ಮತ್ತೀಕೆರೆ ಜಯರಾಮ್
ರಾಮನಗರ: ಅಕ್ರಮ ಖಾತೆಗಳ ಕರ್ಮಕಾಂಡದ ವಿಷಯದಲ್ಲಿ ಚನ್ನಪಟ್ಟಣ ನಗರಸಭೆಯು ರಾಮನಗರವನ್ನೂ ಮೀರಿಸಿದೆ. ರಾಮನಗರದಲ್ಲಿ 1500 ಅಕ್ರಮ ಖಾತೆಗಳಾಗಿದ್ದರೆ, ಚನ್ನಪಟ್ಟಣದಲ್ಲಿ ಆ ಸಂಖ್ಯೆ ದುಪ್ಪಟ್ಟು ಆಗಿದೆ. ಆ ಪಟ್ಟಣದಲ್ಲಿರುವ ಭಾಗಶಃ ಬಡಾವಣೆಗಳೂ ಅನಧಿಕೃತವಾಗಿವೆ.
ಚನ್ನಪಟ್ಟಣದಲ್ಲಿ 15ಕ್ಕೂ ಹೆಚ್ಚು ಬಡಾವಣೆಗಳು ತಲೆ ಎತ್ತಿವೆ. ಈ ಪೈಕಿ ಕೆ.ಎಚ್.ಬಿ., ಆರ್.ಸಿ.ಯು.ಡಿ.ಎ. ನಿರ್ಮಿತ ಕಣ್ವ ಮತ್ತು ನಗರಸಭೆಯಿಂದಲೇ ರಚಿತವಾದ ಐ.ಡಿ.ಎಸ್.ಎಂ.ಟಿ. ಮೂರು ಬಡಾವಣೆಗಳಷ್ಟೇ ಅಧಿಕೃತ. ಉಳಿದವೆಲ್ಲ ಅನಧಿಕೃತ ಬಡಾವಣೆಗಳೇ ಆಗಿವೆ.
ಭೂ ಪರಿವರ್ತನೆ, ಅಭಿವೃದ್ಧಿ ಶುಲ್ಕ ಪಾವತಿ ಮತ್ತು ರಾ-ಚ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಕ್ಷೆ ಅನುಮೋದನೆ ಸಹಿತ ಯಾವುದೇ ನಿಯಮಗಳನ್ನು ಬಡಾವಣೆ ನಿರ್ಮಾತೃಗಳು ಪಾಲಿಸಿಯೇ ಇಲ್ಲ. ಈ ಬಡಾವಣೆ ನಿವೇಶನಗಳಿಗೆ ಅಕ್ರಮ ಖಾತೆ ಮಾಡಿಕೊಡುವಲ್ಲಿ ದೊಡ್ಡ ಮಟ್ಟದಲ್ಲಿ ಡೀಲ್ ಕುದುರಿದೆ.
ಸಿದ್ದರಾಜು ಕರಾಮತ್ತು: ರಾಮನಗರ ನಗರಸಭೆಯಲ್ಲಿ ಒಂದು ವರ್ಷವಷ್ಟೇ ಸೇವೆ ಸಲ್ಲಿಸಿ ನಿವೃತ್ತರಾದ ಸಿದ್ದರಾಜು ಅವರದೇ ಸಹಿಗಳು ಅಕ್ರಮ ಖಾತೆ ಕಡತಗಳಲ್ಲಿ ರಾರಾಜಿಸುತ್ತಿವೆ. ಅರ್ಧದಷ್ಟು ಸಹಿ ಅಸಲಿಯಾದರೆ, ಇನ್ನರ್ಧದಷ್ಟು ನಕಲಿ ಇರಬಹುದೆನ್ನುವ ಶಂಕೆಯೂ ಇದೆ. ಈ ಸಂಗತಿಯನ್ನು ಈಚೆಗಷ್ಟೇ ತನಿಖಾ ವರದಿಯಲ್ಲಿ ಯಶವಂತ ಕುಮಾರ್ ಉಲ್ಲೇಖಿಸಿದ್ದಾರೆ. 1 ವರ್ಷದಲ್ಲಿ ಇಷ್ಟೆಲ್ಲಾ ಅವಾಂತರ ಸೃಷ್ಟಿಸಿದ ಸಿದ್ದರಾಜು, 5 ವರ್ಷ ಚನ್ನಪಟ್ಟಣದಲ್ಲಿ ಆಯುಕ್ತರಾಗಿದ್ದರು ಎಂದರೆ ಅಲ್ಲಿ ಇನ್ನೆಷ್ಟು ಅಕ್ರಮಗಳನ್ನು ಎಸಗಿರಬಹುದು?.
ಕಡತಕ್ಕೆ ಬೆಂಕಿಯಿಟ್ಟರು: ಚನ್ನಪಟ್ಟಣ ನಗರಸಭೆಯಿಂದ ಸಿದ್ದರಾಜು ನಿರ್ಗಮಿಸುವ ವೇಳೆಗೆ ಅಲ್ಲಿನ ಕಡತಗಳಿಗೆ ಬೆಂಕಿ ಬಿದ್ದಿತ್ತು. ಅದನ್ನು ಶಾರ್ಟ್ ಸರ್ಕ್ಯುಟ್ ಇಲ್ಲವೇ ಆಕಸ್ಮಿಕವೆಂದು ಬಿಂಬಿಸುವ ಪ್ರಯತ್ನ ನಡೆದಿತ್ತಾದರೂ ಅಸಲಿಗೆ ಅದು ಅಕ್ರಮಗಳನ್ನು ಮುಚ್ಚಿ ಹಾಕುವ ಷಡ್ಯಂತ್ರವೇ ಎನ್ನುವುದು ಜಗಜ್ಜಾಹೀರ ಸಂಗತಿ. ಸಿದ್ದರಾಜು ಪಳಗಿದ್ದೇ ಚನ್ನಪಟ್ಟಣದಲ್ಲಿ. ಅಲ್ಲಿನ ಸಿಬ್ಬಂದಿ ಮತ್ತು ದಲ್ಲಾಳಿಗಳು ಸಿದ್ದರಾಜು ಅವರನ್ನು ಬಳಸಿಕೊಂಡು ಅಕ್ರಮ ಖಾತೆಗಳನ್ನು ಮಾಡಿಸಿ ಹೇರಳವಾಗಿ ಹಣ ಲೂಟಿ ಮಾಡಿದ್ದನ್ನು ನಗರಸಭೆಯಲ್ಲಿರುವ ಪ್ರತಿ ಗೋಡೆ, ಕಿಟಕಿ, ಬಾಗಿಲುಗಳೂ ಮಾತನಾಡಿಕೊಳ್ಳುತ್ತಿವೆ.
ಸರ್ಕಾರಿ ಜಾಗ ಕಬಳಿಕೆ: ಬಡಾವಣೆಗಳನ್ನು ನಿರ್ಮಿಸುವಾಗ 33 ಅಡಿ ರಸ್ತೆ, ಉದ್ಯಾನವನ ಮತ್ತು ಸಾರ್ವಜನಿಕ ಉದ್ದೇಶಕ್ಕೆ ನಿಯಮಾನುಸಾರ ಜಾಗ ಬಿಡಬೇಕು. ಇದನ್ನು ಚನ್ನಪಟ್ಟಣದ ಯಾವುದೇ ಒಂದು ಬಡಾವಣೆಯಲ್ಲೂ ಪಾಲಿಸಿಲ್ಲ. ಆ ಬಡಾವಣೆಗಳಿಗೆ ಇನ್ನೂ ಮೂಲ ಸೌಲಭ್ಯಗಳು ಮರೀಚಿಕೆಯಾಗಿವೆ. ಪಂಚಾಯಿತಿ ವ್ಯಾಪ್ತಿ: ಹೊಸ ಬಡಾವಣೆಗಳು ನಗರದ ಸುತ್ತಲೂ ಇರುವ ತಗಚಕೆರೆ, ನೀಲಸಂದ್ರ, ರಾಂಪುರ, ವಂದಾರಗುಪ್ಪೆ, ತಿಟ್ಟಮಾರನಹಳ್ಳಿ ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಪ್ರದೇಶದಲ್ಲಿ ತಲೆ ಎತ್ತಿವೆ. ಬೃಹತ್ ಕಟ್ಟಡಗಳು ನಿರ್ಮಾಣವಾಗಿದ್ದರೂ ಆ ಬಡಾವಣೆಗಳು ಸೌಲಭ್ಯಗಳ ವಿಷಯದಲ್ಲಿ ಈಗಲೂ ಕೊಳಗೇರಿಯಂತಿವೆ. ಹೀಗೆ ರಚಿತವಾದ ಬಡಾವಣೆಗಳ ಸಾಕಷ್ಟು ನಿವೇಶನಗಳಿಗೆ ನಗರಸಭೆಯಲ್ಲಿ ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ. ರಾಮನಗರದಂತೆಯೇ ನಮೂನೆ 3 ಆಧರಿಸಿ ಮಾರಾಟ ಮಾಡಿದ್ದೂ ಉಂಟು. ಕಂದಾಯ ದಾಖಲೆಗಳಲ್ಲಿ ಆ ಜಾಗವಿನ್ನೂ ಕೃಷಿ ಜಮೀನು. ಕಬಳಿಕೆಯೂ ಆಗಿದೆ: ಚನ್ನಟಪ್ಟಣದಲ್ಲಿ ಸಾಕಷ್ಟು ಬಡಾವಣೆಗಳಲ್ಲಿ ರಾಜ ಕಾಲುವೆ ಸೇರಿದಂತೆ ಸಾಕಷ್ಟು ಸರ್ಕಾರಿ ಜಾಗ ಕಬಳಿಕೆಯೂ ಆಗಿದೆ. ಹೊಸ ಬಡಾವಣೆಗಳನ್ನು ರಚಿಸಿದವರು ಎ ಮತ್ತು ಬಿ ಖರಾಬು ಜಾಗವನ್ನೂ ಬಿಡದೆ ಅತಿಕ್ರಮಿಸಿದ್ದರೂ ಹೇಳೋರು ಕೇಳೋರಿಲ್ಲದಂತಾಗಿದೆ. ರಾಮನಗರದಂತೆಯೇ ಚನ್ನಪಟ್ಟಣದಲ್ಲೂ ಹಾಲಿ ಇದ್ದ ಕಡತಗಳಲ್ಲೇ ಉಪ ಸಂಖ್ಯೆಯನ್ನು ನೀಡಿ ಒಂದು ಕಳ್ಳ ಖಾತೆ ಕೂರಿಸಿ, ಅದಕ್ಕೆ ಸಂದಾಯ ಮಾಡಿದ ಆಸ್ತಿ ತೆರಿಗೆಯ ನಮೂನೆ 3 ಆಧರಿಸಿ ಹತ್ತಾರು ನಿವೇಶನಗಳನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.
ಕಂದಾಯ ಇಲಾಖೆ ಸಾಥ್: ಅನಧಿಕೃತ ಬಡಾವಣೆಗಳು ತಲೆ ಎತ್ತಿರುವ ಹಿಂದೆ ರಾ-ಚ ನಗರಾಭಿವೃದ್ಧಿ ಪ್ರಾಧಿಕಾರ ಮಾತ್ರವಲ್ಲದೆ ಕಂದಾಯ ಇಲಾಖೆ ಶಾಮೀಲಾಗಿದೆ. ಕೊತ್ತನಹಳ್ಳಿ ಕೆರೆ, ಶೆಟ್ಟಿಹಳ್ಳಿ ಕೆರೆಯ ಜಾಗವೂ ಸಾಕಷ್ಟು ಒತ್ತುವರಿ ಆಗಿದೆ. ಈ ನಗರಸಭೆಯಲ್ಲಿ ಬ್ಲೇಡ್ ಖಾತೆಗಳೂ ಲೆಕ್ಕವಿಲ್ಲದಷ್ಟಿವೆ. ಒತ್ತುವರಿ ಜಾಗ, ಕನ್ಸರ್ವೆನ್ಸಿ, ಸರ್ಕಾರಿ ಜಾಗದ ಒತ್ತುವರಿಗೂ ಖಾತೆ ಮಾಡಲಾಗಿದೆ. ತಿದ್ದುಪಡಿ ಹೆಸರಿನಲ್ಲಿ ಸಾಕಷ್ಟು ಬೋಗಸ್ ಮಾಡಿರುವುದಕ್ಕೆ ನಗರಸಭೆಯಲ್ಲಿರುವ ಕಡತಗಳೇ ಸಾಕ್ಷಿಯಾಗಿವೆ.
ಕಳ್ಳ ಖಾತೆ ಮಾಲೀಕರು
ಚನ್ನಪಟ್ಟಣ ನಗರಸಭೆಯಲ್ಲಿ ಹತ್ತಾರು ವರ್ಷ ಪುರಪಿತೃಗಳಾಗಿದ್ದವರು, ಸಿಬ್ಬಂದಿಯೂ ಸಹಿತ ಹಲವು ಪ್ರಭಾವಿಗಳ ಆಸ್ತಿಗೂ ಅಕ್ರಮ ಖಾತೆ ಆಗಿದೆ. ರಾಮನಗರದಂತೆಯೇ ಇಲ್ಲೂ ಸಮಗ್ರ ತನಿಖೆ ನಡೆದಿದ್ದೇ ಆದರೆ ಕಳ್ಳ ಖಾತೆ ನಿವೇಶನಗಳ ಮಾಲೀಕರ ನಿಜ ಬಣ್ಣ ಖಂಡಿತ ಬಯಲಾಗಲಿದೆ. ಈ ಸಂಸ್ಥೆಯಲ್ಲಿ ನಡೆದಿರುವ ಅಕ್ರಮಗಳಲ್ಲಿ ಪಕ್ಷಾತೀತವಾಗಿ ಪಾಲುದಾರಿಕೆ ಹೊಂದಿದ ತಿಮಿಂಗಿಲಗಳೇ ಇವೆ. ಅಕ್ರಮಗಳಲ್ಲಿ ಶಾಮೀಲಾದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ಕಬಳಿಕೆಯಾಗಿರುವ ಸರ್ಕಾರಿ ಆಸ್ತಿ, ರಾಜ ಕಾಲುವೆಗಳನ್ನು ಉಳಿಸುವ ಕೆಲಸ ಆಗಬೇಕಿದೆ.
ಶಾಸಕರು ಕಳಕಳಿ ತೋರಲಿ
ನೀರಾವರಿ ಯೋಜನೆ ಮೂಲಕ ಸ್ವಕ್ಷೇತ್ರದಲ್ಲಿ ನೀರಿನ ಬವಣೆ ನೀಗಿಸಲು ಸಂಕಲ್ಪತೊಟ್ಟಿರುವ ಶಾಸಕ ಸಿ.ಪಿ. ಯೋಗೇಶ್ವರ್ ಅವರು ಚನ್ನಪಟ್ಟಣವನ್ನು ಮಾದರಿ ನಗರವನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರಿ ಆಸ್ತಿ ಸಂರಕ್ಷಣೆಗೆ ದಿಟ್ಟ ಹೆಜ್ಜೆ ಇಡಬೇಕಿದೆ. ಇಡೀ ರಾಜ್ಯದಲ್ಲಿ ಒಂದೇ ಒಂದು ಸುಸಜ್ಜಿತ ಮತ್ತು ಸುಂದರ ಉದ್ಯಾನವನ ಇಲ್ಲದ ನಗರವೇನಾದರೂ ಇದ್ದರೆ ಅದು ಚನ್ನಪಟ್ಟಣವೇ. ಇಂತಹ ಕಡೆ ಸರ್ಕಾರಿ ಜಾಗದ ಒತ್ತುವರಿ ತೆರವುಗೊಳಿಸಿ, ಅಭಿವೃದ್ಧಿ ಯೋಜನೆ ಮತ್ತು ಸಾರ್ವಜನಿಕ ಉದ್ದೇಶಕ್ಕೆ ಬಳಸಲು ಮುಂದಾಗಬೇಕಿದೆ.