ರಾಮನಗರ: ಬಾಯ್ತೆರೆದು ಬಲಿಗಾಗಿ ಕಾಯುತ್ತಿರುವ ಕೊಳವೆ ಬಾವಿಗೆ ಸಾಧಾರಣ ಗಾತ್ರದ ಕಲ್ಲೊಂದನ್ನು ಅಡ್ಡಲಾಗಿಟ್ಟು ಮರೆಮಾಚುವ ಮೂಲಕ ಮತ್ತಷ್ಟು ಅಪಾಯ ತಂದೊಡ್ಡಿರುವ ಕೆಲಸ ಬೆಂಗಳೂರು-ಮೈಸೂರು ಹೆದ್ದಾರಿಯ ಮಗ್ಗುಲಲ್ಲೇ ನಡೆದಿದೆ.
ಚನ್ನಪಟ್ಟಣ ತಾಲೂಕಿನ ಮುದಗೆರೆ ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಶಿವಳ್ಳಿ ರೆಸ್ಟೋರೆಂಟ್ ಎದುರಲ್ಲೇ ಈ ಮೃತ್ಯು ಕೂಪವಿದೆ. ಈ ವಿಫಲ ಕೊಳವೆ ಬಾವಿ ಇರುವುದು ಚತುಷ್ಪಥ ಹೆದ್ದಾರಿಯಿಂದ ಆರೇಳು ಮೀಟರ್ ದೂರದಲ್ಲಷ್ಟೇ. ಕುಡಿಯುವ ನೀರು ಸರಬರಾಜಿಗಾಗಿ 3 ತಿಂಗಳ ಹಿಂದೆ ಕೊರೆಸಲಾಗಿತ್ತು. 800 ಅಡಿ ಆಳದ ಕೊಳವೆ ಬಾವಿಯನ್ನು ಕೊರೆದ ಏಜೆನ್ಸಿಯವರಾಗಲೀ, ಸ್ಥಳೀಯ ಅಧಿಕಾರಿಗಳಾಗಲೀ ಮುಚ್ಚಿಸುವ ಗೋಜಿಗೆ ಹೋಗಿಲ್ಲ. ಮೇಲೊಂದು ಕಲ್ಲನ್ನಿಟ್ಟು ಮರೆಮಾಚುವ ಕೆಲಸವನ್ನಷ್ಟೇ ಮಾಡಿದ್ದಾರೆ.
ಹೋಟೆಲ್ ಹಾಗೂ ವಾಣಿಜ್ಯ ಮಳಿಗೆಗಳು ಮುದುಗೆರೆ ಗ್ರಾ.ಪಂ.ಗೆ ಸಂಪನ್ಮೂಲದ ಮೂಲಗಳಾಗಿವೆ. ನಿತ್ಯ ಸಹಸ್ರಾರು ಪ್ರಯಾಣಿಕರು ಇಲ್ಲಿಗೆ ಬಂದು ಹೋಗುತ್ತಾರೆ. ನೀರು ಬಾರದೆ ವಿಫಲವಾಗಿರುವ ಆಸುಪಾಸಿನಲ್ಲಿರುವ ಶಾಲೆಗಳಿಗೆ ಇದೇ ಮಾರ್ಗವಾಗಿ ಮಕ್ಕಳು ತೆರಳುತ್ತಾರೆ. ಹೊಟೇಲ್ಗಳಿಗೆ ಪೋಷಕರೊಂದಿಗೆ ಬಂದಿಳಿಯುವ ಮಕ್ಕಳು ಬಹಿರ್ದೆಸೆಗೆಂದು ಅಪ್ಪಿತಪ್ಪಿ ರಸ್ತೆ ದಾಟಿದಾಗ ಕಾಲಿಟ್ಟರೆ ಕಲ್ಲು ಜಾರಿ ಕೊಳವೆ ಬಾವಿಗೆ ಬೀಳುವ ಅಪಾಯವಿದೆ.
ಮತ್ತೀಕೆರೆ ಜಯರಾಮ್
Advertisement