ಕೋಲಾರ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನ ಜೊತೆಗೂಡಿ ಕೊಲೆ ಮಾಡಿರುವ ಘಟನೆ ಮೂರು ತಿಂಗಳ ನಂತರ ಬೆಳಕಿಗೆ ಬಂದಿದ್ದು, ಪೊಲೀಸರು ಕೊಲೆ ರಹಸ್ಯವನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೇವನಹಳ್ಳಿ ತಾಲೂಕಿನ ವಿಜಯಪುರದ ಹರೀಶ್ ಕೊಲೆಯಾಗಿದ್ದ ವ್ಯಕ್ತಿ. ಪೊಲೀಸರು ಮೃತನ ಪತ್ನಿ ಸವಿತಾ ಹಾಗೂ ಪ್ರಿಯಕರ ಸುನೀಲ್ನನ್ನು ಬಂಧಿಸಿದ್ದಾರೆ.
ಸವಿತಾ ಮತ್ತು ಸುನೀಲ್ ನಡುವೆ ಇದ್ದ ಪ್ರೇಮಾನುಬಂಧವನ್ನು ಹರೀಶ್ ವಿರೋಧಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಿಯತಮೆಯ ಸೂಚನೆಯಂತೆ ಪ್ರಿಯಕರ ಹರೀಶ್ನನ್ನು ನಂಬಿಸಿ ಕೆ.ಬಿ.ಹೊಸಹಳ್ಳಿಗೆ ಕರೆತಂದು ಕೊಲೆ ಮಾಡಿದ್ದ.
ಸಾಕ್ಷ್ಯ ಮುಚ್ಚಿ ಹಾಕಲು ಹರೀಶ್ ಶವವನ್ನು ಕೆರೆಯಲ್ಲಿ ಹೂತು ಹಾಕಿದ್ದ. ಮೃತನ ತಂದೆ ಮತ್ತು ತಾಯಿಗೆ ಸುನೀಲ್ ಮತ್ತು ಸೊಸೆಯ ಮೇಲೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದರು.
ಏನಿದು ಪ್ರಕರಣ?: ಹರೀಶ್ ದೇವನಹಳ್ಳಿ ತಾಲೂಕು ವಿಜಯಪುರ ವಾಸಿ. ಕೋಲಾರ ತಾಲೂಕಿನ ನರಸಾಪುರ ಹೋಬಳಿಯ ಕೆ.ಬಿ.ಹೊಸಹಳ್ಳಿ ಮೂಲದ ಸುನೀಲ್, ಹರೀಶ್ ಪತ್ನಿ ಸವಿತಾ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ. ಇದನ್ನು ಬಲವಾಗಿ ಆಕ್ಷೇಪಿಸಿದ ಪತಿ ಇರುವವರೆಗೂ ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದೆ ಎಂದು ಅದಕ್ಕಾಗಿ ತನಗೆ ಒಲ್ಲದ ಗಂಡನನ್ನು ಮುಗಿಸಿಬಿಡುವಂತೆ ಆಕೆ ಪ್ರಿಯಕರ ಸುನೀಲ್ಗೆ ತಿಳಿಸಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಪೂರ್ವಯೋಜಿತ ನಿರ್ಧಾರದಂತೆ ಹರೀಶ್ಗೆ ಹೆಚ್ಚಾಗಿ ಮದ್ಯ ಸೇವನೆ ಮಾಡುವಂತೆ ಮಾಡಿ ಪ್ರಜ್ಞೆ ತಪ್ಪಿಸಿ, ಚಾಕುವಿನಿಂದ ಹರೀಶ್ನ ಎದೆ, ಹೊಟ್ಟೆಗೆ ಇರಿದು ಕೊನೆಗೆ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ್ದಾನೆ ಸುನೀಲ್. ನಂತರ ಶವವನ್ನು ಕೆರೆಯಲ್ಲಿ ಹೂತ್ತು ಶವ ಮೇಲಕ್ಕೆ ಬರದಂತೆ ಕಲ್ಲು ಹಾಕಿದ್ದ. ಮೃತನ ಕಡೆಯವರಿಗೆ ವಿಷಯ ಮುಚ್ಚಿಸಲು ಹರೀಶ್ ನಾಪತ್ತೆಯಾಗಿರುವುದಾಗಿ ಪುಕಾರು ಎಬ್ಬಿಸಲಾಗಿತ್ತು.
ಮೃತನ ಕಡೆಯವರು ವ್ಯಕ್ತಪಡಿಸಿದ್ದ ಅನುಮಾನ ಆಧರಿಸಿ ಪೊಲೀಸರು ತನಿಖೆ ಕೈಗೊಂಡಾಗ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಪರಿಶೀಲನೆ: ಬುಧವಾರ ವಿಜಯಪುರ ಹಾಗೂ ವೇಮಗಲ್ ಪೊಲೀಸರು ಸ್ಥಳಕ್ಕೆ ಆರೋಪಿಯೊಂದಿಗೆ ಬಂದ ತಹಸೀಲ್ದಾರ್ ಸಮ್ಮುಖದಲ್ಲಿ ಶವವನ್ನು ಹೊರತೆಗೆದರು.
ನಂತರ ಜಾಲಪ್ಪ ಆಸ್ಪತ್ರೆಯ ವೈದ್ಯರಿಂದ ಸ್ಥಳದಲ್ಲೇ ಶವ ಪರೀಕ್ಷೆ ಸ್ಥಳದಲ್ಲಿಯೇ ಮಾಡಲಾಯಿತು.ದೊಡ್ಡಬಳ್ಳಾಪುರ ಡಿವೈಎಸ್ಪಿ ಕೋನಪ್ಪ ರೆಡ್ಡಿ, ವಿಜಯಪುರ ಸಿಪಿಐ ಮಹೇಶ್ಕುಮಾರ್, ಪಿಎಸ್ಐ ಶಿವಕುಮಾರ್, ವೇಮಗಲ್ ಠಾಣೆಯ ಪಿಎಸ್ಐ ಯಶ್ವಂತ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.