ರಾಮನಗರ: ಶಿಕ್ಷಣ ಮತ್ತು ಜೀವನ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಯವ್ವನದಲ್ಲಿ ಶಿಕ್ಷಣವನ್ನು ನಿರ್ಲಕ್ಷಿಸಿದರೆ ಭವಿಷ್ಯದಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅಭಿಪ್ರಾಯಪಟ್ಟರು.
ಬೆಂಗಳೂರು-ಕನಕಪುರ ರಸ್ತೆಯ ತಾತಗುಣಿ ಸಮೀಪವಿರುವ ಜ್ಯೋತಿ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ಪ್ರಥಮ ವರ್ಷದ ಬಿಇ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೆದುಳಿಗೆ ಜ್ಞಾನ ತುಂಬುವ ಕೆಲಸವಾಗದಿದ್ದರೆ ಅದು ನಿರುಪಯುಕ್ತವಾಗುತ್ತದೆ ಎಂದರು. ಶಿಕ್ಷಣವು ವೈಯಕ್ತಿಕ ಬದುಕಿಗಷ್ಟೇ ಆಸರೆಯಾದರೆ ಸಾಲದು. ಪ್ರತಿಯೊಬ್ಬ ಸುಶಿಕ್ಷಿತರು ಶಿಕ್ಷಣದಿಂದ ಸ್ವಂತ ಬದುಕನ್ನು ಕಟ್ಟಿಕೊಳ್ಳುವ ಜತೆಗೆ ಸಮಾಜ, ದೇಶದ ಅಭಿವೃದ್ಧಿಗೂ ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದರು.
ಸ್ವದೇಶಕ್ಕೆ ಮರಳಿ: ಉನ್ನತ ವ್ಯಾಂಸಗದಿಂದ ಜ್ಞಾನಾರ್ಜನೆಗಾಗಿ ವಿದೇಶಗಳಿಗೆ ತೆರಳುವ ವಿದ್ಯಾರ್ಥಿಗಳು ಅಲ್ಲೇ ವೃತ್ತಿ ಅವಲಂಬಿಸಿ ತಮ್ಮ ಕೌಶಲ್ಯವನ್ನು ಆ ದೇಶಗಳಿಗೆ ಧಾರೆ ಎರೆದುಕೊಡದೆ, ಸ್ವದೇಶಕ್ಕೆ ಮರಳಬೇಕು ಎಂದು ದೇಶಪಾಂಡೆ ಕರೆ ನೀಡಿದರು. ಈ ನೆಲದಲ್ಲಿ ಕಲಿತಿದ್ದರ ಜತೆಗೆ ಉನ್ನತ ವ್ಯಾಸಂಗದಲ್ಲಿ ಗಳಿಸಿದ ಜ್ಞಾನ, ಕೌಶಲ್ಯವನ್ನು ನಮ್ಮ ತಾಯ್ನಾಡಿನ ಅಭಿವೃದ್ಧಿಗೆ ಬಳಸಬೇಕು. ಆದರೆ, ಸಾಕಷ್ಟು ಮಂದಿ ಹಣ ಸಂಪಾದನೆಯನ್ನೇ ಗುರಿಯಾಗಿಸಿಕೊಂಡು ತಾಯ್ನೆಲವನ್ನು ಮರೆಯುತ್ತಿದ್ದಾರೆ ಎಂದು ಅವರು ವಿಷಾದಿಸಿದರು.
ಶಿಕ್ಷಣ ಅಗತ್ಯ: ದೇಶಾಭಿವೃದ್ಧಿಗೆ ಶಿಕ್ಷಣ ಅಗತ್ಯ. ಯಾವುದೇ ವ್ಯಕ್ತಿಯು ಶಿಕ್ಷಣ ಕಲಿತ ಮಾತ್ರಕ್ಕೆ ಎತ್ತರಕ್ಕೆ ಬೆಳೆಯುವುದಿಲ್ಲ. ಶಿಕ್ಷಣದೊಂದಿಗೆ ಸಾಮಾನ್ಯ ಜ್ಞಾನ ಹಾಗೂ ಸಾಮಾಜಿಕ ಕಳಕಳಿಯೂ ಮುಖ್ಯ ಎಂದು ಜ್ಯೋತಿ ತಾಂತ್ರಿಕ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಬಿ.ಎನ್.ವಿ. ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.
ನೈತಿಕ ಶಿಕ್ಷಣವನ್ನು ನಿರ್ಲಕ್ಷಿಸಿದರೆ ಯಾವ ಸಾಧನೆಯನ್ನೂ ನಿರೀಕ್ಷಿಸಲಾಗದು. ಹೀಗಾಗಿ ಶಾಲೆ, ಕಾಲೇಜು ಹಂತದಲ್ಲೇ ಪಠ್ಯದ ಜತೆಗೆ ನೈತಿಕ ಶಿಕ್ಷಣವನ್ನೂ ಕಲಿಸುವಂತಾಗಬೇಕು. ಆಗಷ್ಟೇ ನಮ್ಮ ಶಿಕ್ಷಣಕ್ಕೆ ಮಹತ್ವ ಬರುತ್ತದೆ ಎಂದು ಅವರು ತಿಳಿಸಿದರು.
Advertisement