ವಿಜಯಪುರ: ಅಂತರರಾಜ್ಯ ಮಟ್ಟದ ಕೋಳಿ ಪಂದ್ಯ ನಡೆಸುತ್ತಿದ್ದ ಗುಂಪಿನ ಮೇಲೆ ದಾಳಿ ನಡೆಸಿದ ಪೋಲಿಸರು 110 ಮಂದಿಯನ್ನು ಬಂಧಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣ ಸಮೀಪದ ಪುರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪಿ.ಮಂಜುನಾಥ್ ಅವರಿಗೆ ಸೇರಿದ ರೇಷ್ಮೆ ಹುಳು ಸಾಕಾಣಿಕೆ ಶೆಡ್‌ನಲ್ಲಿ ಕೋಳಿ ಪಂದ್ಯ ನಡೆಸಲಾಗುತ್ತಿತ್ತು. ಕೋಳಿ ಪಂದ್ಯ ನಡೆಯುತ್ತಿರುವ ಕುರಿತು ನಿಖರ ಮಾಹಿತಿ ಪಡೆದ ವಿಜಯಪುರ ಪೊಲೀಸ್ ಠಾಣೆ ಸಬ್ ಇನ್ಸಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. 14 ಕೋಳಿಗಳೊಂದಿಗೆ ಆಂಧ್ರ, ತಮಿಳುನಾಡು ಹಾಗೂ ರಾಜ್ಯದ ನೂರಾರು ಮಂದಿ ಜೂಜುಕೋರರನ್ನು ಬಂಧಿಸಲಾಗಿದೆ. ರು. 1,80,800 ಕ್ಕೂ ಹೆಚ್ಚು ಹಣ, 16 ದ್ವಿಚಕ್ರ ವಾಹನ, 1 ಟಾಟಾ ಸುಮೊ, 50 ಮೊಬೈಲ್‌ಗಳನ್ನು ದಾಳಿ ವೇಳೆ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಸೂಪರಿಟೆಂಡೆಂಟ್ ಎನ್.ನಾಗರಾಜ್ ಅವರ ಮಾರ್ಗದರ್ಶನದಲ್ಲಿ ತನಿಖೆ ಕೈಗೊಳ್ಳಲಾಗಿದೆ.
ವಿದೇಶಿ ಹಣ: ಜೂಜಿನಲ್ಲಿ ಲಕ್ಷಾಂತರ ರು. ಮೌಲ್ಯದ ಅಮೆರಿಕ, ನೇಪಾಳ, ದುಬೈ ದೇಶಗಳ 13 ನೋಟುಗಳು ಬಳಕೆಯಾಗಿರುವುದು ತಿಳಿದು ಬಂದಿದೆ.
Advertisement