ಮಾಗಡಿ: ಮನೆಗೊಂದು ಕಡ್ಡಾಯ ಶೌಚಾಲಯ ನಿರ್ಮಾಣಗೊಂಡರೆ ಪ್ರತಿ ಗ್ರಾಮವೂ ಆರೋಗ್ಯವಂತವಾಗಿ ಪರಿವರ್ತನೆಯಾಗುತ್ತದೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ನುಡಿದರು.
ಅವರು ಮಾಗಡಿ ತಾಲೂಕಿನ ಕುದೂರು ಗ್ರಾಮದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನ ಶೌಚಾಲಯ ಕಟ್ಟಡ ಉದ್ಘಾಟಿಸಿ ಮಾತನಾಡಿ, ಮೊದಲು ಸರ್ಕಾರಿ ಕಚೇರಿಗಳಲ್ಲಿ ಶೌಚಾಲಯ ಕಡ್ಡಾಯವಾಗಬೇಕು. ನಂತರ ಪಂಚಾಯ್ತಿ ಅಧಿಕಾರಿಗಳು ಪ್ರತಿ ಗ್ರಾಮದ ಮನೆಗಳಿಗೆ ತೆರಳಿ ಜನತೆ ಕಡ್ಡಾಯವಾಗಿ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಜನಜಾಗೃತಿ ಮೂಡಿಸುವ ಮೂಲಕ ಪ್ರತಿ ಮನೆಯಲ್ಲಿಯೂ ಶೌಚಾಲಯ ನಿರ್ಮಿಸಲು ಪ್ರೋತ್ಸಾಹಿಸಬೇಕು. ಬಯಲು ಶೌಚಾಲಯ ರಹಿತ ಗ್ರಾಮ ನಿರ್ಮಾಣವಾದಾಗ ಮಾತ್ರ ಆರೋಗ್ಯವಂತ ಗ್ರಾಮಗಳಾಗಿ ಪರಿವರ್ತನೆಯಾಗುವುದು. ಈ ನಿಟ್ಟಿನಲ್ಲಿ ಗ್ರಾಮ ನೈರ್ಮಲ್ಯ ಕಾಪಾಡಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಗ್ರಾಮ ಪಂಚಾಯ್ತಿಗಳ ಪಾತ್ರ ಬಹಳ ಮುಖ್ಯ ಎಂದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಂ.ಕೆ. ಧನಂಜಯ ಮಾತನಾಡಿ, ಗ್ರಾಮ ನೈರ್ಮಲ್ಯ ಕಾಪಾಡಲು ನಿರ್ಮಲ ಗ್ರಾಮ ಯೋಜನೆಯಡಿ ಪಂಚಾಯ್ತಿಗಳು ಕಾರ್ಯಕ್ರಮ ರೂಪಿಸುತ್ತಿದ್ದಾರೆ. ಗ್ರಾಮದಲ್ಲಿ ಪ್ರತಿ ಮನೆಗಳಲ್ಲೂ ಶೌಚಾಲಯ ನಿರ್ಮಾಣಕ್ಕೆ ಪಂಚಾಯ್ತಿಗಳು ಒತ್ತು ನೀಡುತ್ತಿವೆ. ಜನರೂ ಸಹ ಶೌಚಾಲಯ ನಿರ್ಮಿಸಿಕೊಳ್ಳಲು ಮುಂದಾಗಬೇಕು ಎಂದರು.
ಕುದೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗಂಗಮ್ಮ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯೆ ಹಂಸಕುಮಾರಿ, ತಾ.ಪಂ. ಅಧ್ಯಕ್ಷ ಎಸ್. ಕಾಂತರಾಜು, ಉಪಾಧ್ಯಕ್ಷೆ ಭಾರತಿ ಮಹದೇವಯ್ಯ, ಮಾಜಿ ಉಪಾಧ್ಯಕ್ಷ ಕೆ.ಜಿ. ಉದ್ದೀಶ್, ಶ್ರೀಗಿರಿಪುರ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್, ಕುದೂರು ಗ್ರಾ.ಪಂ. ಮಾಜಿ ಅಧ್ಯಕ್ಷ
ಟಿ. ಹನುಮಂತರಾಯಪ್ಪ, ಕುತ್ತನಿಗೆರೆ ಗಂಗರಾಜು, ಸಿದ್ದಲಿಂಗಪ್ಪ, ಕಿಟ್ಟಿ, ನಾಗೇಂದ್ರ, ನಾಗರಾಜು ಪಿಡಿಓ ಸೈಯದ್ ಪಾಷಾ, ವಿಜಯಕುಮಾರ್, ಜೈಕುಮಾರ್, ಎಂ.ರವೀಶ್, ಸಿದ್ದಲಿಂಗೇಶ್ವರ್, ವೆಂಕಟೇಶ್, ಮಂಜು ಕಾಲೇಜು ಪ್ರಾಂಶುಪಾಲ ಡಾ. ರಮೇಶ್ ಇತರರು ಇದ್ದರು.