ಕನ್ನಡಪ್ರಭವಾರ್ತೆ ನೆಲಮಂಗಲ ನ.5
ಸಮಾಜದಲ್ಲಿ ಇತ್ತೀಚೆಗೆ ಧಾರ್ಮಿಕಾಚರಣೆಯ ಮೌಢ್ಯತೆಯಲ್ಲಿ ದೇವರ ಬಗೆಗಿನ ಕಲ್ಪನೆ ಕಣ್ಮರೆಯಾಗುತ್ತಿದೆ. ಕೇವಲ ಆಡಂಬರ ಹೆಗ್ಗಳಿಕೆಗಳಿಗೆ ಜನ ಮಾರು ಹೋಗುತ್ತಿರುವುದು ವಿಷಾದನೀಯ ಎಂದು ಶಿವಗಂಗೆ ಮೇಲಣಗವಿ ಮಠದ ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ತಾಲೂಕಿನ ಸೋಂಪುರ ಹೋಬಳಿ ಗೋವಿಂದಪುರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಶ್ರೀ ಕಲ್ಯಾಣ ವೆಂಕಟೇಶ್ವರಸ್ವಾಮಿ ದೇವಾಲಯದ ಗೋಪುರ ಉದ್ಘಾಟನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಬಹುದೂರದ ಸೂರ್ಯ, ಚಂದ್ರ ಹಾಗೂ ಮಂಗಳನನ್ನು ಕಂಡುಕೊಳ್ಳುವ ನಾವು ನಮ್ಮ ತನವನ್ನು ಕಂಡುಕೊಳ್ಳಲಾಗದಂತಾಗಿದೆ. ಕೇವಲ ಭೌತಿಕ ಸಂಪತ್ತನ್ನು ಅವಲಂಬಿಸಿದ ದೇಶ ನಮ್ಮದಲ್ಲ. ಧಾರ್ಮಿಕ ಸಂಪತ್ತು ಹಾಗೂ ಸಂಸ್ಕೃತಿಯ ಮೇಲೆ ದೇಶ ಬಲಿಷ್ಠವಾಗಿದೆ. ಪಾಶ್ಚಾತ್ಯರು ಸಾಂಸ್ಕೃತಿಕ ಧಾಮಿಕ ಹಾಗೂ ಭೌತಿಕವಾಗಿ ದಾಳಿ ಮಾಡಿದರೂ ದೇಶದ ಸಂಪತ್ತು ಕುಂದಿಲ್ಲ. ದೇಶದ ಜನತೆಯ ಭಕ್ತಿ ಮನೋಭಾವನೆ ಸಂಸೃತಿಯನ್ನು ಇಡೀ ಪ್ರಪಂಚವೇ ಗೌರವಿಸುತ್ತದೆ ಎಂದರು.
ದೇವಾಲಯಗಳು ಚಿಕ್ಕದಾದರೇನಂತೆ ಸೇವೆಗೈಯುವ ಮನಸ್ಸು ದೊಡ್ಡದಾಗಿರಬೇಕು, ಭಗವಂತ ಪ್ರತಿಯೊಬ್ಬರ ಮನಸ್ಸಿನಲ್ಲಿದ್ದಾನೆ ಎಂಬುದನ್ನು ಅರಿಯಬೇಕು. ದೇವರ ಕೊಡುಗೆಯಲ್ಲಿ ಭೇದ ಭಾವನೆಗಳಿಲ್ಲ. ಎಲ್ಲವನ್ನೂ ಕಳೆದುಕೊಂಡ ನಂತರ ದೇವರನ್ನು ಸ್ಮರಿಸುವುದನ್ನು ಬಿಟ್ಟು ತಮ್ಮ ಬಳಿ ಎಲ್ಲವೂ ಇರುವಾಗಲೇ ಸ್ಮರಿಸಿ ಎಂದರು.
ಶ್ರೀ ಕಲ್ಯಾಣ ವೆಂಕಟೇಶ್ವರಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ವಿ. ರಾಜಣ್ಣ ಮಾತನಾಡಿ ಯುವ ಪೀಳಿಗೆ ಪಾಶ್ಚಾತ್ಯ ಅನುಕರಣೆಗೆ ಮುಂದಾಗಿದೆ. ಎಲ್ಲರು ಶೈಕ್ಷಣಿಕ ಪ್ರಗತಿಗೆ ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ಯುವಕರು ದೇವಾಲಯಗಳ ಬಗ್ಗೆ ಕಾಳಜಿ ವಹಿಸಿ ಜೀರ್ಣೋದ್ಧಾರಗೊಳಿಸುವ ಮೂಲಕ ಸಂಸ್ಕೃತಿಯನ್ನು ಅಳವಡಿಸಿಕೊಂಡು ಸಂಸ್ಕಾರವಂತರಾಗಿ ಎಂದು ತಿಳಿಸಿದರು. ಶ್ರೀ ವನಕಲ್ಲು ಮಲ್ಲೇಶ್ವರದ ಬಸವರಮಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಜಿ.ಪಂ.ಮಾಜಿ ಸದಸ್ಯ ಟಿ.ವೆಂಕಟೇಶಯ್ಯ, ತಾ.ಪಂ.ಸದಸ್ಯರಾದ ಹನುಮಕ್ಕ, ಭಾಗ್ಯಮ್ಮ, ಉಪಾಧ್ಯಕ್ಷ ರಾಮಾಂಜಿನೇಯ, ಟ್ರಸ್ಟ್‌ನ ಕಾರ್ಯಾಧ್ಯಕ್ಷ ವಿ.ಲಕ್ಷ್ಮೀನಾರಾಯಣ, ಗೌರವಾಧ್ಯಕ್ಷ ಟಿ.ವೆಂಕಟೇಶಯ್ಯ, ಉಪಾಧ್ಯಕ್ಷ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಯೋಗಾನಂದ, ಜಿ.ಎಸ್.ಮೋಹನ್‌ಕುಮಾರ್, ಎಚ್.ಎಲ್. ಚಂದ್ರಶೇಖರ್, ವೆಂಕಟಮ್ಮ, ಅನುಸೂಯ, ದೇವರಾಜ್ ಇದ್ದರು.
Advertisement