ್ಲೆಯ ಎಲ್ಲಾ ತಾಲೂಕಿನ ಕಸಾಪ ಪದಾಧಿಕಾರಿಗಳು ಆಗ್ರಹಿಸಿದರು. ಹೊಯ್ಸಳ ಉತ್ಸವ ನಡೆಸಲು ರಾಜ್ಯ ಸರ್ಕಾರ ರಾಜಕೀಯಉದಾಸೀನ ಮಾಡುತ್ತಿದ್ದು, ಜಿಲ್ಲಾಧಿಕಾರಿ ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿ ಮುಂದಿನ ದಿನಗಳಲ್ಲಿ ಹೊಯ್ಸಳ ಉತ್ಸವ ಆಚರಣೆಗೆ ಹೆಚ್ಚು ಆಸಕ್ತಿ ತೋರಬೇಕು ಎಂದರು.
ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ
ಸೂಲಿಬೆಲೆ: ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ  ಕಿತ್ತೂರು ರಾಣಿ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ 2013-14 ಸಾಲಿಗೆ ಪ್ರವೇಶ ಪಡೆಯಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹಾಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 6ನೇ ತರಗತಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಫೆ.4 ರಿಂದಅರ್ಜಿಗಳನ್ನು ಆಯಾ ವಸತಿ ಶಾಲೆಗಳ ಪ್ರಾಂಶುಪಾಲರು ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಸಿಗುತ್ತವೆ. ಭರ್ತಿ ಮಾಡಿದ ಅರ್ಜಿಗಳನ್ನು ಫೆ.25ರೊಳಗೆ  ಸೂಚಿತ ಕಚೇರಿಯಲ್ಲಿ  ಅರ್ಜಿಯನ್ನು ಸಲ್ಲಿಸಿ ಅಂದೇ ಪ್ರವೇಶ ಪರೀಕ್ಷೆ ಪತ್ರ ಪಡೆಯಬಹುದಾಗಿದೆ. ಮಾ.3 ರಂದು ಪ್ರವೇಶ ಪರೀಕ್ಷೆಯನ್ನು ಎದುರಿಸುವ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲಾಗುವುದು. ಮಾ.24 ರಂದು ಪರೀಕ್ಷೆ ನಡೆಯಲಿದೆ. ಸಲ್ಲಿಸುವ ಅರ್ಜಿಯೊಂದಿಗೆ ಎರಡು ಭಾವ ಚಿತ್ರ ಹಾಗೂ ಜಾತಿ ಮತ್ತು ಆದಾಯ ಪತ್ರವನ್ನು ಲಗತ್ತಿಸಬೇಕಿದೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ನಟರಾಜ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com