ಸೂಲಿಬೆಲೆ: ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಶಾಲೆ ಮಕ್ಕಳ ಕಲಿಕಾ ಪ್ರಗತಿಗೆ ಪ್ರೋತ್ಸಾಹಿಸಲು ದಾನಿಗಳ ಸಹಕಾರ ಅಗತ್ಯವಾಗಿದೆ. ದಾನಿಗಳು ಕೊಟ್ಟ ಸೌಲಭ್ಯಗಳನ್ನು ಬಳಿಸಿಕೊಂಡು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದುವರೆಯಬೇಕು ಎಂದು ಮಾನವ ಹಕ್ಕುಗಳು ರಾಜ್ಯಾಧ್ಯಕ್ಷ ಸಮೇತನಹಳ್ಳಿ ಲಕ್ಷ್ಮಣ್ ಸಿಂಗ್ ಹೇಳಿದ್ದಾರೆ.ಸೂಲಿಬೆಲೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಹೋಬಳಿ ಘಟಕದಿಂದ ಹಮ್ಮಿಕೊಂಡಿದ್ದ ಉಚಿತ ಕಲಿಕಾ ಸಾಮಗ್ರಿಗಳ ವಿತರಣೆ ಮಾಡಿ ಮಾತನಾಡಿದರು.ಹೋಬಳಿ ಮಹಿಳಾ ಘಟಕ ಅಧ್ಯಕ್ಷೆ ರಾಜೇಶ್ವರಿ ಶಿವಣ್ಣ ಮಾತನಾಡಿದರು.ವಿದ್ಯಾರ್ಥಿಗಳಿಗೆ ನಾನಾ ರೀತಿಯ ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.ಶಿಕ್ಷಕರು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಮಾಜಿಕ ಸೇವೆಯನ್ನು ಸಲ್ಲಿಸಿದ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು.ಹೋಬಳಿ ಅಧ್ಯಕ್ಷ ಎಂ.ಆರ್ ಉಮೇಶ್, ತಾಲೂಕು ಅಧ್ಯಕ್ಷ ರಾಮಾಂಜಿನಿ ಗೌಡ,ತಾ.ಮಹಿಳಾ ಘಟಕ ಅಧ್ಯಕ್ಷೆ ಸುಜಾತ ರವೀಂದ್ರ, ರಾಜ್ಯ ಸಂಘಟನೆ ಕಾರ್ಯದರ್ಶಿ ನಾಗರಾಜ್ ಗೌಳಿ, ದೇವನಹಳ್ಳಿ ತಾ.ನಾಣಿ, ಬ್ಯಾಟರಾಯನಪುರ ಕ್ಷೇತ್ರದ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷೆ ಹೇಮಾವತಿ, ಸುನೀತಾ ಉಮೇಶ್, ವೀಣಾ ಮೊದಲಾದವರು ಹಾಜರಿದ್ದರು.
ಕ್ರೀಡಾಗೆ ಪ್ರೋತ್ಸಾಹ ಅಗತ್ಯ
ಹೊಸಕೋಟೆ: ಪೋಷಕರು ಮಕ್ಕಳ ಕ್ರೀಡಾ ಚಟುವಟಿಕೆಗೆ ಅಗತ್ಯ ಪ್ರೋತ್ಸಾಹ ನೀಡಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಡಿ.ಟಿ.ವೆಂಕಟೇಶ್ ಹೇಳಿದರು. ಪಟ್ಟಣದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ದೈಹಿಕ ಶಿಕ್ಷಣ ಸಂಯೋಜಕ ರಹಮತುಲ್ಲಾ ಖಾನ್, ಸರಕಾರಿ ಬಾಲಕರ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ, ಮುಖ್ಯ ಶಿಕ್ಷಕಿ ಶಾಂತಕುಮಾರಿ ಮುಂತಾದವರು ಭಾಗವಹಿಸಿದ್ದರು.ಪಟ್ಟಣದ ವ್ಯಾಪ್ತಿಯ 32 ಪ್ರಥಮಿಕ, ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಅಭಿಯಾನಕ್ಕೆ ಚಾಲನೆ
ಹೊಸಕೋಟೆ: ತಾಲೂಕಿನ ಕುಂಬಳಹಳ್ಳಿಯಲ್ಲಿ ತಾಲೂಕು ತಿಗಳರ ಸಂಘದ ಸದಸ್ಯತ್ವ ಅಭಿಯಾನಕ್ಕೆ ಗೌರವಾಧ್ಯಕ್ಷ ಎಚ್.ಜೆ.ಶ್ರೀನಿವಾಸ್ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಸಂಘಟನೆಯ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು. ತಾಲೂಕು ಅಧ್ಯಕ್ಷ, ರಾಜ್ಯ ತಿಗಳರ ಸಂಘದ ನಿರ್ದೇಶಕ ಸಿ.ಮುನಿಯಪ್ಪ, ಪದಾಧಿಕಾರಿಗಳು ಭಾಗವಹಿಸಿದ್ದರು.
ಅಪರಿಚಿತ ಶವ ಪತ್ತೆ
ಹೊಸಕೋಟೆ: ಪಟ್ಟಣದ ಕುರುಬರಪೇಟೆ ವೃತ್ತದ ಬಳಿ ಸುಮಾರು 70-75 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತನು ಸುಮಾರು 5.2 ಅಡಿ ಎತ್ತರವಿದ್ದು, ತಲೆಯಲ್ಲಿ ಬಿಳಿ ಕೂದಲು, ಮೈಮೇಲೆ ಮಾಸಲು ಬಿಳಿ ಹಸಿರು ಮಿಶ್ರಿತ ಚೌಕಗಳುಳ್ಳ ಅಂಗಿ ತೊಟ್ಟಿರುತ್ತಾನೆ. ಯಾವುದೋ ಕಾಯಿಲೆಯಿಂದ ನರಳಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಶವವನ್ನು ಎಂವಿಜೆ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದ್ದು ವಾರಸುದಾರರು ಯಾರಾದರೂ ಇದ್ದಲ್ಲಿ ದೂ.(080)27931570 ಸಂಪರ್ಕಿಸಬಹುದಾಗಿದೆ.
Advertisement