ಕೆರೆ ಒತ್ತುವರಿ ತೆರವುಗೊಳಿಸುವ ಕಾರ್ಯಕ್ಕೆ ಸಹಕರಿಸಿ

Updated on

ಮಾಗಡಿ: ತಾಲೂಕಿನ ಕೆರೆ ಒತ್ತುವರಿ ತೆರವುಗೊಳಿಸುವ ಕಾರ್ಯಕ್ಕೆ ಶಾಸಕರು, ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಗ್ರಾ.ಪಂ. ಪಿಡಿಒಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು  ಎಂದು ತಹಸೀಲ್ದಾರ್ ಶಿವಕುಮಾರ್ ತಾಪಂನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮನವಿ ಮಾಡಿದರು.ನಮ್ಮ ಪೂರ್ವಿಕರು ಕಟ್ಟಿರುವ  ಕೆರೆ, ಗೋಕಟ್ಟೆಗಳು ಉಳಿದರೆ ಮಾತ್ರ ನೀರಿನ ಅಂತರ್ಜಲ ಮಟ್ಟ ಸುಧಾರಿಸುತ್ತದೆ. ದುರಾಸೆಗೆ ಕೆರೆ ಗೋಕಟ್ಟೆಗಳನ್ನು ಒತ್ತುವರ ಮಾಡಿಕೊಳ್ಳವುದನ್ನು ಬಿಡಬೇಕು. ಈಗಾಗಲೇ ಕೆರೆ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದೆ. ತಾಲೂಕಿನಲ್ಲಿ ಕೆರೆಗಳ ಒತ್ತುವರಿಯನ್ನು ಕೂಡಲೆ ತೆರವುಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ. ತೆರವು ಗೊಳಿಸುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸುವಂತೆ ತಹಸೀಲ್ದಾರ್ ತಿಳಿಸಿದರು.
ಕೆರೆಗಳ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯಕ್ರಮವನ್ನು ಕೆರೆಯಂಗಳದಿಂದಲೇ ಹಮ್ಮಿಕೊಳ್ಳಲು ಶಾಸಕ ಎಚ್.ಸಿ. ಬಾಲಕೃಷ್ಣ ಸಭೆಯಲ್ಲಿ ತೀರ್ಮಾನ ಕೈಗೊಂಡರು. ಹೋಬಳಿ ಮಟ್ಟದಲ್ಲಿ ರೈತರ ಸಮಸ್ಯೆ ಬಗೆಹರಿಸಲು ಕಂದಾಯ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲು ಯೋಜನೆ ಸಿದ್ಧಪಡಿಸುವಂತೆ ತಹಸೀಲ್ದಾರ್ ಶಿವಕುಮಾರ್ಗೆ ಇದೇ ವೇಳೆ ಸೂಚಿಸಿದರು.
ಕಾನೂನು ಆಯೋಗಕ್ಕೆಸಿಬ್ಬಂದಿ, ಜಾಗದ ಕೊರತೆ
ಬೆಂಗಳೂರು: ಕಾನೂನು ಆಯೋಗಕ್ಕೆ ಸಿಬ್ಬಂದಿ ಮತ್ತು ಜಾಗದ ಕೊರತೆ ಇದ್ದು ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಆಯೋಗದ ಅಧ್ಯಕ್ಷ ನ್ಯಾ.ಮೂ. ಎಸ್.ಆರ್.ನಾಯಕ್ ಅಳಲು ತೋಡಿಕೊಂಡಿದ್ದಾರೆ. ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಆಯೋಗಕ್ಕೆ ಇಲ್ಲಿ ನೀಡಿರುವ ಕಚೇರಿಯಲ್ಲಿ ಸ್ಥಳಾವಕಾಶದ ಕೊರತೆ ಇದೆ. ಕನಿಷ್ಠ 10 ಸಾವಿರ ಚದರ ಅಡಿ ವಿಸ್ತೀರ್ಣ ಇರುವ ಕಚೇರಿ ಅಗತ್ಯವಿದೆ ಇದೆ ಎಂದರು.
     ಆಯೋಗ ಪೂರ್ಣಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬರುವುದಕ್ಕೆ ಅಧ್ಯಕ್ಷರ ಜತೆಗೆ ಒಬ್ಬರು ಸದಸ್ಯರು ಹಾಗೂ ಸದಸ್ಯ ಕಾರ್ಯದರ್ಶಿಗಳು ಇರಬೇಕು. ಅವರ ನೇಮಕವಾಗಿಲ್ಲ. ಆ ನಂತರವಷ್ಟೇ ಸರ್ಕಾರ ಆಯೋಗಕ್ಕೆ ಪರಿಶೀಲಿಸಲು ಶಿಫಾರಸು ಮಾಡಿರುವ ಲೋಕಾಯುಕ್ತ ಕಾಯ್ದೆ, ಮೌಢ್ಯ ಮತ್ತು ಅದ್ಧೂರಿ ವಿವಾಹ ನಿಯಂತ್ರಣ ಕಾಯ್ದೆ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಲು ಸಾಧ್ಯ ಎಂದು ಹೇಳಿದರು. ಆಯೋಗಕ್ಕೆ ಸರ್ಕಾರ ರು. 1.60 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಜತೆಗ 30 ಸಿಬ್ಬಂದಿ ನೀಡಲಾಗಿದೆ. ಆದರೆ 15 ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ಸಂಶೋಧಕರು ಬೇರೆ ಕಡೆ ಕೆಲಸ ಮಾಡುವ ಪರಿಸ್ಥಿತಿ. ಇದನ್ನು ಹೊರತುಪಡಿಸಿ ಕೆಲ ತಜ್ಞರನ್ನು ಸದಸ್ಯರಾಗಿ ನೇಮಕ ಮಾಡಬೇಕಿದೆ. ಇದಕ್ಕೆಲ್ಲ ಜಾಗದ ಅಗತ್ಯವಿದೆ ಎಂದರು.
ಪರಮೇಶ್ವರ್ಗೆ ಡಿಸಿಎಂಸ್ಥಾನ ನೀಡಲು ಆಗ್ರಹ
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಪ್ರದೇಶ ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಮಿತಿ ಸಭೆಯಲ್ಲಿ ಆಗ್ರಹಿಸಲಾಗಿದೆ. ಪರಮೇಶ್ವರ ಅವರ ನಾಯಕತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದ್ದು, ಅವರನ್ನು ಸರ್ಕಾರದ ಭಾಗವಾಗಿ ಮಾಡಿಕೊಳ್ಳಬೇಕು. ಹೀಗಾಗಿ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ವರಿಷ್ಠರಿಗೆ ಮನವಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಎಂ.ಸಿ.ವೇಣುಗಾಪಾಲ್ ಮಾತನಾಡಿ ಮುಂದಿನ ತಿಂಗಳು ಹಿಂದುಳಿದ ವರ್ಗಗಳ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಪರಮೇಶ್ವರ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ಅರ್ಕಾವತಿಯ ನೊಂದ ರೈತರಿಗೆ ನ್ಯಾಯ ಒದಗಿಸಿ: ಟಿ.ಜೆ. ಅಬ್ರಹಾಂ
ಬೆಂಗಳೂರು: ಕಾಂಗ್ರೆಸ್-ಬಿಜೆಪಿ ಸ್ವಪ್ರತಿಷ್ಠೆಯ ರಾಜಕೀಯ ಬಿಟ್ಟು ಅರ್ಕಾವತಿ ಬಡಾವಣೆಯ ನೊಂದ ರೈತಾಪಿ ವರ್ಗಕ್ಕೆ ನ್ಯಾಯ ನೀಡುವ ಅಗತ್ಯವಿದೆ ಎಂದು ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಹಾಂ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಪ್ರತಿಷ್ಠೆಯ ರಾಜಕಾರಣ ಮಾಡಿ ರೈತರ ಹಿತಾಸಕ್ತಿಯನ್ನು ಕಡೆಗಣಿಸಿದರೆ ಅಂತಹ ಪಕ್ಷಗಳ ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
   2004 ರಿಂದ 2014 ರವರೆಗೂ ಅಧಿಕಾರದಲ್ಲಿದ್ದ ಎಲ್ಲ ಸರ್ಕಾರಗಳು ಬಿಡಿಎ ವತಿಯಿಂದ ಯಾವುದೇ ನಿವೇಶನಗಳನ್ನು ಹಂಚಿಕೆ ಮಾಡಲಿಲ್ಲ. ಈಗ ಪ್ರಕ್ರಿಯೆ ಆರಂಭಿಸಿರುವವರ ವಿರುದ್ಧ ವಿರೋಧವೇಕೆ ಎಂದರು.  ಅಂದಿನ ಮುಖ್ಯಮಂತ್ರಿಯಾಗಿ ಚಾಲನೆ ಕೊಟ್ಟು ಈಗ ವಿಪಕ್ಷ ನಾಯಕರಾಗಿರುವ ಜಗದೀಶ್ ಶೆಟ್ಟರ್ ಅವರೇ ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಪಿಡಿಒ ಸಂಘದ ಪದಾಧಿಕಾರಿಗಳು ಮನವಿ
ನೆಲಮಂಗಲ : ಖಾಸಗಿ ಕೊಳವೆ ಬಾವಿ ದುರಂತಗಳಿಗೆ ಗ್ರಾಮ ಪಂಚಾಯ್ತಿ ಅಧಿಕಾರಿ, ಕಾರ್ಯದರ್ಶಿಗಳನ್ನು ಹೊಣೆಗಾರರನ್ನಾಗಿ ಗುರುತಿಸುವ ಕ್ರಮವನ್ನು ರಾಜ್ಯ ಸರ್ಕಾರ ಕೈಗೊಳ್ಳಬಾರದು ಎಂದು ತಾಲೂಕು ತಹಸೀಲ್ದಾರ್ ನರಸಿಂಹಮೂರ್ತಿ ಅವರಿಗೆ ತಾಲೂಕು ಪಿ.ಡಿ.ಒ ಸಂಘದ ಪದಾಧಿಕಾರಿಗಳು ಮನವಿ ಪತ್ರ ನೀಡಿ ಒತ್ತಾಯಿಸಿದರು.  ಕೊಳವೆ ಬಾವಿಯ ದುರಂತಕ್ಕೆ ಕ್ರಿಮಿನಲ್ ಮೊಕ್ಕದ್ದಮೆ ದಾಖಲಿಸುವ ಪ್ರಯತ್ನದಿಂದಾಗಿ ಗ್ರಾಮ ಪಂಚಾಯ್ತಿ ಅಧಿಕಾರಿ ವರ್ಗದವರ ಮೇಲೆ ಅವರದ್ದಲ್ಲದ ಹೊಣೆಗಾಗಿ ಶಿಕ್ಷೆ ವಿಧಿಸಿದಂತಾಗುತ್ತದೆ. ಕಾರಣಗಳ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕು ಸೂಳೀಕೇರಿ ಗ್ರಾಮ ಪಂಚಾಯ್ತಿ ಅಧಿಕಾರಿ ಮತ್ತು ಕಾರ್ಯದರ್ಶಿಗಳ ವಿರುದ್ಧ ಕೈಗೊಳ್ಳಲಿರುವ ಕ್ರಿಮಿನಲ್ ಮೊಕದ್ದಮೆ ಕ್ರಮವನ್ನು ಕೈಬಿಡುವಂತೆ  ರಾಜ್ಯಾಧ್ಯಕ್ಷ ಪರಮಶಿವಮೂರ್ತಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com