ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಶಾಸಕ ಜೆ.ನರಸಿಂಹಸ್ವಾಮಿ ಇಡೀ ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡುಗಳಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಜನಸ್ನೇಹಿ ಕಾಳಜಿ ಮೆರೆದು ಅಚ್ಚರಿಗೆ ಕಾರಣರಾಗಿದ್ದಾರೆ. ಗುರುವಾರ ಬೆಳಗ್ಗೆ ಅವರು ಇಲ್ಲಿನ ದೇವಾಂಗಪೇಟೆಯಲ್ಲಿ ನಗರಸಭೆ, ಜಲ ಮಂಡಲಿ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮಂಡಲಿ ಸಹಯೋಗದಲ್ಲಿ ನಿರ್ಮಿಸಿರುವ ಬೃಹತ್ ಓವರ್ಹೆಡ್ ಟ್ಯಾಂಕ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಗರದಲ್ಲಿ ಉದ್ಭವಿಸಿರುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಸಮರೋಪಾದಿಯಲ್ಲಿ ಕಾರ್ಯೋನ್ಮುಖರಾಗಬೇಕಿದೆ. ಹಲವು ವಾರ್ಡ್ಗಳಲ್ಲಿ 10 ದಿನಕ್ಕೊಮ್ಮೆ ನೀರು ಬಿಡಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಜಲಮೂಲಗಳಲ್ಲಿ ನೀರಿನ ಲಭ್ಯತೆ ಇಲ್ಲದಿರುವುದೇ ಇದಕ್ಕೆ ಮೂಲ ಕಾರಣ. ಇದರಿಂದಾಗಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ನೀರಿನ ಬವಣೆಯನ್ನು ಪರಿಹರಿಸಲು ನಗರಸಭೆ ಕೂಡಲೇ ಕಾರ್ಯಪ್ರವೃತ್ತವಾಗಬೇಕು ಎಂದರು.
ಉದ್ಘಾಟನೆ: ನಗರಸಭೆ ವ್ಯಾಪ್ತಿಯ 31 ವಾರ್ಡ್ಗಳಿಗೆ ಪ್ರತಿ ವಾರ್ಡಿಗೊಂದರಂತೆ ಉಚಿತ ನೀರು ಪೂರೈಕೆ ಟ್ಯಾಂಕರ್ಗಳನ್ನು ನಿಯೋಜಿಸಬೇಕು. ಈ ಬಗ್ಗೆ ನಗರಸಭೆ ಆಯುಕ್ತರಿಗೆ ಸ್ಪಷ್ಟ ಆದೇಶ ನೀಡಿದ್ದೇನೆ. ಜಿಲ್ಲಾಧಿಕಾರಿಗಳಿಂದ ಟ್ಯಾಂಕರ್ ಖರೀದಿಗೆ ಸಹಕಾರ ನೀಡುವಂತೆ ಪ್ರಸ್ತಾಪಿಸುವುದಾಗಿದೆ ಹೇಳಿದ ಅವರು, ಪ್ರಸ್ತುತ ನೀರಿನ ಸಮಸ್ಯೆ ತೀರಾ ಬಿಗಡಾಯಿಸಿದ್ದು, ಜನ ಲಭ್ಯ ನೀರನ್ನು ಮಿತವಾಗಿ ಬಳಕೆ ಮಾಡಿಕೊಳ್ಳುವತ್ತ ಆಸಕ್ತಿ ವಹಿಸಬೇಕು. ಈ ಹಂತದಲ್ಲಿ ಸುಮಾರು 5 ಲಕ್ಷ ಲೀಟರ್ ಸಾಮರ್ಥ್ಯದ ಈ ಓವರ್ಹೆಡ್ ಟ್ಯಾಂಕನ್ನು ಇಂದು ಉದ್ಘಾಟಿಸಲಾಗುತ್ತಿದೆ ಎಂದರು.