ತೂಬಗೆರೆ ಸುತ್ತ ಅಕ್ರಮ ಮದ್ಯ ಅವ್ಯಾಹತ

Updated on

ಕನ್ನಡಪ್ರಭ ವಾರ್ತೆ, ದೊಡ್ಡಬಳ್ಳಾಪುರ,ಆ.6
ತೂಬಗೆರೆ ಹೋಬಳಿಯ ಅನೇಕ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಅವ್ಯಾಹತ ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಅನೇಕ ಹಂತಗಳಲ್ಲಿ ದೂರುಗಳನ್ನು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
 ತಾಲೂಕಿನ ಹಾಡೋನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ತಮ್ಮ ದೂರು ದುಮ್ಮಾನಗಳನ್ನು ಅಧಿಕಾರಿಗಳ ಮುಂದೆ ತೋಡಿಕೊಂಡ ಜನ ಕೂಡಲೇ ಈ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿದರು.
ಅನೇಕ ಬಗೆಯ ಹೋರಾಟಗಳು ನಡೆದರೂ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ರಾಜಾರೋಷವಾಗಿ ಸ್ಥಳೀಯ ಹಾಗೂ ಸುತ್ತಮುತ್ತಲ ಬಾರ್ಗಳಿಂದ ಮದ್ಯ ಸರಬರಾಜಾಗುತ್ತಿದೆ. ಪೆಟ್ಟಿಗೆ ಅಂಗಡಿ, ಕಿರಾಣಿ ಅಂಗಡಿಗಳಲ್ಲೂ ಮದ್ಯ ಸಿಗುವ ಪರಿಸ್ಥಿತಿ ಇದೆ. ಇದನ್ನು ನಿಯಂತ್ರಿಸದ ಆಡಳಿತಶಾಹಿ ಕೇವಲ ಬಾಯಿಮಾತಿನಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರೆ ಸಾಲದು, ಅದನ್ನು ಕಾರ್ಯರೂಪಕ್ಕೆ ತರಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ, ಜನಸ್ಪಂದನ ಕಾರ್ಯಕ್ರಮಗಳಿಗೆ ಗೈರು ಹಾಜರಾಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಜನರ ಸಂಕಷ್ಟ ಆಲಿಸಲು ಉಪಸ್ಥಿತರಿರದೆ ನಿರ್ಲಕ್ಷ್ಯ ತೋರುವುದು ಸರಿಯಲ್ಲ ಎಂದು  ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ಹಾಗೂ ನಗರ ಜಿಲ್ಲಾ ಹಾಲು ಒಕ್ಕೂಟ(ಬಮೂಲ್) ನಿರ್ದೇಶಕ ಎಚ್.ಅಪ್ಪಯ್ಯಣ್ಣ, ಜನಸ್ಪಂದನ ಎಂದರೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸಿಗುವಂತೆ ಯೋಜಿಸುವ ಕಾರ್ಯಯೋಜನೆ. ಹಲವು ಹಂತಗಳಲ್ಲಿ ಪರಿಹಾರ ಸಿಗದ ಅನೇಕ ಸಮಸ್ಯೆಗಳಿಗೆ ಜನಸ್ಪಂದನದಲ್ಲಿ ಪರಿಹಾರ ಸಿಗಬಹುದು. ಜನ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಜನಸ್ಪಂದನಕ್ಕೆ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಜರಾಗಬೇಕಾದ್ದು ಕಡ್ಡಾಯ. ಈ ನಿಟ್ಟಿನಲ್ಲಿ ತಾಲೂಕು ಆಡಳಿತ ಗಂಭೀರಕ್ರಮ ಕೈಗೊಳ್ಳಬೇಕು. ಶಾಸಕರಾದಿ ಎಲ್ಲ ಹಂತದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನಕ್ಕೆ ನೇರವಾಗಿ ಸಿಗುವ ವ್ಯವಸ್ಥೆ ಜನಸ್ಪಂದನದ ಮೂಲಕ ಆಗಬೇಕು ಎಂದರು.
ದೂರು ದುಮ್ಮಾನ: ಕಾರ್ಯಕ್ರಮದಲ್ಲಿ ಹೋಬಳಿ ವ್ಯಾಪ್ತಿಯ ಅನೇಕ ಇಲಾಖೆಗಳಿಗೆ ಮತ್ತು ಗ್ರಾಮ ಪಂಚಾಯಿತಿಗಳಿಗೆ ಸಂಬಂಧಿಸಿದಂತೆ ಅನೇಕ ದೂರುಗಳು ಕೇಳಿಬಂದವು. ಘಾಟಿ ಆರೋಗ್ಯ ಕೇಂದ್ರದಲ್ಲಿನ ವೈದ್ಯಾಧಿಕಾರಿಯ ಬೇಜವಾಬ್ದಾರಿತನದ ವರ್ತನೆ ಸಾರ್ವಜನಿಕರಿಂದ ವ್ಯಾಪಕ ಟೀಕೆಗೆ ಗುರಿಯಾಯಿತು. ಅಲ್ಲದೆ ವೈದ್ಯಾಧಿಕಾರಿ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದ ವಿಚಾರ ಕೂಡ ಗಂಭೀರ ಚರ್ಚೆಗೊಳಗಾಯಿತು.  
ತಹಸೀಲ್ದಾರ್ ರಮೇಶ್ ಹಾಜರಿದ್ದ ರೈತರು, ಸಾರ್ವಜನಿಕರ ದೂರುಪತ್ರಗಳು, ಮನವಿಗಳನ್ನು ಸ್ವೀಕರಿಸಿ ಪ್ರತಿಕ್ರಿಯಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಶ್ವತ್ಥರೆಡ್ಡಿ, ಬಮೂಲ್ ಮಾಜಿ ನಿರ್ದೇಶಕ ಜಿ.ಎಂ.ಚನ್ನಪ್ಪ, ತೂಬಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ವಿ.ವೆಂಕಟೇಶ್, ಹಾಡೋನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಹೋಬಳಿ ವ್ಯಾಪ್ತಿಯ ಅನೇಕ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com