ಜೆಸಿಬಿ ವಶ: ದೊಡ್ಡಬಳ್ಳಾಪುರ ಅರಣ್ಯಾಧಿಕಾರಿಗಳ ಕಾರ್ಯಾಚರಣೆ
ದೊಡ್ಡಬಳ್ಳಾಪುರ: ತಾಲೂಕಿನ ಸಾಸಲು ಹೋಬಳಿಯ ಬೆನಕನಮಡಗು ಗ್ರಾಮದ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಲು ಜೆಸಿಬಿಯಿಂದ ಭೂಮಿ ಸ್ವಚ್ಛಗೊಳಿಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ದೊಡ್ಡಬಳ್ಳಾಪುರ ಉಪ ಅರಣ್ಯ ವಲಯಾಧಿಕಾರಿ ಚೇತನ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಖಾಸಗಿಯವರಿಗೆ ಸೇರಿದ ಜೆಸಿಬಿಯೊಂದನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಒತ್ತುವರಿ ಆರೋಪದಲ್ಲಿ ಬೆನಕನಮಡಗು ಗ್ರಾಮದ ಕೆಂಪಣ್ಣ ಮತ್ತು ಜೆಸಿಬಿ ಮಾಲೀಕರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸ್ಥಳೀಯ ದೂರವಾಣಿ ಮೂಲಕ ಬಂದ ಅನಾಮಧೇಯ ಕರೆ ಮಾಹಿತಿ ಆಧರಿಸಿ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಉಪವಲಯಾಧಿಕಾರಿ ಸ್ಥಳಕ್ಕೆ ಬಂದು ಪರಿಶೀಲಿಸಿ ಜೆಸಿಬಿ ವಶಪಡಿಸಿಕೊಂಡರು. ಪ್ರಕರಣದಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಬಂಧಿತರನ್ನು ವಿಚಾರಣೆ ನಡೆಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಹಲವು ದೂರು: ಅರಣ್ಯ ಭೂಮಿ ಒತ್ತುವರಿ ಬಗ್ಗೆ ಇಲಾಖೆಗೆ ಅನೇಕ ದೂರುಗಳು ಬರುತ್ತಿವೆ. ಪ್ರಕರಣ ನಡೆದ ಸ್ಥಳಕ್ಕೆ ಬಂದಿದ್ದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರು ಮೌಖಿಕವಾಗಿಯೂ ಅನೇಕ ದೂರು ನೀಡಿದ್ದಾರೆ. ಈ ಹಂತದಲ್ಲಿ ಸೂಕ್ತ ತನಿಖೆ ನಡೆಸಿ ಒತ್ತುವರಿ ಭೂಮಿಯನ್ನು ತೆರವು ಮಾಡಲಾಗುವುದು. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಅಗತ್ಯ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ವಲಯ ಅರಣ್ಯಾಧಾಕಾರಿ ಸೈಯದ್ ನಿಜಾಮುದ್ದೀನ್ ಹೇಳಿದ್ದಾರೆ.
Advertisement