ಕನಕಪುರ: ಸರ್ಕಾರ ರೈತರ ಜಮೀನುಗಳಲ್ಲಿ ಒಕ್ಕಣೆ, ಮೆದೆಗಳ ರಕ್ಷಣೆ ಮತ್ತಿತರ ಕಾರ್ಯಗಳಿಗೆ ಅನುಕೂಲಕರವಾಗುವಂತೆ ರಿಯಾಯತಿ ದರದಲ್ಲಿ ಕೃಷಿ ಇಲಾಖೆ ಮೂಲಕ ಟಾರ್ಪಾಲುಗಳನ್ನು ವಿತರಿಸುತ್ತಿದ್ದು, ಕೃಷಿ ಅಧಿಕಾರಿಗಳು ಅವುಗಳನ್ನು ರೈತರಿಗೆ ನೀಡದೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಅಚ್ಚಲು ಗ್ರಾಮ ಪಂಚಾಯತ್ ಸಭೆಯಲ್ಲಿ ರೈತರು ಆರೋಪಿಸಿದ ಘಟನೆ ನಡೆಯಿತು. ಅಚ್ಚಲು ಗ್ರಾಪಂ ಅಧ್ಯಕ್ಷೆ ನಾಗರತ್ನಮ್ಮ ಹಾಗೂ ಉಪಾಧ್ಯಕ್ಷ ಲಿಂಗರಾಜು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೋಡಲ್ ಅಧಿಕಾರಿಗಳಾಗಿ ಸತೀಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಘು ಕಲಾಪಗಳನ್ನು ನಿರ್ವಹಿಸಿದರು. ಜಿಪಂ ಮಾಜಿ ಉಪಾಧ್ಯಕ್ಷೆ ಮಾದೇವಿ,ರಂಗಣ್ಣ, ಬಂಗಾರಯ್ಯ ಮೊದಲಾದವರು ಪಾಲ್ಗೊಂಡಿದ್ದರು. ಗ್ರಾಪಂ ಕಚೇರಿಯಲ್ಲಿಯೇ ಶೌಚಾಲಯ ಇಲ್ಲದಿದ್ದರೂ ನಿರ್ಮಲ ಭಾರತ ಅಭಿಯಾನದಲ್ಲಿ ಮನೆಮನೆಗೂ ಶೌಚಾಲಯ ನಿರ್ಮಿಸುವುದಾಗಿ ಪಂಚಾಯತ್ ಅಧಿಕಾರಿಗಳು ಹೇಳುತ್ತಿರುವುದು ವಿಪರ್ಯಾಸವಾಗಿದೆ, ಎಂದು ಸಭೆಯಲ್ಲಿಯೇ ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪಿಡಿಓ ರಘು ಶೀಘ್ರದಲ್ಲಿಯೇ ಶೌಚಾಲಯ ನಿರ್ಮಿಸುವ ಭರವಸೆ ನೀಡಿದರು. ವಿವಿಧ ಇಲಾಖೆಯ ಅಧಿಕಾರಿಗಳು ರೈತರಿಗೆ ಇಲಾಖೆಗಳ ವತಿಯಿಂದ ಸಿಗುವ ಸೌಲಭ್ಯ, ಸವಲತ್ತುಗಳ ಬಗ್ಗೆ ವಿವರ ನೀಡಿದರು.
ವ್ಯಕ್ತಿ ನಾಪತ್ತೆ
ನೆಲಮಂಗಲ: ಮನೆಯಿಂದ ಹೋದ ವ್ಯಕ್ತಿ ಕಾಣೆಯಾಗಿರುವುದಾಗಿ ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಣೆಯಾದ ವ್ಯಕ್ತಿಯನ್ನು ತಾಲ್ಲೂಕಿನ ಕಾರೇಹಳ್ಳಿ ಗ್ರಾಮದ ಮಾರಣ್ಣ (59) ಎಂದು ಗುರುತಿಸಲಾಗಿದೆ . ಇವರ ಬಗ್ಗೆ ಮಾಹಿತಿ ದೊರೆತಲ್ಲಿ ತ್ಯಾಮಗೊಂಡ್ಲು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ-08027732033, ಪಿಎಸೈ ಸುಧಾಕರ್-9480802463 ಅಥವಾ ಅವರ ಮಗ ಆನಂದ್- 9964091024ಗೆ ಕರೆ ಮಾಡಿ ಮಾಹಿತಿ ನೀಡಲು ತ್ಯಾಮಗೊಂಡ್ಲು ಪೊಲೀಸರು ಕೋರಿದ್ದಾರೆ.
ಅಂಗಡಿಗಳಲ್ಲಿ ಕಳ್ಳತನ
ದೇವನಹಳ್ಳಿ: ತಾಲೂಕು ವಿಶ್ವನಾಥಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ ಚಪ್ರಕಲ್ ಕ್ರಾಸ್ ಬಳಿಯ ಐದು ಅಂಗಡಿಗಳಲ್ಲಿ ಬೀಗ ಮುರಿದು ಮಂಗಳವಾರ ರಾತ್ರಿ ಒಂದೇ ದಿನ ಸುಮಾರು ಎರಡು ಲಕ್ಷ ರು.ಗಳ ಮೊಬೈಲ್, ಇತರೆ ವಸ್ತುಗಳು ಅಲ್ಲದೆ ನಗದು ಕಳವು ಆಗಿರುವ ಪ್ರಕರಣ ವರದಿಯಾಗಿದೆ. ಪೋಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.
ಒಒಡಿ ಸೌಲಭ್ಯ
ರಾಮನಗರ: ಅನುದಾನಿತ ಶಾಲೆ, ಕಾಲೇಜುಗಳ ನೌಕರರ ಸಂಘಟನೆಗಳ ಒಕ್ಕೂಟದಿಂದ ಬೆಂಗಳೂರಿನಲ್ಲಿ ಗುರುವಾರ (ಆ.7) ನಡೆಯುವ ಶೈಕ್ಷಣಿಕ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಶಿಕ್ಷಣ ಇಲಾಖೆಯು ಒಒಡಿ ಸೌಲಭ್ಯ ಕಲ್ಪಿಸಿದೆ. ಸಿ.ಬಿ.ಎಸ್.ಸಿ. ಪಠ್ಯಕ್ರಮ, ನಿರಂತರ ಮೌಲ್ಯಮಾಪನ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಯ ಸ್ಥಿತಿಗತಿ ಕುರಿತ ಕಾರ್ಯಾಗಾರವು ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿರುವ ಶಿಕ್ಷಕರ ಸದನದಲ್ಲಿ ಬೆಳಗ್ಗೆ 9.30ಕ್ಕೆ ನಡೆಯಲಿದೆ.
Advertisement