ರಾಮನಗರ: ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹತ್ತು ದಿನದ ಹಿಂದೆ ಸಂಭವಿಸಿದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಯತ್ನ ಪ್ರಕರಣ ಕಗ್ಗಂಟಾಗಿ ಪರಿಣಮಿಸಿದೆ. ಯುವತಿ ವಿಳಾಸ ಮತ್ತು ಆರೋಪಿಗಳ ಪತ್ತೆಗೆ ಪೊಲೀಸರ ಹರಸಾಹಸ ಮುಂದುವರೆದಿದೆ.
ಬೆಂಗಳೂರಿನ ಸಿಂಡಿಕೇಟ್ ಕಾಲೋನಿ ಸಮೀಪದ ಆಟದ ಮೈದಾನದಲ್ಲಿ ಫೆ.3ರ ಮಧ್ಯರಾತ್ರಿ ದುಷ್ಕರ್ಮಿಗಳು 23ರ ಯುವತಿ ಮೇಲೆ ಅತ್ಯಾಚಾರವೆಸಗಿ, ಆಕೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೆ ಯತ್ನಿಸಿದ್ದರು.
ರಕ್ತದ ಮಡುವಿನಲ್ಲಿ ಪ್ರಜ್ಞಾನಹೀನ ಸ್ಥಿತಿಯಲ್ಲಿದ್ದ ಆಕೆಯನ್ನು ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು.
ಕೋಮಾವಸ್ಥೆಯಲ್ಲಿರುವ ಯುವತಿಗೆ ಚಿಕಿತ್ಸೆ ಮುಂದುವರೆದಿದೆ. ಈವರೆಗೆ ಆಕೆಯ ವಿಳಾಸ ಪತ್ತೆಯಾಗಿಲ್ಲ. ಯುವತಿಯು ಹೊರ ರಾಜ್ಯದವಳಾಗಿರುವ ಸಾಧ್ಯತೆ ಇದ್ದು, ಘಟನೆಯ ಸತ್ಯಾಸತ್ಯತೆಯು ಆಕೆಗೆ ಪ್ರಜ್ಞೆ ಮರಳಿದ ಬಳಿಕವಷ್ಟೇ ಹೊರಬೀಳಲಿದೆ.
ಅನುಮಾನಾಸ್ಪದರ ವಿಚಾರಣೆ: ದೆಹಲಿಯ ಗ್ಯಾಂಗ್ ರೇಪ್ ಪ್ರಕರಣವಿನ್ನೂ ಹಸಿಯಾಗಿರುವಾಗಲೇ ಸಂಭವಿಸಿರುವ ಈ ಘಟನೆಯು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಕರಣ ಪ್ರತಿಧ್ವನಿಸಿದ್ದು, ಬೆಂಗಳೂರು ಮತ್ತು ರಾಮನಗರದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಕಾವೇರಿದೆ.
ಇದೆಲ್ಲದರ ಬಳಿಕ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದು, ಅನುಮಾನದ ಮೇರೆಗೆ ಇಲ್ಲಿವರೆಗೆ ಐದು ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಇಲ್ಲೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಲಾಗಿದೆ.
ಅಧಿಕಾರಿಗಳ ಭೇಟಿ: ಘಟನೆ ಸಂಭವಿಸಿದ ಸ್ಥಳಕ್ಕೆ ಬೆಂಗಳೂರು ವಲಯ ಐಜಿಪಿ ಅಮರ್ ಕುಮಾರ್ ಪಾಂಡೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ನೇತೃತ್ವದ ಅಧಿಕಾರಿಗಳ ತಂಡವು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಸ್ಥಳ ಪರಿಶೀಲನೆ ಬಳಿಕ ಉನ್ನತ ಅಧಿಕಾರಿಗಳು ಪ್ರಕರಣದ ತನಿಖೆ ಕೈಗೊಂಡಿರುವ ಮಾಗಡಿ, ತಾವರೆಕರೆ ಪೊಲೀಸರು, ಬ್ಯಾಡರಹಳ್ಳಿ ಔಟ್ ಪೋಸ್ಟ್ ಸಿಬ್ಬಂದಿಯೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.
ತಕ್ಷಣ ಪ್ರಕರಣ ಭೇದಿಸಿ, ಆರೋಪಿಗಳನ್ನು ಬಂಧಿಸುವಂತೆ ಆದೇಶಿಸಿದ್ದಾರೆ.