ಕ.ಪ್ರ.ವಾರ್ತೆ ರಾಮನಗರ ಆ.6
ಇಂಗ್ಲಿಷ್ ಭಾಷೆ ಕಬ್ಬಿಣದ ಕಡಲೆಯೇನಲ್ಲ. ಇಚ್ಛಾಶಕ್ತಿಯಿದ್ದರೆ ಇಂಗ್ಲಿಷ್ ಮಾತ್ರವಲ್ಲದೆ ಇತರೆ ಭಾಷೆಗಳನ್ನೂ ಸುಲಭವಾಗಿ ಕಲಿಯಬಹುದು ಎಂದು ಜಿ.ಪಂ. ಸಿಇಒ ಡಾ.ಎಂ.ವಿ.ವೆಂಕಟೇಶ್ ಕರೆ ನೀಡಿದರು.
ಇಲ್ಲಿನ ವಿಜಯನಗರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಆಂಗ್ಲ ಭಾಷಾ ಕೌಶಲ್ಯ ಬೆಳೆಸುವ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಲವು ಭಾಷೆಗಳನ್ನು ಕಲಿಯುವುದರಿಂದ ನಮ್ಮ ಬೌದ್ಧಿಕ ಮಟ್ಟ ಹೆಚ್ಚುತ್ತದೆ. ಮಾತೃಭಾಷೆಯನ್ನು ಪ್ರೀತಿಸಿ, ಪೋಷಿಸಬೇಕು. ಅಂತೆಯೇ ಇತರೆ ಭಾಷೆಗಳ ಕಲಿಕೆಗೂ ಒತ್ತು ನೀಡಬೇಕು ಎಂದು ಅವರು ಸಲಹೆ ನೀಡಿದರು.
ಭಯ ದೂರವಾಗಿಸಿ: ಗ್ರಾಮೀಣ ಪ್ರದೇಶದ ಹೆಚ್ಚು ಮಕ್ಕಳು ಇಂಗ್ಲಿಷ್ ಭಾಷೆಯಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ. ಹೀಗಾಗಿ ಇಂಗ್ಲಿಷ್ ಬಗ್ಗೆ ಭಯವನ್ನು ದೂರವಾಗಿಸುವ ನಿಟ್ಟಿನಲ್ಲಿ ಈ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ.ವೆಂಕಟೇಶ್ ಹೇಳಿದರು.
ಅಂತಾರಾಷ್ಟ್ರೀಯ ಭಾಷೆಯ ಮನ್ನಣೆಗೆ ಪಾತ್ರವಾಗಿರುವ ಇಂಗ್ಲಿಷ್ ಭಾಷೆಯನ್ನು 1ನೇ ತರಗತಿಯಿಂದಲೇ ಕಲಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ. ಮಕ್ಕಳು ಇಂಗ್ಲಿಷ್ ಭಾಷೆಯಲ್ಲಿ ಪ್ರಬುದ್ಧತೆ ಸಾಧಿಸಬೇಕು ಎಂದು ತಿಳಿಸಿದರು.
ಇಂಗ್ಲಿಷ್ ಅಗತ್ಯ: ಜಗತ್ತಿನಲ್ಲಿ ಇನ್ನೂರಕ್ಕೂ ಹೆಚ್ಚು ರಾಷ್ಟ್ರಗಳಿದ್ದು, ಸಾಕಷ್ಟು ರಾಷ್ಟ್ರಗಳು ತಮ್ಮದೇ ಆದ ಮಾತೃಭಾಷೆಯನ್ನು ಹೊಂದಿವೆ. ಆದರೆ, ಜಾಗತಿಕ ಮಟ್ಟದಲ್ಲಿ ಇಂಗ್ಲಿಷ್ ವ್ಯಾವಹಾರಿಕ ಭಾಷೆಯಾಗಿದೆ. ಅದರ ಕಲಿಕೆಗೆ ಒತ್ತು ನೀಡುವುದು ಅಗತ್ಯ ಎಂದು ಅವರು ಹೇಳಿದರು.
ಕಾನ್ವೆಂಟ್ಗಳಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ದೊರೆಯುತ್ತಿದೆ. ಅಲ್ಲಿನ ಮಕ್ಕಳಿಗೆ ಸರಿಸಮನಾಗಿ ಸರ್ಕಾರಿ ಶಾಲೆ ಮಕ್ಕಳಿಗೂ ಇಂಗ್ಲಿಷ್ ಕಲಿಕೆ, ಕೌಶಲ್ಯ ಬೆಳೆಸುವ ಪ್ರಯತ್ನಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ ಎಂದು ಅವರು ವಿವರಿಸಿದರು. ಸರ್ಕಾರಿ ಶಾಲೆಗಳಲ್ಲಿ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು, ಉತ್ತಮ ಶಿಕ್ಷಣದೊಂದಿಗೆ ಭವಿಷ್ಯ ರೂಪಿಸಿಕೊಳ್ಳುವಂತೆ ಡಾ.ವೆಂಕಟೇಶ್ ಕರೆ ನೀಡಿದರು.
ಸರಳ ಕಲಿಕೆ: ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಪಾಲಿಗೆ ಕಬ್ಬಿಣದ ಕಡಲೆಯಾಗಿರುವ ಆಂಗ್ಲ ಭಾಷೆಯನ್ನು ಸರಳವಾಗಿ ಅರ್ಥ ಮಾಡಿಸುವ ಉದ್ದೇಶದಿಂದ ಆಂಗ್ಲ ಭಾಷಾ ಕೌಶಲ್ಯ ಬೆಳೆಸುವ ಆಂದೋಲನವನ್ನು ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಡಿಡಿಪಿಐ ಪ್ರಹ್ಲಾದಗೌಡ ವಿವರಿಸಿದರು.
Advertisement