'ರಂಗಭೂಮಿ ಪ್ರೋತ್ಸಾಹ ಈಗ ಅತ್ಯಗತ್ಯ'

Updated on: 

ನೆಲಮಂಗಲ: ಚಲನಚಿತ್ರಗಳ ಹಾಗೂ ಧಾರಾವಾಹಿಗಳ ಹಾವಳಿಯಿಂದ ರಂಗಭೂಮಿ ಕ್ಷೀಣಿಸುತ್ತಿದೆ. ಉತ್ತಮ ಕಥೆಗಳಿಗೆ ಮನಸೋತು ನಾಟಕ ಅಭಿನಯಿಸುವ ಮೂಲಕ ಮುಂದಿನ ಪೀಳಿಗೆಯೂ  ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕಾರ್ಯ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಹಾಗೂ ಸರ್ಕಾರವು ಗಮನಹರಿಸಬೇಕಾದ ಅವಶ್ಯಕತೆ ಇದೆ ಎಂದು ಕಿರುತೆರೆಯ ಸಹನಟ ಬಿ.ರಾಮಯ್ಯ ತಿಳಿಸಿದರು.
ಅವರು ಮಂಗಳವಾರ ಪಟ್ಟಣದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಪ್ರತಿಭಾ ರಂಗ ಸಂಸ್ಥೆಯು 22ನೇ ವಾರ್ಷಿಕೋತ್ಸವದ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಆಯೋಜಿಸಿದ್ದ  2 ದಿನಗಳ ನಾಟಕೋತ್ಸವ ಉದ್ಘಾಟಿಸಿ ಮಾತನಾಡುತ್ತ ಬೆಳ್ಳಿತೆರೆ ಹಾಗೂ ಕಿರುತೆರೆಯ ಅಬ್ಬರದಿಂದಾಗಿ ಅಳಿವಿನಂಚಿನಲ್ಲಿರುವ ರಂಗಕಲೆಯನ್ನು ಹಾಗೂ ಕಲಾವಿದರನ್ನು  ಪ್ರೋತ್ಸಾಹಿಸುತ್ತಿರುವುದು ಅಭಿನಂದನೀಯ ಎಂದರು.
ನೆಲಧನಿ ಆಕಾಶವಾಣಿ ಕೇಂದ್ರದ ನಿರ್ದೇಶಕ ವೇಂಕಟೇಶ ಚೌಥಾಯ ಮಾತನಾಡುತ್ತಾ ರಂಗಭೂಮಿ ಉಳಿಯಬೇಕಾದರೆ ಯುವಕ, ಯುವತಿಯರು ಚಲನಚಿತ್ರಗಳಿಗೆ ಹಾಗೂ ಧಾರಾವಾಹಿಗಳಿಗೆ ವಶವಾಗದೆ ರಂಗಭೂಮಿ ಉಳಿಸಿ ಬೆಳೆಸಬೇಕು ಎಂದು ಹೇಳಿದರು.
ನೆಮ್ಮದಿ ಸಂಸ್ಥೆಯ ನಿರ್ದೇಶಕ ರಾಮು ಜೋಗಿಹಳ್ಳಿ ಮಾತನಾಡುತ್ತ ನಮ್ಮ ನಾಟಕ ಕಲೆ ಉಳಿಯಬೇಕಾದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಘ ಸಂಸ್ಥೆಗಳಿಗೆ ಹೆಚ್ಚಿನ ಆರ್ಥಿಕ ನೆರವು ನೀಡಬೇಕು. ಹಳ್ಳಿ-ಹಳ್ಳಿಗಳಲ್ಲಿ ಇರುವ ನಾನಾ ಕಲೆಗಾರರನ್ನು ಗುರುತಿಸಿ ಅವರಿಗೆ ಮಾಸಾಶನ ನೀಡಬೇಕು. ತಿಂಗಳಿಗೆ ನೀಡುತ್ತಿರುವ ಸರ್ಕಾರದ ಮಾಸಾಶನ ಕೇವಲ 1 ಸಾವಿರ ರು. ಗಳಾಗಿದ್ದು ಈ ಹಣ ಜೀವನ ನಿರ್ವಹಣೆಗೆ ಏನೇನೂ ಸಾಲದು ಅನಾರೋಗ್ಯದಿಂದ ಬಳಲುತ್ತಿರುವ ಕಲಾವಿದರಿಗೆ ವೈದ್ಯ ನೆರವು ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರತಿಭಾ ರಂಗದ ವತಿಯಿಂದ ಸಂಸ್ಥೆಯು ವಾರ್ಷಿಕೋತ್ಸವದ ಅಂಗವಾಗಿ ಗಮಕ ಕಲೆ ವಿದ್ವಾಂಸ ಎ.ವಿ.ನಾರಾಯಣರಾವ್, ತಬಲ ವಾದಕ ಕೆ.ಆರ್.ಗಂಗಾಧರ್ ಮತ್ತು ರಂಗಭೂಮಿ ಕಲಾವಿದ ಎನ್. ಸಂಪತ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ವಾಸವಿ ಕಲ್ಯಾಣ ಮಂಟಪ ಸಮಿತಿ ಅಧ್ಯಕ್ಷ ಡಾ. ಲಕ್ಷ್ಮೀನಾರಾಯಣ ಶೆಟ್ಟಿ, ನಿವೃತ್ತ ಆಹಾರ ಸಂರಕ್ಷಣಾಧಿಕಾರಿ ಎನ್.ಎಸ್. ರಾಮಮೂರ್ತಿ, ಗ್ರಾಮಾಂತರ ಜಿಲ್ಲೆ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪರಮಶಿವಯ್ಯ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com