ಕನಕಪುರ: ಕರ್ನಾಟಕ ನೀರಾವರಿ ವೇದಿಕೆ, ರಾಜ್ಯ ರೈತಸಂಘದ ಆಶ್ರಯದಲ್ಲಿ ಶಾಶ್ವತ ನೀರಾವರಿ ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ತಾಲೂಕಿನಾದ್ಯಂತ 2 ದಿನಗಳಿಂದ ಹಳ್ಳಿಗಳಲ್ಲಿ ಹಾಗೂ ಶಾಲೆಗಳಲ್ಲಿ ನಾಶವಾಗುತ್ತಿರುವ ಪರಿಸರ, ಕಲುಷಿತ ನೀರು ಸೇವನೆ ದುಷ್ಪರಿಣಾಮ, ನೀರಿನ ಸದ್ಬಳಕೆ ಕುರಿತ ಸಾಕ್ಷ್ಯಚಿತ್ರಗಳ ಪ್ರದರ್ಶನ ನಡೆಸಲಾಗುತ್ತಿದೆ. ಅಭಿಯಾನದಲ್ಲಿ ಜಲತಜ್ಞ ಪರಮಶಿವಯ್ಯ ಮಾತನಾಡಿ, ಪಶ್ಚಿಮಘಟ್ಟಗಳ ಪ್ರಮುಖವಾದ 11 ನದಿಗಳಿಂದ 2500 ಸಾವಿರ ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರದ ಪಾಲಾಗುತ್ತಿದೆ.
ಈ ಪೈಕಿ 1 ಭಾಗವನ್ನಾದರೂ ಬಯಲುಸೀಮೆ ಕಡೆಗೆ ಹರಿಸಲು ಯತ್ನಿಸಿದರೆ ಹಲವಾರು ಜಿಲ್ಲೆಗಳ ನೀರಿನ ಬರ ನೀಗಲಿದೆ. ಪರಿಸರಸ್ನೇಹಿ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ಹೇಳಿದರು.