ಮತ್ತೀಕೆರೆ ಜಯರಾಮ
ರಾಮನಗರ: ಇಲ್ಲಿನ ನಗರಸಭೆಯಲ್ಲಿ ನಡೆದಿರುವ ಅಕ್ರಮ ಖಾತೆಗಳ ಕರ್ಮಕಾಂಡದ ಬಗ್ಗೆ ಪ್ರಾಥಮಿಕ ಹಂತದ ತನಿಖಾ ವರದಿ ಸಲ್ಲಿಸಿದ ಪೌರಾಯುಕ್ತ ಯಶವಂತ ಕುಮಾರ್ ಎತ್ತಂಗಡಿಯಾಗಿದ್ದು, ಇದು ಹಗರಣವನ್ನು ಹಳ್ಳ ಹಿಡಿಸುವ ಷಡ್ಯಂತ್ರವೇ ಎನ್ನುವ ಅನುಮಾನ ಮೂಡಿದೆ.
ಪುರಪಿತೃಗಳ ನಿಯೋಗದ ದೂರಿನ ಮೇರೆಗೆ ಜಿಲ್ಲಾಧಿಕಾರಿ ಜಮಾದಾರ್ ಹಗರಣದ ತನಿಖೆಯನ್ನು ಯಶವಂತಕುಮಾರ್ ಅವರಿಗೆ ವಹಿಸಿದ್ದರು. ಅವರು ಸಲ್ಲಿಸಿದ ವರದಿ ಆಧರಿಸಿ ಸಮಗ್ರ ತನಿಖೆ ಜವಬ್ದಾರಿಯನ್ನು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶೈಲಜಾ ಅವರಿಗೆ ನೀಡಿದ್ದಾರೆ.
ಇತ್ತ ಶೈಲಜಾ ಅವರು 240ಕ್ಕೂ ಹೆಚ್ಚು ಖಾತಾ ರಿಜಿಸ್ಟರ್ ಪುಸ್ತಕಗಳನ್ನು ವಶಕ್ಕೆ ತೆಗೆದುಕೊಂಡು, ತನಿಖೆ ಕೈಗೆತ್ತಿಕೊಳ್ಳುತ್ತಿದ್ದಂತೆಯೇ ಅತ್ತ ಸರ್ಕಾರದಿಂದ ಯಶವಂತ ಕುಮಾರ್ ಎತ್ತಂಗಡಿ ಆದೇಶ ಹೊರ ಬಿದ್ದಿದೆ. ಇದು ಸಹಜವಾಗಿಯೇ ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೆಡೆ ಮಾಡಿದೆ.
ತನಿಖೆಗೆ ಅಡ್ಡಿ ಹೇಗೆ: ನಗರಸಭೆಯಲ್ಲಿ ಆಗಿರುವ 1500ಕ್ಕೂ ಅಧಿಕ ಅಕ್ರಮ ಖಾತೆಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟು, ಹಗರಣದ ಉದ್ದ ಮತ್ತು ಆಳವನ್ನು ಪತ್ತೆ ಹಚ್ಚಿದ ಯಶವಂತ ಕುಮಾರ್ ಅವರು ಹಾಲಿ ಹುದ್ದೆಯಲ್ಲೇ ಮುಂದುವರಿದಿದ್ದರೆ ಸಹಜವಾಗಿಯೇ ತನಿಖೆಗೆ ಅನುಕೂಲ ಆಗುತ್ತಿತ್ತು.
ತಾವು ಸಲ್ಲಿಸಿದ ಪ್ರಾಥಮಿಕ ಹಂತದ ತನಿಖಾ ವರದಿಯಲ್ಲಿ ಯಶವಂತ ಕುಮಾರ್ ಹಗರಣಕ್ಕೆ ಸಂಬಂಧಿಸಿದಂತೆ ಕೇವಲ ಸ್ಯಾಂಪಲ್ಗಳನ್ನಷ್ಟೇ ನೀಡಿದ್ದಾರೆ. ಪ್ರಭಾವಿಗಳಿಗೆ ಸಂಬಂಧಿಸಿದ ಹಗರಣಗಳು ಪ್ರಸ್ತಾಪವಾಗಿರಲಿಲ್ಲ. ಹಾಗೆಂದು ಅವೆಲ್ಲವೂ ಯಶವಂತ ಕುಮಾರ್ ಕಣ್ಣಿಗೆ ಬಿದ್ದೇ ಇಲ್ಲ ಎನ್ನುವಂತಿಲ್ಲ.
ಈಗ ಶೈಲಜಾ ನೇತೃತ್ವದಲ್ಲಿ ಪ್ರಾರಂಭವಾಗಿರುವ ತನಿಖೆ ಸಂದರ್ಭದಲ್ಲಿ ಆಯುಕ್ತ ಹುದ್ದೆಯಲ್ಲಿ ಯಶವಂತ ಕುಮಾರ್ ಅವರನ್ನೇ ಮುಂದುವರಿಸಿದ್ದರೆ, ತಾವು ಗಮನಿಸಿಯೂ ಪ್ರಾಥಮಿಕ ವರದಿಯಲ್ಲಿ ಪ್ರಸ್ತಾಪ ಮಾಡದಿದ್ದ ಇನ್ನಷ್ಟು ಹಗರಣಗಳನ್ನು ಈಗ ಬಿಚ್ಚಿಡುವ ಸಾಧ್ಯತೆ ಇತ್ತು.
ಅನುಮಾನ ಕಾಡುತ್ತಿತ್ತು: ರಾಮನಗರ ಜಿಲ್ಲೆಯಲ್ಲಿ ಅಧಿಕಾರಿಗಳ ತಲೆದಂಡದ ವಿಷಯ ಹೊಸದೇನಲ್ಲ. ಆಯಕಟ್ಟಿನ ಹುದ್ದೆಗಳಲ್ಲಿ ವರ್ಷ ತುಂಬಿಸದೇ ಹೋದವರೇ ಹೆಚ್ಚು. ಯಾವಾಗ ಖಾತಾ ಕರ್ಮಕಾಂಡದ ತನಿಖೆ ಪ್ರಾರಂಭವಾಯಿತೋ ಅದಾಗಲೇ ಜಿಲ್ಲಾಧಿಕಾರಿ ಇಲ್ಲವೇ ನಗರಸಭೆ ಆಯುಕ್ತರ ಎತ್ತಂಡಿ ಅನುಮಾನ ಶುರುವಾಗಿತ್ತು.
ನಿರೀಕ್ಷೆಯಂತೆಯೇ ಈಗ ಯಶವಂತ ಕುಮಾರ್ ಎತ್ತಂಗಡಿ ಆಗಿದ್ದಾರೆ. ಈ ಹಿಂದೆ ಭೂ ಮಾಫಿಯಾ, ಮರಳು ದಂಧೆಕೋರರ ಪ್ರಭಾವಕ್ಕೆ ತಲಾ ಒಬ್ಬರು ಜಿಲ್ಲಾಧಿಕಾರಿ ಎತ್ತಂಗಡಿ ಆಗಿದ್ದರು. ನಗರ ಮತ್ತು ಪಟ್ಟಣಗಳಲ್ಲಿ ಒತ್ತುವರಿ ತೆರವಿಗೆ ನಿಂತ ಇನ್ನೊಬ್ಬ ಡಿಸಿ ಕೂಡ ವರ್ಷ ಆರೇ ತಿಂಗಳಲ್ಲಿ ಜಿಲ್ಲೆ ಆಚೆಗೆ ದೂಡಲ್ಪಟ್ಟಿದ್ದರು.
ಅಕ್ರಮ ಖಾತೆ ಕರ್ಮಕಾಂಡದಲ್ಲಿ ಸ್ವತಃ ನಗರದ ಪ್ರಥಮ ಪ್ರಜೆಯೂ ಸೇರಿದಂತೆ ಪಕ್ಷಾತೀತವಾಗಿ ಹಾಲಿ ಮತ್ತು ಮಾಜಿ ಪುರಪಿತೃಗಳಿದ್ದಾರೆ. ಅವರ ಕಬಂಧಬಾಹು ವಿಧಾನಸೌಧದವರೆಗೂ ಚಾಚಿರುವುದಕ್ಕೆ ಆಯುಕ್ತರ ತಲೆದಂಡ ಪಡೆದಿರುವುದೇ ಸಾಕ್ಷಿ. ಅಕ್ರಮಗಳ ವಿರುದ್ಧ ಸಮರ ಮುಂದುವರಿಸಿದ್ದೇ ಆದರೆ ಜಿಲ್ಲಾಧಿಕಾರಿ ಜಮಾದಾರ್ ಎತ್ತಂಗಡಿಗೂ ಮುಹೂರ್ತ ನಿಗದಿ ಆದರೂ ಅಚ್ಚರಿ ಇಲ್ಲ.
ಅನಿವಾರ್ಯ ಆಗಿತ್ತೇ?: ಯಶವಂತ ಕುಮಾರ್ ಈ ಹಿಂದೆಯೇ ವರ್ಗಾವಣೆ ಬಯಸಿದ್ದರು. ಆಗ ಅವರನ್ನು ರಾಮನಗರ ನಗರಸಭೆಯಿಂದ ಬಿಡುಗಡೆಗೊಳಿಸಲು ಮನಸ್ಸು ಮಾಡದ ಜನ ನಾಯಕರು ಈಗ ಖಾತೆ ಕರ್ಮಕಾಂಡದಂತಹ ಬಹುದೊಡ್ಡ ಭ್ರಷ್ಟಾಚಾರ ಪ್ರಕರಣ ತನಿಖಾ ಹಂತದಲ್ಲಿರುವಾಗ ಉಳಿಸಿಕೊಳ್ಳಲು ಬಯಸಲಿಲ್ಲ ಏಕೆ ಎನ್ನುವ ಪ್ರಶ್ನೆ ಎದುರಾಗಿದೆ.
ರಾಮನಗರ ಕ್ಷೇತ್ರ ಪ್ರತಿನಿಧಿಸುತ್ತಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅಥವಾ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಈ ಇಬ್ಬರ ಪೈಕಿ ಯಾರೊಬ್ಬರು ಮನಸ್ಸು ಮಾಡಿದ್ದರೂ ಆಯುಕ್ತರ ವರ್ಗಾವಣೆ ತಡೆಯಬಹುದಿತ್ತು. ಈ ವಿಷಯದಲ್ಲಿ ಅವರಿಬ್ಬರೂ ಆಸಕ್ತಿ ತೋರದಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಆಯುಕ್ತ ವಿರುದ್ಧ ಆಕ್ರೋಶ
ರಾಮನಗರ ನಗರಸಭೆಯಲ್ಲಿ ಶುಕ್ರವಾರ ಆಯುಕ್ತ ಯಶವಂತ ಕುಮಾರ್ ಅವರ ಕಚೇರಿಗೆ ತೆರಳಿದ ಗುಂಪೊಂದು, ಖಾತಾ ಅಕ್ರಮ ಬಯಲಿಗೆಳೆದ ವಿಷಯವಾಗಿ ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿತು. ಅದರ ಹಿಂದೆ ಕೆಲಸ ಮಾಡಿದ ಕಾಣದ ಕೈ ಯಾವುದು ಎನ್ನುವ ವಿಷಯ ಈಗ ಚರ್ಚೆಗೆ ಗ್ರಾಸವಾಗಿದೆ. ಅಕ್ರಮ ಖಾತೆಗಳ ಹಗರಣದಲ್ಲಿ ನಗರಸಭೆ ಅಧ್ಯಕ್ಷ ಆರೀಫ್ ಖುರೇಷಿ ಹೆಸರು ಎಳೆದು ತಂದಿರುವುದು, ಪ್ರಾಥಮಿಕ ತನಿಖಾ ವರದಿಯಲ್ಲಿ ಕೆಲವೇ ವ್ಯಕ್ತಿಗಳ ಅಕ್ರಮ ಖಾತೆಗಳನ್ನು ಪ್ರಸ್ತಾಪಿಸಿರುವ ಬಗ್ಗೆ ಕೋಪೋದ್ರಿಕ್ತ ಗುಂಪು ಆಕ್ಷೇಪಿಸಿತು. ಮಾಧ್ಯಮಗಳಿಗೆ ನೀವೇ ಮಾಹಿತಿ ಒದಗಿಸಿ ಹಗರಣದ ಬಗ್ಗೆ ಸರಣಿ ರೂಪದಲ್ಲಿ ಬರುವಂತೆ ಮಾಡಿದ್ದೀರಿ ಎನ್ನುವ ಆರೋಪವೂ ಕೇಳಿ ಬಂದಿತು. ಏತನ್ಮಧ್ಯೆ, ನಗರಸಭೆ ಆವರಣದಲ್ಲಿದ್ದ ಕೆಲ ಪತ್ರಕರ್ತರನ್ನು ಕರೆದು ದಿಢೀರ್ ಸುದ್ದಿಗೋಷ್ಠಿ ನಡೆಸಿದ ಅಧ್ಯಕ್ಷ ಆರೀಫ್ ಖುರೇಷಿ ಆಯುಕ್ತ ಯಶವಂತ ಕುಮಾರ್ ಕರ್ತವ್ಯಲೋಪ ಎಸಗಿದ್ದಾರೆ. ಕರ್ತವ್ಯಕ್ಕೆ ಹಾಜರಾಗಿಯೂ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿಲ್ಲ.
ಮೌನ ವಹಿಸಿದ ದೂರುದಾರರು
ರಾಮನಗರ ನಗರಸಭೆಯಲ್ಲಿ ನಡೆದಿರುವ ಅಕ್ರಮ ಖಾತೆಗಳ ಹಗರಣವು ರಾ-ಚ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಲೂಟಿಯಾದ ಮೊತ್ತಕ್ಕಿಂತ ಹತ್ತು ಪಟ್ಟು ಅಧಿಕವಾಗಿದೆ. ಇಂಥದ್ದೊಂದು ಹಗರಣದ ಬಗ್ಗೆ ಜಿಲ್ಲಾಧಿಕಾರಿಗೆ ದೂರಿತ್ತ ಜೆಡಿಎಸ್ನ 12 ಮಂದಿ ಪುರಪಿತೃಗಳು ಇದೀಗ ತುಟಿ ಪಿಟಿಕ್ ಎನ್ನದೆ ಮೂಕ ಪ್ರೇಕ್ಷಕರಾಗಿದ್ದಾರೆ. ಹಗರಣದಲ್ಲಿ ಕಾಂಗ್ರೆಸ್ ಮಾತ್ರವಲ್ಲದೆ ಜೆಡಿಎಸ್ ಪಕ್ಷಕ್ಕೆ ಸೇರಿದ ಪ್ರಭಾವಿಗಳು, ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳೂ ಇದ್ದಾರೆ. ರಿಯಲ್ ಎಸ್ಟೇಟ್ ಮತ್ತು ಅಕ್ರಮ ದಂಧೆಗಳ ವಿಷಯದಲ್ಲಿ ಪಕ್ಷಾತೀತ ವ್ಯಾವಹಾರಿಕ ಸಂಬಂಧ, ಸಂಪರ್ಕ ಇರುವುದು ಜಗಜ್ಜಾಹೀರ ಸತ್ಯ. ನಗರಸಭೆ ಅಧ್ಯಕ್ಷರ ಸ್ವಂತ ನಿವೇಶನಗಳ ಖಾತೆಯೇ ಅಕ್ರಮ ಎನ್ನುವ ಸ್ಫೋಟಕ ಮಾಹಿತಿ ಹೊರ ಬಿದ್ದಾಗಲೂ ಆ ಬಗ್ಗೆ ಸೊಲ್ಲೆತ್ತುವ ಧೈರ್ಯ, ಸಾಮಾಜಿಕ ಕಳಕಳಿಯನ್ನು ಜೆಡಿಎಸ್ ಪುರಪಿತೃಗಳು ಪ್ರದರ್ಶಿಸಿಯೇ ಇಲ್ಲ. ಒಟ್ಟಾರೆ, ಅಕ್ರಮಗಳಿಗೆ ಕೊನೆಯೇ ಇಲ್ಲದಂತಾಗಿದೆ.