ಚನ್ನಪಟ್ಟಣ: ಪ್ರತಿಯೊಬ್ಬ ವ್ಯಕ್ತಿಯೂ ಮನುಷ್ಯನಾಗೇ ಬದುಕಬೇಕೆಂಬುದು ನೈಸರ್ಗಿಕ ನಿಯಮ ಮತ್ತು ಕಾನೂನಿನ ಆಶಯವಾಗಿದೆ ಎಂದು ಹಿರಿಯ ನ್ಯಾಯಾಧೀಶ ಕಿರಣ್ಕಿಣಿ ತಿಳಿಸಿದರು.
ಪಟ್ಟಣದ ನೂತನ ನ್ಯಾಯಾಲಯ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ನಿರತರಾಗಿರುವ ಕಟ್ಟಡ ಕಾರ್ಮಿಕರಿಗೆ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ಶಿಬಿರ ಮತ್ತು ಕಾರ್ಮಿಕರ ಗುರುತಿನ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಆರ್ಥಿಕ ಸ್ಥಿತಿ, ಕೆಲಮಂದಿಯ ಶೋಷಣೆಯಿಂದಾಗಿ ಕಾರ್ಮಿಕವರ್ಗಕ್ಕೆ ಸೂಕ್ತ ಅವಕಾಶಗಳು ಸಿಗದೆ ಸಮಸ್ಯೆಯಲ್ಲಿ ಸಿಲುಕಿದ್ದು ಇದರ ನಿವಾರಣೆಗೆ ಕಾರ್ಮಿಕರಿಗೆ ಕಾನೂನಿನಡಿ ರಕ್ಷಣೆ ನೀಡಲಾಗುತ್ತಿದೆ ಎಂದರು. ಸರ್ಕಾರ ಸಾಕಷ್ಟು ಕಾನೂನುಗಳನ್ನು ಜಾರಿಗೆ ತಂದಿದ್ದು, ಕಾರ್ಮಿಕರಿಗೆ ಕಾನೂನು ಸೇವಾಸಮಿತಿಯ ವತಿಯಿಂದ ಉಚಿತವಾಗಿ ಕಾನೂನು ನೆರವು ನೀಡಲಾಗುವುದು. ಕೆಲಸದ ವೇಳೆ ಅತಾಚುರ್ಯ ಸಂಭವಿಸಿ ಕಾರ್ಮಿಕರಿಗೆ ಸಮಸ್ಯೆಯಾದಾಗಾ ಕಾನೂನಾತ್ಮಕವಾಗಿ ಪರಿಹಾರ ದೊರಕಲಿದ್ದು ಕಾರ್ಮಿಕರು ಕಾನೂನು ಜ್ಞಾನವನ್ನು ಪಡೆದು ಕೊಳ್ಳ ಬೇಕೆಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಧಾನ ಸಿವಿಲ್ ನ್ಯಾಯಾಧೀಶ ನಾಗೇಶ್ ಮೂರ್ತಿ ಮಾತನಾಡಿ, ಕಾರ್ಮಿಕರ ಬೆವರು ಸುರಿಸಿ ಕಟ್ಟಡಗಳನ್ನು ನಿರ್ಮಿಸುತ್ತಾರಾದರೂ ಅವರ ಬದುಕನ್ನು ಕಟ್ಟಿಕೊಳ್ಳುವಲ್ಲಿ ವಿಫಲಗೊಂಡಿದ್ದಾರೆ. ಅವರಿಗೂ ಇತರ ರಂತೆ ಸಮಾಜದಲ್ಲಿ ನ್ಯಾಯಯುತ ಜೀವನ ನಡೆಸುವ ಅವಕಾಶ ದೊರಕಿಸಿ ಕೊಡಲು ಕಾನೂನು ಸಹಕರಿಸುತ್ತಿದೆ ಎಂದರು.
37 ಲಕ್ಷ ಹಣ ಬಿಡುಗಡೆ: ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ಮಿಕ ಇಲಾಖೆ ಅಧಿಕಾರಿ ನಾಗರಾಜು ಮಾತನಾಡಿ, ಜಿಲ್ಲೆಯಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಈ ವರ್ಷ 37 ಲಕ್ಷ ರೂ. ಹಣವನ್ನು ಬಿಡುಗಡೆ ಮಾಡಿದ್ದು, ಕಾರ್ಮಿಕರ ಕಲ್ಯಾಣಕ್ಕಾಗಿ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಕಾರ್ಮಿಕರು 5ದಿನಕ್ಕಿಂತ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾದರೆ 5ಸಾವಿರ, ಮಕ್ಕಳ ಮದುವೆಗೆ 50 ಸಾವಿರ, ಮೃತರಾದಲ್ಲಿ ಅಂತ್ಯ ಸಂಸ್ಕಾರದ ಖರ್ಚಿಗೆಂದು 54 ಸಾವಿರ, ಮನೆ ನಿರ್ಮಾಣಕ್ಕೆ 2ಲಕ್ಷ ರೂ. ಹೀಗೆ ಸಾಕಷ್ಟು ಅನುಕೂಲ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ನಮ್ಮ ದೇಶದಲ್ಲಿ ಶೆ.10 ರಷ್ಟು ಮಾತ್ರ ಸಂಘಟಿತ ಕಾರ್ಮಿಕರಿದ್ದು, ಉಳಿದ ಶೇ.90ರಷ್ಟು ಅಸಂಘಟಿತ ಕಾರ್ಮಿಕರು ಇಲಾಖೆಯ ಸೌಲಭ್ಯ ದೊರಕದೆ ಪರದಾಡುವಂತಾಗಿದೆ. ಇಂತಹ ಕಾರ್ಮಿಕರನ್ನು ಗುರುತಿಸಲು ನಮ್ಮ ಇಲಾಖೆ ಶ್ರಮಿಸುತ್ತಿದ್ದು ರಾಮನಗರ ಜಿಲ್ಲೆಯಲ್ಲಿ 17 ಸಾವಿರ ಅಸಂಘಟಿತ ಕಾರ್ಮಿಕರನ್ನು ಗುರುತಿಸಲಾಗಿದೆ.
ಇನ್ನೂ ಹೆಚ್ಚಿನ ಕಾರ್ಮಿಕರನ್ನು ನೋಂದಣಿ ಮಾಡಿಸಲು ಇಲಾಖೆ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಫಿಲಿಕ್ಸ್ ಅಂಥೋನಿ, ಸರ್ಕಾರಿ ಸಹಾಯಕ ಅಭಿಯೋಜಕ ತಾರಾನಾಥ್, ಜಯಪ್ರಕಾಶ್, ವಕೀಲರ ಸಂಘದ ಅಧ್ಯಕ್ಷ ಹನುಮಂತು, ಹಿರಿಯ ವಕೀಲ ಟಿ.ಎಂ.ಲಕ್ಷ್ಮಣ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
Advertisement