ದೊಡ್ಡಡಬಳ್ಳಾಪುರ: ದೊಡ್ಡಬಳ್ಳಾಪುರ ಉಪವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಾನುಕುಂಟೆ ಸರಹದ್ದಿನಲ್ಲಿ ಬರುವ ಅದ್ದೆ ಶ್ರೀನಿಧಿ ಲೇಔಟ್ನಲ್ಲಿ ಒಂಟಿ ಮಹಿಳೆ ಇದ್ದ ಮನೆಯಲ್ಲಿ ಮಹಿಳೆ ಮೇಲೆ ದಾಳಿ ಮಾಡಿ ಹಣ-ಆಭರಣ ದೋಚಿದ್ದ ಸುಲಿಗೆಕೋರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಪ್ರಕರಣದಲ್ಲಿ ಒಡಿಶಾ ರಾಜ್ಯದ ಜಗತ್ಪುರ ಜಿಲ್ಲೆ ಮೂಲದ ಮಹ್ಮದ್ ಬಿಲಾಲ್(22) ಮತ್ತು ಬೆಂಗಳೂರಿನ ರವಿ(20) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಪ್ರಕರಣದ ವಿಚಾರಣೆಯಲ್ಲಿ ತಾವೇ ಸುಲಿಗೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದು, ಬಂಧಿತರಿಂದ ದೋಚಿದ್ದ ಎಲ್ಲ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಭರಣಗಳನ್ನು ದೂರುದಾರರಿಗೆ ಹಿಂತಿರುಗಿಸಲಾಗಿದೆ ಎಂದು ಡಿವೈಎಸ್ಪಿ ಕೋನಪ್ಪರೆಡ್ಡಿ ತಿಳಿಸಿದ್ದಾರೆ.
ಘಟನೆ ವಿವರ: ಶ್ರೀನಿಧಿ ಲೇಔಟ್ನಲ್ಲಿನ ಮನೆಯಲ್ಲಿ ವಾಸವಾಗಿರುವ ತೇಜಸ್ವಿನಿ ಎಂಬಾಕೆ ತನ್ನ ಕಾರಿನಲ್ಲಿ ಬಂದು ನೆಲಮಹಡಿಯಲ್ಲಿ ಕಾರು ನಿಲ್ಲಿಸಿ ಮೊದಲ ಮಹಡಿಯಲ್ಲಿರುವ ತನ್ನ ಮನೆಯ ಬಾಗಿಲು ತೆಗೆಯುತ್ತಿದ್ದ ವೇಳೆ ಬಂದ ಇಬ್ಬರು ದುಷ್ಕರ್ಮಿಗಳು ಆಕೆಯನ್ನು ಹೆದರಿಸಿ ಮನೆಯ ಒಳಗೆ ನುಗ್ಗಿದ್ದಾರೆ. ಆ ವೇಳೆ ಮಾರಕಾಸ್ತ್ರಗಳನ್ನು ತೋರಿಸಿ ಆಕೆಯ ಕೈಕಾಲು ಹಿಡಿದು ಆಕೆಯ ಬಳಿ ಇದ್ದ ಚಿನ್ನದ ಬಳೆ, ಚಿನ್ನದ ಸರ, ಎರಡು ಉಂಗುರ, ಎರಡು ಜೊತೆ ಕಿವಿಯೋಲೆ, ಒಂದು ಕ್ಯಾಮರಾ ಮತ್ತು 2 ಸಾವಿರ ನಗದು ದೋಚಿದ್ದರು. ಮಹ್ಮದ್ ಬಿಲಾಲ್ ತೇಜಸ್ವಿನಿ ಅವರಿಂದ ಎಟಿಎಂ ಕಾಡ್ಅನ್ನು ಕಸಿದುಕೊಂಡು ಪಿನ್ ನಂಬರ್ ಕೇಳಿ ಬರೆದುಕೊಂಡು ಆಕೆಯ ಕಾರ್ನ ಕೀ ಪಡೆದು ಅದರಲ್ಲೇ ಹೊರಹೋಗಿ 25 ಸಾವಿರ ಹಣ ಪಡೆದು ಹಿಂತಿರುಗಿ ಬಂದು ಕಾರ್ಡ್ ಮತ್ತು ಕಾರ್ ಕೀ ಹಿಂತಿರುಗಿಸಿ ಆಕೆಯನ್ನು ಮನೆಯಲ್ಲಿ ಕೂಡಿ ಹಾಕಿ ಇಬ್ಬರೂ ಪರಾರಿಯಾಗಿದ್ದಾರೆ.
ಘಟನೆ ಬಗ್ಗೆ ತೇಜಸ್ವಿನಿ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಡಿವೈಎಸ್ಪಿ ಕೋನಪ್ಪರೆಡ್ಡಿ, ದೊಡ್ಡಬಳ್ಳಾಪುರ ಸಿಪಿಐ ಶಿವಾರೆಡ್ಡಿ, ರಾಜಾನುಕುಂಟೆ ಎಸೈ ಲೂಯಿರಾಮರೆಡ್ಡಿ ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿತ್ತು. ಆರೋಪಿ ಮತ್ತು ಮಾಲು ಪತ್ತೆಗಾಗಿ ತಂಡ ಒಡಿಶಾಗೆ ತೆರಳಿ ಕಾರ್ಯಾಚರಣೆ ನಡೆಸಿತ್ತು.
Advertisement