ರಾಮನಗರ: ಹೆಣ್ಣು ಮಕ್ಕಳ ಸುರಕ್ಷತೆ ವಿಷಯದಲ್ಲಿ ಸರ್ಕಾರದ ಮಾತಿಗೂ ಕೃತಿಗೂ ತಾಳೆಯೇ ಇಲ್ಲ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ವಾರಕ್ಕೆರಡು ಬಾರಿ ಸಂಚರಿಸುವ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲೇ ಶಾಲೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರ ಗೋಳು ಕೇಳೋರಿಲ್ಲ.
ಈ ಹೆದ್ದಾರಿಯಲ್ಲಿ ಇತ್ತ ರಾಮನಗರ, ಅತ್ತ ಮಂಡ್ಯ ಜಿಲ್ಲೆಗಳಿಗೆ ಕೊಂಡಿಯಾಗಿರುವ ಚನ್ನಪಟ್ಟಣ ಮತ್ತು ಮದ್ದೂರು ನಡುವೆ ಒಂದೇ ಒಂದು ಷಟಲ್ ಬಸ್ ಸಂಚಾರವಿಲ್ಲ. ಈ ಪರಿಣಾಮ ಶಾಲೆ, ಕಾಲೇಜಿಗೆ ತೆರಳಲು ಆಟೋಗಳನ್ನೇ ಅವಲಂಬಿಸಿದ ಹೆಣ್ಣು ಮಕ್ಕಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಉಭಯ ಪಟ್ಟಣಗಳು 20 ಕಿ.ಮೀ. ಅಂತರದಲ್ಲಿವೆ. ರಾಮನಗರ ಮತ್ತು ಮಂಡ್ಯ ಎರಡೂ ಜಿಲ್ಲೆಗಳಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ಕಚೇರಿ ಇವೆ. ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಈ ನಾಲ್ಕೂ ಕಡೆ ನಿಗಮದ ಘಟಕಗಳಿದ್ದರೂ ಷಟಲ್ ಬಸ್ ಸಂಚಾರ ಇಲ್ಲದಿರುವುದು ಸಾರಿಗೆ ಸೇವೆಯಲ್ಲಿ ವೈಫಲ್ಯಕ್ಕೆ ಕೈಗನ್ನಡಿಯೇ ಸರಿ.
ತಪ್ಪದ ಆಟಾಟೋಪ: ಚನ್ನಪಟ್ಟಣ ಮತ್ತು ಮದ್ದೂರು ನಡುವೆ ಆಟೋಗಳದ್ದೇ ಅಬ್ಬರ. ಆಪೇ ಆಟೋಗಳಲ್ಲೂ ಚಾಲಕ ಸಹಿತ 4 ಮಂದಿ ಪ್ರಯಾಣಕ್ಕಷ್ಟೇ ಕಾನೂನಿನಲ್ಲಿ ಅವಕಾಶ. ಆದರೆ, ಆಟೋಗಳ ವಿನ್ಯಾಸ ಬದಲಿಸಿ ಅದರಲ್ಲಿ 15 ರಿಂದ 20 ಮಂದಿಯನ್ನು ಕಸಾಯಿಖಾನೆಗೆ ಕರೆದೊಯ್ಯುವ ಪ್ರಾಣಿಗಳಂತೆ ತುಂಬಿಕೊಂಡು ಹೋಗುತ್ತಿದ್ದರೂ ಕೇಳೋರಿಲ್ಲ. ಈ ಮಾರ್ಗದ ಮುದಗೆರೆ-ಬೆಳಕೆರೆಯಲ್ಲಿ ಎಂಜಿನಿಯರಿಂಗ್ ಮತ್ತು ಪದವಿ ಕಾಲೇಜು, ಸ್ನಾತಕೋತ್ತರ ಕೇಂದ್ರ, ಸೋಮನಹಳ್ಳಿ, ಮತ್ತೀಕೆರೆ-ಶೆಟ್ಟಿಹಳ್ಳಿಯಲ್ಲಿ ಕೇಂದ್ರೀಯ ಪುರಸ್ಕೃತ ಆದರ್ಶ ವಿದ್ಯಾಲಯ, ಪದವಿ ಪೂರ್ವ ಕಾಲೇಜು, ಬೈರಾಪಟ್ಟಣದಲ್ಲಿ ಕಸ್ತೂರಬಾ ಹೆಣ್ಣು ಮಕ್ಕಳ ಶಾಲೆ, ಸೋಮನಹಳ್ಳಿಯಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ತಂದೆ ಎಸ್.ಸಿ.ಮಲ್ಲಯ್ಯ ಹೆಸರಿನ ಬೃಹತ್ ವಿದ್ಯಾ ಸಂಸ್ಥೆ ಇದೆ. ಮಾರ್ಗ ಮಧ್ಯೆ ಇನ್ನೂ ನಾಲ್ಕಾರು ಶಾಲೆಗಳಿವೆ. 6 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿ ಪಾಸುಗಳಿವೆ. ಈ ಪೈಕಿ 3 ಸಾವಿರದಷ್ಟು ವಿದ್ಯಾರ್ಥಿನಿಯರಿದ್ದು, ಅವರೆಲ್ಲರೂ ಮಾಸಿಕ ಪಾಸು ಶುಲ್ಕ ಪಾವತಿಸಿಯೂ ಅನಿವಾರ್ಯವಾಗಿ ಆಟೋಗಳಲ್ಲಿ ಸಂಚರಿಸಬೇಕಿದೆ. ಆ ವೇಳೆ ಅದೆಷ್ಟೋ ಹೆಣ್ಣು ಮಕ್ಕಳು ಕಾಮುಕರ ಉಪಟಳ ಅನುಭವಿಸಿದ್ದಾರೆ. ದೌರ್ಜನ್ಯದ ಆತಂಕ: ಹೇಳಿ ಕೇಳಿ ಆಟೋಗಳಲ್ಲಿ ಹೋಂ ಥಿಯೇಟರ್ ನಿರ್ಮಿಸುವಷ್ಟು ಶಬ್ದಮಾಲಿನ್ಯ ಉಂಟು ಮಾಡುವ ರೀತಿಯಲ್ಲಿ ಸೌಂಡ್ ಸಿಸ್ಟಂ ಮೊಳಗುತ್ತಿರುತ್ತದೆ. ಕುಳಿತರೆ ನಿಲ್ಲಲಾಗದ, ನಿಂತರೆ ಕಾಲಿಡಲಾಗದ ಸ್ಥಿತಿಯಲ್ಲಿ ಪ್ರಯಾಣಿಸುವಾಗ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುವ ಆತಂಕ ಇದ್ದೇ ಇರುತ್ತದೆ. ಇಂತಹ ಅವಕಾಶಕ್ಕಾಗಿಯೇ ಪ್ರಯಾಣಿಸುವ ಪುಂಡು, ಪೋಕರಿಗಳು ಇಲ್ಲಿ ಸಾಕಷ್ಟಿದ್ದಾರೆ. ಆಟೋಗಳಲ್ಲಿ ಹಿಂಬದಿ ಆಸನಗಳಲ್ಲಿ ಮಾತ್ರವಲ್ಲದೆ ಚಾಲಕನ ಆಸನದ ಅಕ್ಕಪಕ್ಕದಲ್ಲೂ ಇಬ್ಬರು ಕುಳಿತಿರುತ್ತಾರೆ. ಬಹುತೇಕ ಅವರೆಲ್ಲ ಪ್ರಯಾಣಿಕರಾಗಿರುವುದಿಲ್ಲ. ಚಾಲಕನ ನಿಕಟವರ್ತಿಗಳಾದ ಅವರಿಂದ ಹೆಣ್ಣು ಮಕ್ಕಳಿಗೆ ಅಪಾಯದ ಸಂಭವ ಹೆಚ್ಚಿರುತ್ತದೆ. ಹೆಸರು, ಓದುತ್ತಿರುವ ಶಾಲೆ, ತರಗತಿ ವಿಚಾರಿಸಿ ಕಡೆಗೆ ಮೊಬೈಲ್ ನಂಬರ್ ಕೇಳುವ ಮಟ್ಟಕ್ಕೆ ಹೋಗಿರುವ ನಿದರ್ಶನಗಳಿವೆ.
ಆಟೋದವರ ಲಾಬಿ: ಮದ್ದೂರು ತಾಲೂಕಿನ ರುದ್ರಾಕ್ಷಿಪುರ ಬಳಿ 9 ವರ್ಷದ ಹಿಂದೆ ಮ್ಯಾಕ್ಸಿಕ್ಯಾಬ್ ಅಪಘಾತದಲ್ಲಿ 18 ಮಂದಿ ಸಾವನ್ನಪ್ಪಿದಾಗ ಮಂಡ್ಯ ಮತ್ತು ಚನ್ನಪಟ್ಟಣ ನಡುವೆ 4 ಷಟಲ್ ಬಸ್ಸುಗಳ ಸಂಚಾರವನ್ನು ಆಗಿನ ಸಾರಿಗೆ ಸಚಿವ ಎನ್. ಚಲುವರಾಯಸ್ವಾಮಿ ಪ್ರಾರಂಭಿಸಿದ್ದರು. 3 ವರ್ಷದ ಹಿಂದೆ ರಾಮನಗರದಿಂದ ಕೆಂಗಲ್ ಸಾರಿಗೆ ಪ್ರಾರಂಭಿಸಿದಾಗ ಮಂಡ್ಯದಿಂದ ಬಸ್ ಸಂಚಾರ ಸ್ಥಗಿತವಾಯಿತು.
ಕೆಂಗಲ್ ಸಾರಿಗೆ ಹೆಸರಿನಲ್ಲಿ ರಾಮನಗರ ಮತ್ತು ಮದ್ದೂರು ನಡುವೆ ಷಟಲ್ ಬಸ್ ಸಂಚಾರ ಪ್ರಾರಂಭವಾಗುತ್ತಲೇ ಆಟೋದವರಿಗೆ ಪೆಟ್ಟು ಬಿದ್ದಿತು. ಆಗ ಅವರೆಲ್ಲ ಸೇರಿ ದಿನದ ಲೆಕ್ಕದಲ್ಲಿ ಅಧಿಕಾರಿಗಳಿಗೆ ಮಾಮೂಲು ತಲುಪಿಸಲಾರಂಭಿಸಿದರು. ಲಂಚಕ್ಕೆ ನಾಲಿಗೆ ಚಾಚಿದ ಅಧಿಕಾರಿಗಳು ಕಡೆಗೆ ಕೆಂಗಲ್ ಸಾರಿಗೆ ಷಟಲ್ ಬಸ್ ಸಂಚಾರಕ್ಕೆ ಸಂಚಕಾರ ತಂದೊಡ್ಡಿದ್ದಾರೆ.
ಈ ಭಾಗದ ಎಲ್ಲ ಪ್ರಯಾಣಿಕರೂ ಆಟೋಗಳನ್ನೇ ಅವಲಂಬಿಸಿದ್ದಾರೆ. ಜನರು ಗೋಳು ತೋಡಿಕೊಂಡರೂ ಜನಪ್ರತಿನಿಧಿಗಳೂ ಸಮಸ್ಯೆಗೆ ಸ್ಪಂದಿಸಿಲ್ಲ. ಆಟೋ ಲಾಬಿಗೆ ಅವರೂ ತಲೆಬಾಗಿದ್ದಾರೆಯೇ ಎನ್ನುವ ಅನುಮಾನ ಕಾಡುತ್ತಿದೆ.
ಸುಮ್ಮನಾದರೇ ಕಿಮ್ಮನೆ: ಕಳೆದ ತಿಂಗಳು ಮೈಸೂರಿನಿಂದ ಬೆಂಗಳೂರು ಕಡೆ ತೆರಳುತ್ತಿದ್ದ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಮತ್ತೀಕೆರೆ-ಶೆಟ್ಟಿಹಳ್ಳಿಯ ಆದರ್ಶ ವಿದ್ಯಾಲಯಕ್ಕೆ ದಿಢೀರ್ ಭೇಟಿ ನೀಡಿದ್ದರು. ಆ ವೇಳೆ ಪೋಷಕರು, ಸಾರ್ವಜನಿಕರಿಂದ ದೂರು ಆಲಿಸಿ ಹೋದ ಅವರು ಏನೂ ಕ್ರಮ ಕೈಗೊಳ್ಳದೆ ಸುಮ್ಮನಾಗಿದ್ದಾರೆ.
-ಮತ್ತೀಕೆರೆ ಜಯರಾಮ್