ಸೂಲಿಬೆಲೆ: ಮಕ್ಕಳಲ್ಲಿರುವ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಸರ್ಕಾರ ಅಂಗನವಾಡಿ ಕೇಂದ್ರಗಳ ಮೂಲಕ ನೀಡುತ್ತಿರುವ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಸೂಲಿಬೆಲೆ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ತಿಳಿಸಿದ್ದಾರೆ. ಸೂಲಿಬೆಲೆ ವ್ಯಾಪ್ತಿಯ 38 ಅಂಗನವಾಡಿ ಕೇಂದ್ರಗಳಲ್ಲಿ ಕಂಡು ಬಂದಿರುವ 26 ಅಪೌಷ್ಟಿಕತೆಯುಳ್ಳ ಮಕ್ಕಳನ್ನು ಸೋಮವಾರ ತಪಾಸಣೆ ನಡೆಸಿ ಮಾತನಾಡಿದರು. ಸೂಲಿಬೆಲೆ ವ್ಯಾಪ್ತಿಗೆ ಒಳಪಡುವ 38 ಅಂಗನವಾಡಿ ಕೇಂದ್ರಗಳಲ್ಲಿರುವ ಸೊನ್ನೆಯಿಂದ 6ವರ್ಷದ ಮಕ್ಕಳ ಆರೋಗ್ಯವನ್ನು ಪರೀಕ್ಷೆ ಮಾಡಿದ್ದು, ಇದರಲ್ಲಿ 26 ಮಕ್ಕಳು ಅಪೌಷ್ಟಿಕತೆಯಿಂದ ಬಳುತ್ತಿದ್ದಾರೆ. ಇದರಲ್ಲಿ 4 ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೊಸಕೋಟೆ ಸರ್ಕಾರಿ ಆಸ್ಪತ್ರೆ, 1ಮಗುವನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಲಾಗಿದೆ ಎಂದರು. ಆಲಪ್ಪನಹಳ್ಳಿ ಕ್ಲಸ್ಟರ್ ಅಂಗನವಾಡಿ ಕೇಂದ್ರಗಳ ಮೇಲ್ಪಚಾರಕಿ ಪುಷ್ಪಾವತಿ ಮಾತನಾಡಿ, ಅಪೌಷ್ಟಿಕತೆಯುಳ್ಳ ಮಕ್ಕಳನ್ನು ಸಾಧಾರಣ ಮಟ್ಟಕ್ಕೆ ಬೆಳೆಯುವಂತೆ ಮಾಡಲು ಅಗತ್ಯವಾಗಿರುವ ಪೌಷ್ಟಿಕಾಂಶಗಳಾದ ಹಾಲು, ಮೊಟ್ಟೆಗಳನ್ನು ನೀಡಲಾಗುತ್ತಿದೆ ಎಂದರು.ಆರೋಗ್ಯ ಕೇಂದ್ರದ ಮಹಿಳಾ ಅಧಿಕಾರಿ ಜಯಂತಿ, ಸೇರಿದಂತೆ ನಾನಾ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತರು ಹಾಜರಿದ್ದರು.