ರಾಮನಗರ ಜಿಪಂ ಕೈ ವಶ

Updated on: 

ರಾಮನಗರ: ಆಪರೇಷನ್ ಹಸ್ತ ಕಾರ್ಯಾಚರಣೆಯೊಂದಿಗೆ ಜೆಡಿಎಸ್ ಬಲ ಕುಗ್ಗಿಸಿದ  ಕಾಂಗ್ರೆಸ್ ನಿರೀಕ್ಷೆಯಂತೆಯೇ ರಾಮನಗರ ಜಿ.ಪಂ. ಚುಕ್ಕಾಣಿ ಕೈವಶ ಮಾಡಿಕೊಂಡಿದೆ. ಕಾಂಗ್ರೆಸ್ಸಿನ ಇಕ್ಬಾಲ್ ಹುಸೇನ್ ಪಾಲಿಗೆ ಅಧ್ಯಕ್ಷ ಸ್ಥಾನವು ರಂಜಾನ್ ಉಡುಗೊರೆಯಾದರೆ, ಸೌಭಾಗ್ಯಗೆ ಉಪಾಧ್ಯಕ್ಷ ಸ್ಥಾನದ ಭಾಗ್ಯ ಒಲಿದಿದೆ.  ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇಕ್ಬಾಲ್ ಹುಸೇನ್ 12 ಮತಗಳನ್ನು ಪಡೆದು, ಪ್ರತಿಸ್ಪರ್ಧಿ ಜೆಡಿಎಸ್ ವಿಜಯಕುಮಾರ್ ಅವರನ್ನು 4 ಮತಗಳ ಅಂತರದಿಂದ ಪರಾಭವಗೊಳಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಸೌಭಾಗ್ಯ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾದರು.
22 ಸದಸ್ಯ ಬಲದ ಜಿ.ಪಂ.ನಲ್ಲಿ ಜೆಡಿಎಸ್ 12 ಮತ್ತು ಕಾಂಗ್ರೆಸ್ 9 ಸದಸ್ಯರನ್ನು ಹೊಂದಿದ್ದವು. ಕೂಟಗಲ್ ಕ್ಷೇತ್ರದ ಸದಸ್ಯರಿಗೆ  ಮತದಾನ ಹಕ್ಕು ಇರಲಿಲ್ಲ. ವಾರದ ಹಿಂದೆಯೇ ವ್ಯವಹಾರ ಕುದುರಿಸಿದ್ದ ಕಾಂಗ್ರೆಸ್ ಗೆಲವಿನ ಗೆರೆ ದಾಟಲು ಅಗತ್ಯ ಸದಸ್ಯ ಬಲ ತನ್ನದಾಗಿಸಿಕೊಂಡಿತ್ತು.
ಅಡ್ಡ ಮತದಾನ: ಪತಿಯ ಚಿಕಿತ್ಸೆಗೆಂದು ಸಿಂಗಾಪುರಕ್ಕೆ ತೆರಳಿರುವ ಜೆಡಿಎಸ್ ಪಕ್ಷದ ಕಲ್ಪನಾ ಮಲ್ಲಿಕಾರ್ಜುನಗೌಡ ಅವರು ಸಭೆಗೆ ಗೈರಾಗಿದ್ದರು. ಸುಧಾ ರಾಜು, ಕೆ. ರಮೇಶ್ ಮತ್ತು ಎಸ್.ಬಿ. ಗೌರಮ್ಮ ಅವರು ಕಾಂಗ್ರೆಸ್ ಸದಸ್ಯರೊಡಗೂಡಿ ಸಭಾಂಗಣಕ್ಕೆ ಪ್ರವೇಶಿಸಿದ್ದಲ್ಲದೆ, ಆ ಪಕ್ಷದ ಪರ ಕೈ ಎತ್ತಿದರು.
ಅಡ್ಡಮತದಾನ ಮಾಡಿದ ಮೂವರು ಸದಸ್ಯರನ್ನು ಜೆಡಿಎಸ್ ಪಕ್ಷದ ಅಭ್ಯರ್ಥಿ ವಿಜಯಕುಮಾರ್ ತರಾಟೆಗೆ ತೆಗೆದುಕೊಂಡರೆ, ಮತ್ತೊಬ್ಬ ಸದಸ್ಯ ಎಂ.ಕೆ.ಧನಂಜಯ ಅವರು ವಾಚಾಮಗೋಚರ ನಿಂದಿಸಿದರಾದರೂ ಚುನಾವಣಾಧಿಕಾರಿ ಕ್ರಮ ಕೈಗೊಳ್ಳಲಿಲ್ಲ.
ಸಂಸದ ಅಭಿನಂದನೆ: ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಸಭಾಂಗಣಕ್ಕೆ ಆಗಮಿಸಿದ ಲೋಕಸಭಾ ಸದಸ್ಯ ಡಿ.ಕೆ. ಸುರೇಶ್  ತಮ್ಮ ಪರಮಾಪ್ತ ಗೆಳೆಯರೂ ಆದ ನೂತನ ಅಧ್ಯಕ್ಷ ಇಕ್ಬಾಲ್ ಹುಸೇನ್ ಹಾಗೂ ಉಪಾಧ್ಯಕ್ಷೆ ಸೌಭಾಗ್ಯ ಅವರನ್ನು ಅಭಿನಂದಿಸಿದರು.  ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ನಿಟ್ಟಿನಲ್ಲಿ ಪಕ್ಷಾತೀತವಾಗಿ ಕೆಲಸ ಮಾಡಬೇಕೆಂದು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಕಿವಿಮಾತು ಹೇಳಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಯದ್ ಜಿಯಾವುಲ್ಲಾ, ಮಾಜಿ ಶಾಸಕ ಎಸ್. ರವಿ, ಕೆಪಿಸಿಸಿ ಸದಸ್ಯ ಎ.ಮಂಜುನಾಥ್ ಮತ್ತಿತರರಿದ್ದರು.
ಫಲಿತಾಂಶ ನಿರೀಕ್ಷಿತ: ಚುನಾವಣೆಗೂ ಮೊದಲೇ ಕಾಂಗ್ರೆಸ್ ಪಾಳಯದಲ್ಲಿ ವಿಜಯದ ಸಂಭ್ರಮವಿತ್ತು. ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಜತೆ ಇಕ್ಬಾಲ್ ಹುಸೇನ್ ಅವರಿದ್ದ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ಜಿ.ಪಂ. ಹೊರಗೆ ಭಾರಿ ಸಂಖ್ಯೆಯಲ್ಲಿ ಕಾಂಗ್ರೆಸಿಗರು ಜಮಾಯಿಸಿದ್ದರು.  ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಪೂಜಾ ಕುಣಿತ, ತಮಟೆ ವಾದ್ಯ, ಕಿವಿಗಡಚಿಕ್ಕುವ ಪಟಾಕಿ ಸದ್ದಿನ ಜತೆಗೆ ಸಿಹಿ ಹಂಚುವ ಮೂಲಕ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತ್ತು ಇಕ್ಬಾಲ್ ಹುಸೇನ್ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು. ಇಕ್ಬಾಲ್ ಅವರನ್ನು ಹೊತ್ತು ಮೆರೆಸಿದರು.
ಹೊರಗಿಟ್ಟ ಚುನಾವಣಾಧಿಕಾರಿ
ಚುನಾವಣೆಯ ವರದಿ ಮಾಡಲು ತೆರಳಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಜಿ.ಪಂ. ಭವನ ಪ್ರವೇಶವನ್ನೇ ನಿರಾಕರಿಸಲಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಇದು ಚುನಾವಣಾಧಿಕಾರಿ ಗೌರವ್ ಗುಪ್ತಾ ಸೂಚನೆ ಎಂದು ಬಂದೋಬಸ್ತ್‌ಗೆ ನಿಯೋಜನೆಗೊಂಡಿದ್ದ ಪೊಲೀಸರು ಉತ್ತರಿಸಿದರು.
ಆ ವೇಳೆ ಮಾಧ್ಯಮ ಪ್ರತಿನಿಧಿಗಳು ಜಿ.ಪಂ. ಮುಖ್ಯ ದ್ವಾರದಲ್ಲೇ ಪ್ರತಿಭಟನೆಗೆ ಸಜ್ಜಾಗುತ್ತಿದ್ದಂತೆಯೇ ವಿಷಯ ತಿಳಿದ ಅಧಿಕಾರಿಗಳು ಭವನಕ್ಕೆ ಪ್ರವೇಶ ಕಲ್ಪಿಸಿದರು. ನಂತರ ಎಲ್ಲರನ್ನೂ ಸಭಾಂಗಣದ ಹೊರಗಿಟ್ಟು, ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಲಾಯಿತು.
ಚುನಾವಣೆ ಮುಗಿದ ತರುವಾಯ ಮಾಧ್ಯಮ ಪ್ರತಿನಿಧಿಗಳಿಗೆ ಸಭಾಂಗಣ ಪ್ರವೇಶಾವಕಾಶವನ್ನೇನೋ ಕಲ್ಪಿಸಲಾಯಿತು. ಆದರೆ, ಚುನಾವಣಾಧಿಕಾರಿ ಸಹಿತ ಯಾವೊಬ್ಬ ಅಧಿಕಾರಿಯೂ ಫಲಿತಾಂಶದ ನಿಖರ ಮಾಹಿತಿ ಒದಗಿಸದೆ ಜಾಗ ಖಾಲಿ ಮಾಡಿದ್ದರು.
ಜೆಡಿಎಸ್ ಪಕ್ಷದಿಂದ ಸೆಳೆದಿದ್ದ ಮೂವರೊಂದಿಗೆ ತಮ್ಮ ಪಕ್ಷದ ಸದಸ್ಯರನ್ನು ಜಿ.ಪಂ. ಸಭಾಂಗಣಕ್ಕೆ ಬಿಟ್ಟು ಹೊರ ಹೋಗಿದ್ದ ಸಂಸದ ಸುರೇಶ್ ಫಲಿತಾಂಶ ಪ್ರಕಟ ನಂತರ ಮತ್ತೆ ಆಗಮಿಸಿದರು. ಫಲಿತಾಂಶದ ಮಾಹಿತಿಯನ್ನು ಸ್ವತಃ ಸಂಸದರೇ ಒದಗಿಸಿದ್ದು ವಿಶೇಷವಾಗಿತ್ತು.
ಲೋಪದೋಷ ಸರಿಪಡಿಸುವೆ
ಹಿಂದಿನ ಆಡಳಿತಾವಧಿಯಲ್ಲಿ ಆಗಿರುವ ಲೋಪದೋಷಗಳನ್ನೆಲ್ಲಾ ಸರಿಪಡಿಸಿ, ರಾಜ್ಯದಲ್ಲಿರುವ ನಮ್ಮದೇ ಪಕ್ಷದ ಸರ್ಕಾರದ ನೆರವಿನೊಂದಿಗೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಜಿ.ಪಂ. ನೂತನ ಅಧ್ಯಕ್ಷ ಇಕ್ಬಾಲ್ ಹುಸೇನ್ ಭರವಸೆ ನೀಡಿದರು. ತಮ್ಮ ಮೇಲೆ ವಿಶ್ವಾಸವಿಟ್ಟು ಈ ಹುದ್ದೆ ಕಲ್ಪಿಸಿರುವ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರಿಗೆ ತಾವು ಚಿರಋಣಿಯಾಗಿದ್ದು, ಅವರಿಗೆ ಕೀರ್ತಿ ತರುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com