ಕ.ಪ್ರ.ವಾರ್ತೆ, ಮಾಗಡಿ, ಜು.17
ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಬಾಂಧವ್ಯ ಚೆನ್ನಾಗಿದ್ದರೆ ಮಾತ್ರ ಸರ್ಕಾರಿ ಯೋಜನೆಗಳು ಪೂರ್ಣವಾಗಿ ಯಶಸ್ವಿಯಾಗುತ್ತದೆ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ. ಮುದ್ದುರಾಜ ಯಾದವ್ ಅಭಿಪ್ರಾಯಪಟ್ಟರು.
ಅವರು ಮಾಗಡಿ ತಾಲೂಕಿನ ಸಾತನೂರು ಪಂಚಾಯ್ತಿ ವ್ಯಾಪ್ತಿಯ ಹಾಲಶೆಟ್ಟಿಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ಆಂಜನೇಯ ಸಾವಯವ ಕೃಷಿಕರ ಸಂಘದ ಸಹಯೋಗದಲ್ಲಿ ಸಾವಯವ ಭಾಗ್ಯ ಯೋಜನೆಯಡಿ ರೈತರಿಗೆ ಸಾವಯವ ಕೃಷಿ ಕುರಿತು ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿ ಬೇಸಾಯ ರೈತರಿಗೆ ಶಾಪವಲ್ಲ, ಇಲಾಖೆ ಸೂಚಿಸುವ ವೈಜ್ಞಾನಿಕ ಪದ್ಧತಿಯಡಿ ಕೃಷಿಯ ಜೊತೆಗೆ ಉಪ ಕಸಬುಗಳನ್ನು ರೂಢಿಸಿಕೊಂಡು ಉತ್ತಮ ಬೆಳೆ ತೆಗೆದರೆ ನಿರೀಕ್ಷಿತ ಆದಾಯ ಪಡೆಯಬಹುದು ಎಂದರು. ಬಸವನಗುಡಿಪಾಳ್ಯ, ದಂಡಿನಪಾಳ್ಯದಲ್ಲಿ ಹತ್ತಾರು ಕೊಳವೆ ಬಾವಿ ಕೊರೆದರೂ ನೀರು ಲಭಿಸಿಲ್ಲವಾದ್ದರಿಂದ ಜಿಲ್ಲಾ ಪಂಚಾಯ್ತಿ ಸಿಇಓ ಅಧಿಕಾರಿಗಳು ಇಲ್ಲಿನ ಜನತೆಗೆ ನೀರು ಒದಗಿಸಲು ಪರ್ಯಾಯ ವ್ಯವಸ್ಥೆ ಕಂಡು ಹಿಡಿಯಬೇಕಿದೆ ಎಂದು ಮುದ್ದುರಾಜ ಯಾದವ್ ಹೇಳಿದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಮಾತನಾಡಿ,ಗ್ರಾಮೀಣ ರೈತರು ತಾಯಿಯಿದ್ದಂತೆ, ನಗರ ಪ್ರದೇಶದ ಜನತೆ ಮಕ್ಕಳಿಗೆ ಸಮ, ರೈತರು ಪೌಷ್ಟಿಕ ಆಹಾರ ಉತ್ಪಾದನೆ ಮಾಡುವ ಮೂಲಕ ನಗರ ಪ್ರದೇಶದ ಜನತೆ ಹೊಟ್ಟೆ ತುಂಬಿಸಲು ಹಸಿರು ಕ್ರಾಂತಿಯಾಯಿತು. ಅಚ್ಚುಕಟ್ಟು ಪ್ರದೇಶವೂ ವಿಸ್ತಾರಗೊಂಡಿತು.
ಆದರೆ, ಅಧಿಕ ಆಹಾರ ಉತ್ಪಾದನೆ ಮಾಡುವ ದೃಷ್ಟಿಯಿಂದ ಬೆಳೆಯಲ್ಲಿ ಅಧಿಕ ರಾಸಾಯನಿಕ ಗೊಬ್ಬರ ಬಳಸಿದ ಪರಿಣಾಮದಿಂದಾಗಿ ಶೇ.70 ರಷ್ಟು ಮಂದಿಗೆ ಮಧುಮೇಹ,ಬಿಪಿ, ಕೀಲು ನೋವು ಹೀಗೆ ಅನೇಕ ರೋಗದಿಂದ ನರಳುತ್ತಿದ್ದಾರೆ. ಇತ್ತ ಭೂಮಿಯೂ ಸಹ ಬಂಜರಾಗಿದೆ. ಆದ್ದರಿಂದ ರೈತರು ಸ್ವಾಭಾವಿಕವಾಗಿ ಸಿಗುವ ಹಸಿರೆಲೆಗೊಬ್ಬರ, ಎರೆಗೊಬ್ಬರಗಳನ್ನು ಹೆಚ್ಚೆಚ್ಚು ಕೃಷಿಯಲ್ಲಿ ಬಳಸಿ, ಭೂಮಿಯ ಫಲವತ್ತತೆ ಹೆಚ್ಚಿಸಿ, ವೈಜ್ಞಾನಿಕ ಪದ್ಧತಿಯಲ್ಲಿ ರೈತರು ಬೆಳೆ ಬೆಳೆಯುವ ಮೂಲಕ ಜನತೆಗೆ ಪೌಷ್ಟಿಕ ಆಹಾರ ಲಭಿಸುತ್ತದೆ.
ಈ ನಿಟ್ಟಿನಲ್ಲಿ ಜನರ ಜೀವನ ಹಸನು ಮಾಡಬೇಕಿದೆ ಎಂದರು. ರೈತರು ಕೃಷಿಯಲ್ಲಿ ಕಡ್ಡಾಯವಾಗಿ ರಾಸಾಯನಿಕ ಗೊಬ್ಬರ ನಿಯಂತ್ರಿಸಿ, ಪೌಷ್ಟಿಕ ಆಹಾರ ಉತ್ಪಾದನೆಗೆ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ತಾ.ಪಂ.ಅಧ್ಯಕ್ಷ ಎಸ್.ಕಾಂತರಾಜು ತಿಳಿಸಿದರು.
ಇದೇ ವೇಳೆ ಜಂಟಿ ನಿರ್ದೇಶಕ ಅಣ್ಣಯ್ಯ ಸೇರಿದಂತೆ ಮತ್ತಿತರರು ಮಾತನಾಡಿದರು.
ಮಾಗಡಿ ತಾ.ಪಂ. ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಜಿ. ಕೃಷ್ಣ, ಸಹಾಯಕ ಕೃಷಿ ನಿರ್ದೇಶಕ ಎಚ್.ಸಿ. ಕೃಷ್ಣಪ್ಪ, ಸಾತನೂರು ಗ್ರಾ.ಪಂ. ಅಧ್ಯಕ್ಷ ಮಂಜುನಾಥ್, ಸಂಪತ್ ಕುಮಾರ್, ಇಕ್ರಾ ಸಂಸ್ಥೆಯ ನಾಗರಾಜು, ಆಂಜನೇಯ ಸಾವಯವ ಕೃಷಿಕ ಸಂಘ, ಶ್ರೀ ಲಕ್ಷ್ಮೀದೇವಿ ಸಾವಯವ ಕೃಷಿಕ ಸಂಘದ ಪದಾಧಿಕಾರಿಗಳು, ಸಂಯೋಜಕ ಕೆ.ಜಿ. ಹೊಳೆಜ್ಜಿರ್ ಎಸ್.ಎಚ್. ಶ್ರೀನಿವಾಸ್, ಮಹೇಶ್, ಬಾಲಾಜಿ ನಾಯಕ್ ಕೃಷಿ ಅಧಿಕಾರಿಗಳಾದ ಹರಿಶಂಕರ್, ಯೋಗೀಶ್, ಆನಂದ್ ಇತರರು ಇದ್ದರು.