ರಾಮನಗರ: ಕಾವೇರಿ ನದಿ ನೀರು ಹಂಚಿಕೆ ವಿಷಯವಾಗಿ ಪದೇ ಪದೇ ತಗಾದೆ ತೆಗೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಅಣಕು ಶವಯಾತ್ರೆ ನಡೆಸುವ ಮೂಲಕ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಲೋಕೋಪಯೋಗಿ ಕಚೇರಿ ವೃತ್ತದಲ್ಲಿ ಜಯಲಲಿತಾ ಅಣಕು ಶವವನ್ನಿಟ್ಟು ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಪ್ರತಿಭಟನಾಕಾರರು ರಾಜ್ಯದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸುಪ್ರೀಂ ಕೋರ್ಟ್, ಕೇಂದ್ರ ಮತ್ತು ತಮಿಳುನಾಡು ಸರ್ಕಾರ, ಜಯಲಲಿತಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಯಲಲಿತಾ ರಾಜಕೀಯ ದುರುದ್ದೇಶದಿಂದ ಕಾವೇರಿ ನೀರಿಗಾಗಿ ಪದೇ ಪದೇ ಕ್ಯಾತೆ ತೆಗೆಯುತ್ತಲೇ ಇದ್ದಾರೆ. ಕರ್ನಾಟಕವು ಕುಡಿಯುವ ನೀರಿಗಾಗಿ ತೀವ್ರ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲೂ ನೀರಿನ ಪಾಲು ಪಡೆದು, ಖಳನಾಯಕಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಆಕೆಯ ತಗಾದೆಯಿಂದಾಗಿ ಕರ್ನಾಟಕದ ಸ್ಥಿತಿ ಶೋಚನೀಯವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರವು ಜಲ ವಿವಾದದಲ್ಲಿ ಮೊದಲಿಂದಲೂ ಕರ್ನಾಟಕದ ಬಗ್ಗೆ ತಾರತಮ್ಯ ನೀತಿ ಅನುಸರಿಸುತ್ತಲೇ ಬಂದಿವೆ. ರಾಜ್ಯದ ಚುಕ್ಕಾಣಿ ಹಿಡಿದವರು ಕುರ್ಚಿ ಆಸೆಯಿಂದ ಆದೇಶ ಪಾಲಿಸುತ್ತಾ ಕರ್ನಾಕಟದ ಜನತೆಗೆ ಘೋರ ಅನ್ಯಾಯವೆಸಗುತ್ತಿದ್ದಾರೆ. ಇಂತಹ ಹೊಣೆಗೇಡಿಗಳನ್ನು ಜನತೆ ಧಿಕ್ಕರಿಸಬೇಕು ಎಂದು ಘೋಷಣೆ ಕೂಗಿದರು.
ಅಧಿಸೂಚನೆ ಬೇಡ: ಬ್ರಿಟೀಷರ ಕಾಲದಲ್ಲಿ ಆದ ಒಪ್ಪಂದವನ್ನೇ ಆಧಾರವಾಗಿಟ್ಟುಕೊಂಡು ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯವೆಸಗುತ್ತಿರುವುದು ಸರಿಯಲ್ಲ. ಮಳೆ ಅಭಾವದ ಪ್ರಮಾಣ ಹೆಚ್ಚುತ್ತಿರುವುದನ್ನು ಆಧರಿಸಿ ಸೂತ್ರವನ್ನು ಬದಲಿಸಬೇಕು. ಸಂಕಷ್ಟವನ್ನು ಕಾವೇರಿ ಆಶ್ರಿತ ನಾಲ್ಕೂ ರಾಜ್ಯಗಳು ಸಮನಾಗಿ ಹಂಚಿಕೊಳ್ಳುವಂತಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕಾವೇರಿ ನ್ಯಾಯಾಧೀಕರಣದ ಅಂತಿಮ ಆದೇಶ ಸಂಬಂಧ ಫೆ.20ರೊಳಗೆ ಅಧಿಸೂಚನೆ ಹೊರಡಿಸುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿರುವುದು ಅವೈಜ್ಞಾನಿಕವಾಗಿದೆ. ಕರ್ನಾಟಕದ ಪಾಲಿಗೆ ಮರಣ ಶಾಸನವಾಗಲಿರುವ ಐತೀರ್ಪಿನ ಆದೇಶವನ್ನು ಯಾವುದೇ ಕಾರಣಕ್ಕೂ ಗೆಜೆಟ್ನಲ್ಲಿ ಪ್ರಕಟಿಸಬಾರದು ಎಂದು ಅವರು ಆಗ್ರಹಿಸಿದರು.
ಪದತ್ಯಾಗಕ್ಕೆ ಒತ್ತಾಯ: ಐತೀರ್ಪಿನ ಅಧಿಸೂಚನೆ ಹೊರಡಿಸುವುದನ್ನು ವಿರೋಧಿಸಿ ರಾಜ್ಯದ ಎಲ್ಲ ಸಂಸದರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಬೇಕು. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ತಕ್ಷಣವೇ ರಾಜ್ಯ ಸರ್ಕಾರದ ವಿಸರ್ಜನೆಗೆ ಶಿಫಾರಸು ಮಾಡಿ, ಕಡೆ ಹಂತದಲ್ಲಾದರೂ ರಾಜ್ಯದ ಪರ ಹೋರಾಟಕ್ಕೆ ಧುಮುಕಬೇಕು ಎಂದು ಪ್ರತಿಭಟನಾಕಾರರು ತಿಳಿಸಿದರು.
ಅಧಿಸೂಚನೆ ಹೊರಡಿಸುವುದಕ್ಕೂ ಮುನ್ನವೇ ರಾಜ್ಯದ ಜನತೆ ಎಚ್ಚೆತ್ತುಕೊಂಡು, ಹೋರಾಟಕ್ಕೆ ಧುಮುಕಬೇಕು ಎಂದು ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ರಮೇಶಗೌಡ ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಬೇವೂರು ಯೋಗೇಶ್, ಶಂಕರ್, ಲಕ್ಷ್ಮಮ್ಮ, ಮಂಗಳಮ್ಮ ಮತ್ತಿತರರು ಭಾಗವಹಿಸಿದ್ದರು.