ಇಂದಿನಿಂದ 18ನೇ ಜಾನಪದ ಲೋಕೋತ್ಸವ

Updated on: 

ಅಂತಿಮ ಹಂತದಲ್ಲಿ ಉತ್ಸವದ ಸಿದ್ಧತೆ  ್ಣ ರಾಜ್ಯ, ಹೊರ ರಾಜ್ಯಗಳ ಕಲಾ ತಂಡಗಳಿಂದ ಕಲಾ ಪ್ರದರ್ಶನ
ರಾಮನಗರ:  ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿಗಳ ಸಮ್ಮಿಲನವಾದ ಜಾನಪದ ಲೋಕೋತ್ಸವವು ನಗರದ ಹೊರ ವಲಯದ ಜಾನಪದ ಲೋಕದಲ್ಲಿ ಫೆ.8ರಿಂದ ಮೂರು ದಿನಗಳವರೆಗೆ ನಡೆಯಲಿದೆ. ಉತ್ಸವಕ್ಕಾಗಿ ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗಿವೆ.
ಜಾನಪದ ಲೋಕದಲ್ಲಿ ಆಯೋಜನೆಗೊಳ್ಳುತ್ತಿರುವ 18ನೇ ಜಾನಪದ ಲೋಕೋತ್ಸವದಲ್ಲಿ ಮೂರೂ ದಿನ ಬೆಳಗ್ಗೆ 9 ರಿಂದ ರಾತ್ರಿ 9ರವರೆಗೆ ಗೋಷ್ಠಿ, ಸಂವಾದ, ರಾಜ್ಯ ಮತ್ತು ಹೊರ ರಾಜ್ಯಗಳ ಕಲಾ ತಂಡಗಳಿಂದ ವೈವಿಧ್ಯಮಯ ಜಾನಪದ ಕಲೆಗಳ ಪ್ರದರ್ಶನದೊಂದಿಗೆ ಈ ಕಾರ್ಯಕ್ರಮವು ಜಾನಪದದ ರಸದೌತಣ ಉಣಬಡಿಸಲಿದೆ.
ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಸಹಕಾರದೊಂದಿಗೆ ಕರ್ನಾಟಕ ಜಾನಪದ ಪರಿಷತ್ತು ಈ ಉತ್ಸವ ಆಯೋಜಿಸಿದೆ. ಜಾನಪದ ಲೋಕದಲ್ಲಿ ಗುರುವಾರ ಅಂತಿಮ ಹಂತದ ಸಿದ್ಧತೆ ವೀಕ್ಷಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ಕಾರ್ಯಕ್ರಮದ ವಿವರ ನೀಡಿದರು.
ದೇಜಗೌ ಚಾಲನೆ:  ಫೆ.8ರ ಬೆಳಗ್ಗೆ 10.30ಕ್ಕೆ ಮೈಸೂರು ವಿವಿ ವಿಶ್ರಾಂತ ಕುಲಪತಿ ನಾಡೋಜ ಡಾ.ದೇ.ಜವರೇಗೌಡ ಉತ್ಸವಕ್ಕೆ ಚಾಲನೆ ನೀಡುವರು. ಕರಕುಶಲ ಮಳಿಗೆಯನ್ನು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಡಾ.ಬಾನಂದೂರು ಕೆಂಪಯ್ಯ ಉದ್ಘಾಟಿಸುವರು. ಕರ್ನಾಟಕ ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಇಂದಿರಾ ಬಾಲಕೃಷ್ಣ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ ಎಂದು ತಿಮ್ಮೇಗೌಡ ತಿಳಿಸಿದರು.
ನಿವೃತ್ತ ಐಪಿಎಸ್ ಅಧಿಕಾರಿ ಕೆ.ವಿ.ಆರ್. ಠ್ಯಾಗೂರ್, ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್, ಜಿ.ಪಂ. ಉಪ ಕಾರ್ಯದರ್ಶಿ ಡಾ.ಸಿದ್ದರಾಮಯ್ಯ, ಚಲನಚಿತ್ರ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಟಿ.ಎಸ್. ನಾಗಾಭರಣ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
ಕಲಾ ಪ್ರದರ್ಶನ:  ಸಂಜೆ 5.30ಕ್ಕೆ ಶಿವಮಾದು ಮತ್ತು 25 ಕಲಾವಿದರ ತಂಡದಿಂದ ಪೂಜಾ ಕುಣಿತ, ಉಡುಪಿಯ ಸದಾನಂದ ಕುಂದರ್ ತಂಡದಿಂದ ಭೂತ ಕುಣಿತ, ಚಿತ್ರದುರ್ಗದ ಹುಲ್ಲೂರು ಮಹಿಳಾ ತಂಡದಿಂದ ತಮಟೆ ವಾದನ, ಬಸವನಬಾಗೇವಾಡಿಯ ರಾಮಣ್ಣ ಪೂಜಾರಿ ತಂಡದಿಂದ ಡೊಳ್ಳು ಕುಣಿತ, ಜಮಖಂಡಿಯ ಹೂಗಾರ ನವಲಗಿ ತಂಡದಿಂದ ಸಂಬಾಳ ವಾದನ, ದಕ್ಷಿಣ ಕನ್ನಡದ ರಫೀಕ್ ಸಂಗಡಿಗರಿಂದ ದಪ್ಪು ಕುಣಿತ, ತುಮಕೂರಿನ ಕುಮಾರಸ್ವಾಮಿ ಸಂಗಡಿಗರಿಂದ ಸೋಮನಕುಣಿತ, ಬೀದರ್‌ನ ಇಂದಿರಾ ಬಾಯಿ ತಂಡದಿಂದ ಬುಲಾಯಿ ಹಾಡುಗಳು, ಕೊಳ್ಳೇಗಾಲದ ಕೈಲಾಸಮೂರ್ತಿ, ಬೆಂಗಳೂರಿನ ಪಿಚ್ಚಳ್ಳಿ ಶ್ರೀನಿವಾಸ್ ತಂಡದಿಂದ ಹಾಡು ಮೇಳ ನಡೆಯಲಿದೆ ಎಂದು ವಿವರಿಸಿದರು.
ವಿಶೇಷ ಸಂವಾದ:  ಫೆ.9ರಂದು ಬೆಳಗ್ಗೆ 10.30ಕ್ಕೆ ಬುಡುಬುಡಿಕೆ, ಸುಡುಗಾಡು ಸಿದ್ದರು, ಕುರ್ರುಮಾಮ ಇತ್ಯಾದಿಗಳು ಸೇರಿದಂತೆ ಅಲೆಮಾರಿ ಜನಪದ ಕಲಾವಿದರ ವಿಷಯವಾಗಿ ಸಂವಾದ ನಡೆಯಲಿದೆ. ಡಾ. ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆಯಲ್ಲಿ ಡಾ. ಹಿ.ಶಿ. ರಾಮಚಂದ್ರಗೌಡ ವಿಷಯ ಮಂಡಿಸುವರು. ಡಾ.ಬಾಲಗುರುಮೂರ್ತಿ ಆಶಯ ಭಾಷಣ ಮಾಡುವರು. ಮಧ್ಯಾಹ್ನ 2.30ಕ್ಕೆ ಗ್ರಾಮೀಣ ಸಂಸ್ಕೃತಿ ಸಂರಕ್ಷಣೆ ಮತ್ತು ಅಭಿವೃದ್ಧಿ ಕುರಿತು ಸಂವಾದವನ್ನು ಜಿ.ಪಂ. ಅಧ್ಯಕ್ಷ ಮುದ್ದುರಾಜ್ ಜಾದವ್ ಉದ್ಘಾಟಿಸುವರು. ಪ್ರಸ್ತಾವನೆಯನ್ನು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಬಿ.ಜಯಪ್ರಕಾಶಗೌಡ ಮಾಡುವರು. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದು ತಿಮ್ಮೇಗೌಡ ಹೇಳಿದರು.
ಅದೇ ದಿನ ಸಂಜೆ 5.30ಕ್ಕೆ ಜಾರ್ಖಂಡ್‌ನ ಪದ್ಮಶ್ರೀ ಪಂಡಿತ್ ಗೋಪಾಲ ಪ್ರಸಾದ್ ದುಬೆ ಅವರಿಂದ ಸೆರೈಕೆಲ್ಲಾಚಾವ್ ನೃತ್ಯ, ತಂಜಾವೂರು ಕಲಾವಿದರಿಂದ ಧಿಮ್ಸಾ ನೃತ್ಯ, ಕಲಾರಿಯಪಟ್ಟು ಪ್ರದರ್ಶನ ನಡೆಯಲಿದೆ. ರಾಜ್ಯದ ವಿವಿಧೆಡೆಯ ಕಲಾವಿದರಿಂದ ಬೀಸು ಕಂಸಾಳೆ ನೃತ್ಯ, ಮುಳ್ಳಿನ ಹೆಜ್ಜೆ ಮೇಳ, ವೀರಭದ್ರನ ಕುಣಿತ, ಸಂಬಲ್ ಪುರಿ ಜನಪದ ನೃತ್ಯ ಪ್ರದರ್ಶನಗೊಳ್ಳಲಿದೆ. ಡಾ. ಎಂ.ಭೈರೇಗೌಡ ರಚನೆಯ 'ಕಿನ್ನುಡಿಯ ಬೆಳಕಿನಲ್ಲಿ ಕಾಲಭೈರವ' ನಾಟಕವನ್ನು ರಾಮಕೃಷ್ಣ ಬೆಳತೂರು ನಿರ್ದೇಶನದಲ್ಲಿ ಕಲಾವಿದರು ಅಭಿನಯಿಸುವರು.
ಫೆ.10ರಂದು ಬೆಳಗ್ಗೆ 10.30ಕ್ಕೆ ಜಾನಪದ ಮುನ್ನೋಟ ವಿಷಯವಾಗಿ ಸಂವಾದ ನಡೆಯಲಿದೆ ಎಂದರು.
ಚುಂಚಶ್ರೀ ಸಾನ್ನಿಧ್ಯ:  ಫೆ.10ರಂದು ಸಂಜೆ 5.30ಕ್ಕೆ ನಡೆಯುವ ಉತ್ಸವದ ಸಮಾರೋಪ ಸಮಾರಂಭದಲ್ಲಿ ಆದಿಚುಂಚನಗಿರಿ ಮಠಾಧೀಶ ಶ್ರೀನಿರ್ಮಲಾನಂದ ಸ್ವಾಮೀಜಿ ಸಾನಿಧ್ಯ ವಹಿಸುವರು. ಸಮಾರಂಭದಲ್ಲಿ ಸಂಸದ ಎಚ್.ಡಿ.ಕುಮಾರಸ್ವಾಮಿ ಜ್ಯೋತಿ ಬೆಳಗುವರು. ಶಾಸಕ ಕೆ.ರಾಜು ಅಧ್ಯಕ್ಷತೆ ವಹಿಸಲಿದ್ದು, ಸಚಿವ ಗೋವಿಂದ ಕಾರಜೋಳ  ಪ್ರಶಸ್ತಿ ಪ್ರದಾನ ಮಾಡುವರು. ರಾಜ್ಯಸಭೆ ಸದಸ್ಯೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಬಿ.ಜಯಶ್ರೀ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗೊ.ರು. ಚನ್ನಬಸಪ್ಪ, ಪತ್ರಕರ್ತ ಪದ್ಮರಾಜ ದಂಡಾವತಿ, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ.ಪೊನ್ನಪ್ಪ, ಶ್ರೀ ಜೈವಿಭವ ಸ್ವಾಮೀಜಿ ಭಾಗವಹಿಸುವರು ಎಂದು ತಿಮ್ಮೇಗೌಡ ಹೇಳಿದರು.
ಗೋಷ್ಠಿಯಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಇಂದಿರಾ ಬಾಲಕೃಷ್ಣ ಹಾಜರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com