ಕನ್ನಡಪ್ರಭ ವಾರ್ತೆ ಸೂಲಿಬೆಲೆ ಮಾ.28-
ನಂದಗುಡಿ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ನಡೆಯುತ್ತಿರುವ ಫಿಲ್ಟರ್ ಮರಳು ಗಣಿಗಾರಿಕೆಯಿಂದ ಈ ಭಾಗದ ಜನರಿಗೆ ನೀರು ಅಭಾವ ಉಂಟಾಗಿದ್ದು, ಬರುವ ನೀರಿನಲ್ಲಿ ಫ್ಲೋರೈಡ್ ಅಂಶ ಕಂಡು ಬರುತ್ತಿರುವುದು ಜನರನ್ನು ಕಳವಳಕ್ಕೀಡುಮಾಡಿದೆ. ಈ ಮಧ್ಯೆ ಬೇಸಿಗೆಯ ಧಗೆಯಿಂದ ಜನ, ಜಾನುವಾರುಗಳು ತತ್ತರಿಸಿವೆ.
ನಂದಗುಡಿ ಗ್ರಾಪಂ ವ್ಯಾಪ್ತಿಯ ಬೈಲುನರಸಾಪುರ, ಹೊಸಹಳ್ಳಿ, ಅರೇಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಕಳೆದ ಕೆಲ ವರ್ಷಗಳಿಂದ ಫಿಲ್ಟರ್ ಮರಳು ತಯಾರಿಕೆ ಮಾಡುತ್ತಿದ್ದು ಅಂತರ್ಜಲ ವೃದ್ಧಿಗೆ ಅಪಾಯಕಾರಿಯಾಗಿ ಪರಿಣಿಮಿಸಿದೆ. 9100 ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಆಗಾದತೆ ಕಾಡುತ್ತಿದ್ದು, ಬೆರಳು ಗಾತ್ರ ಸೋರುವ ನೀರನ್ನು ಹಿಡಿಯಲು ಗಂಟೆಗಟ್ಟಲೇ ಮಹಿಳೆಯರು ಟ್ಯಾಂಕ್ ಬಳಿ ಕಾಯಬೇಕಿದೆ. ಇದೇ ಹೋಬಳಿಯ ಇಟ್ಟಸಂದ್ರ ಗ್ರಾಪಂ ವ್ಯಾಪ್ತಿಗೆ ಬರುವ 10 ಗ್ರಾಮಗಳಲ್ಲಿ ಹಿಂಡಿಗನಾಳ, ಅನುಪಹಳ್ಳಿಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಮಹಿಳೆಯರು, ಮಕ್ಕಳು ಖಾಲಿ ಬಿಂದಿಗಳನ್ನು ಹೊತ್ತು ಅಲೆಯುತ್ತಿದ್ದಾರೆ. ಪ್ರಾಣಿಗಳ ಸ್ಥಿತಿ ಅತಿ ಘೋರವಾಗಿದೆ. ನೆರವಾಗಿಲು ಗ್ರಾಪಂ ವ್ಯಾಪ್ತಿಯಲ್ಲಿ ನೇಕಾರಿಕೆ, ಕೃಷಿಯನ್ನು ನಂಬಿಕೊಂಡವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ದಳಸೆಗೆರೆ, ಅರೇಹಳ್ಳಿತರಬಹಳ್ಳಿ, ಸಿದ್ದನಹಳ್ಳಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಅಗತ್ಯವಿರುವ ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜಾಗುತ್ತಿದ್ದು, ನೀರು ಸಾಲದೆ ಆನೆ ಹೊಟ್ಟೆಗೆ ಅರೆಕಾಸು ಮಜ್ಜಿಗೆ ಎನ್ನುವಂತಾಗಿದೆ. ಶಿವನಾಪುರ ಗ್ರಾಪಂ ವ್ಯಾಪ್ತಿಯ ಕರಪನಹಳ್ಳಿ ಗ್ರಾಮದ ಸುತ್ತಮುತ್ತ ಕೊಳುವೆ ಬಾವಿಗಳಲ್ಲಿ ಪ್ಲೋರೈಡ್ ಅಂಶ ಪತ್ತೆಯಾಗುತ್ತಿದ್ದು, ಜನರು ಇದನ್ನೇ ಕುಡಿದು ರೋಗಗಳಿಗೆ ತುತ್ತಾಗಬೇಕಿದೆ.