ಅನಧಿಕೃತ ಬಡಾವಣೆ ಹಿಂದೆ ಆಯುಕ್ತರ ಕೈವಾಡ?

Updated on

ರಾಮನಗರ: ಅನಧಿಕೃತ ಬಡಾವಣೆಗಳ ಬಹುಪಾಲು ನಿವೇಶನಗಳಿಗೆ ಅಕ್ರಮ ಖಾತೆ ಮಾಡಿಕೊಟ್ಟ ಪ್ರಕರಣದಲ್ಲಿ ರಾಮನಗರ ನಗರಸಭೆಯ ಹಿಂದಿನ ಆಯುಕ್ತ ಸಿದ್ದರಾಜು ಅವರ ಕೈವಾಡವಿರುವ ಬಗ್ಗೆ ಶಂಕೆ ಮೂಡಿದೆ. ಸಿದ್ದರಾಜು 2012ರ ಜೂನ್ ಮಾಸಾಂತ್ಯದಲ್ಲಿ ರಾಮನಗರ ನಗರಸಭೆ ಆಯುಕ್ತ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಅಕ್ರಮ ಖಾತೆಗಳು ಆಗಿರುವುದು ಅದೇ ತಿಂಗಳಲ್ಲಿ. ಹೀಗಾಗಿ ಅವರ ಮೇಲಿನ ಗುಮಾನಿಗೆ ಇಂಬು ಸಿಕ್ಕಂತಾಗಿದೆ.
ಆಗಿರುವ ಬಹುಪಾಲು ಖಾತೆಗಳ ಕಡತದಲ್ಲಿ ಸಿದ್ದರಾಜು ಅವರದ್ದೇ ಸಹಿ ಇದೆ. ಆದರೆ, ಒಂದೊಂದು ಕಡತದಲ್ಲೂ ಸಹಿ ಭಿನ್ನವಾಗಿದೆ. ಹೀಗಾಗಿ ಪ್ರಕರಣದ ಹಿಂದೆ ನಗರಸಭೆ ಸಿಬ್ಬಂದಿ ಶಾಮೀಲಾಗಿರುವ ಬಗ್ಗೆಯೂ ಅನುಮಾನವಿದೆ. ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ್ ಅವರ ಆದೇಶದ ಮೇರೆಗೆ ಅಕ್ರಮ ಖಾತೆಗಳಿಗೆ ಸಂಬಂಧಿಸಿದಂತೆ ಕರ್ಮಕಾಂಡದ ತನಿಖೆ ನಡೆಸುತ್ತಿರುವ ನಗರಸಭೆ ಆಯುಕ್ತ ಯಶವಂತ ಕುಮಾರ್ ಅವರು ಅಕ್ರಮಗಳನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ಅಕ್ರಮ ಖಾತೆಗಳ ಹಗರಣ ಬಯಲಾಗುತ್ತಲೇ ಎಲ್ಲದಕ್ಕೂ ತಾವೊಬ್ಬರೆ ಕಾರಣರಲ್ಲ. ತಮ್ಮ ಸಹಿಯನ್ನು ಫೋರ್ಜರಿ ಮಾಡಿ, ಸಿಬ್ಬಂದಿಯೇ ಅಕ್ರಮ ಎಸಗಿರುವ ಬಗ್ಗೆ ನಿವೃತ್ತ ಆಯುಕ್ತ ಸಿದ್ದರಾಜು ಆರೋಪ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಾಮಾನ್ಯವಾಗಿ ಖಾತಾ ಕಡತಗಳನ್ನು ಸಿದ್ಧಪಡಿಸುವವರು ಸಿಬ್ಬಂದಿಯೇ. ಅಂತಿಮವಾಗಿ ಅದಕ್ಕೆ ಅಂಕಿತ ಹಾಕಿ, ಖಾತೆ ಮಾಡಿಕೊಡುವುದು ಆಯುಕ್ತರ ಪಾಲಿನ ಕೆಲಸ. ಈ ಎಡವಟ್ಟಿನ ಹಿಂದೆ ದೊಡ್ಡ ಜಾಲವೇ ಕೆಲಸ ಮಾಡಿರುವುದಂತೂ ನಿಜ.
ಬರವಣಿಗೆ ಬೇರೆಯದೇ: ಹೀಗೆ ಆಗಿರುವ 1500ಕ್ಕೂ ಹೆಚ್ಚು ಅಕ್ರಮ ಖಾತೆಗಳಿಗೆ ಸಂಬಂಧಿಸಿದಂತೆ ಎಸ್.ಎ.ಎಸ್. ನಮೂನೆ 3ರಲ್ಲಿ ಕಂಡುಬರುವ ಬರವಣಿಗೆಯು ನಗರಸಭೆಯಲ್ಲಿ ಹಿಂದೆ ಮತ್ತು ಹಾಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಯದ್ದೂ ಅಲ್ಲ. ರಿಯಲ್ ಎಸ್ಟೇಟ್ ಏಜೆಂಟರು, ನಗರಸಭೆಯಲ್ಲಿ ಕೆಲಸ ನಿರ್ವಹಿಸುವ ದಲ್ಲಾಳಿಗಳ ಕೈ ಚಳಕ ಇದರಲ್ಲಿ ಇದ್ದೇ ಇದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿ, ಆಗಿರುವ ಅಕ್ರಮಗಳನ್ನು ಸರಿಪಡಿಸಬೇಕಿದ್ದರೆ ಉನ್ನತ ಮಟ್ಟದ ತನಿಖೆ ಆಗಬೇಕಿದೆ.
ಕೆಲ ಬಡಾವಣೆಗಳಲ್ಲಿ 4-5 ನಿವೇಶನಗಳಿಗೆ ಒಂದೇ ಸಂಖ್ಯೆ ನೀಡಿ, ಖಾತೆ ಮಾಡಿಕೊಡಲಾಗಿದೆ. ಇದೀಗ ಅಂತಹ ನಿವೇಶನಗಳು ಮಾರಾಟವಾಗಿ ಕೈ ಬದಲಾಗಿವೆ. ಯಾವ ಸಂಖ್ಯೆ ನಿವೇಶನ ಯಾರ ಮಾಲೀಕತ್ವದ್ದೆನ್ನುವುದು ನಿರ್ಧಾರವಾಗಲು ಕೋರ್ಟ್ ಮೆಟ್ಟಿಲೇರುವ ಸ್ಥಿತಿ ಇದೆ.
ಅನಧಿಕೃತ ಬಡಾವಣೆಗಳ ನಿರ್ಮಾತೃಗಳು ಮತ್ತು ದಲ್ಲಾಳಿಗಳ ಮಾತಿಗೆ ಮರುಳಾದ ಅದೆಷ್ಟೋ ಮಂದಿ ಮೂಲ ದಾಖಲೆಗಳನ್ನು ಪರಿಶೀಲಿಸದೆ ನಿವೇಶನ ಖರೀದಿಸಿದ್ದಾರೆ. ಇದೀಗ ಹಲವರು ಕೊಂಡ ನಿವೇಶನದ ಖಾತೆ ಆಗದೆ ಪರಿತಪಿಸುತ್ತಿದ್ದಾರೆ.

ಸರ್ಕಾರಕ್ಕೇ ಹೊಣೆ
ಅನಧಿಕೃತ ಬಡಾವಣೆಗಳಲ್ಲಿ ನಿಯಮಾನುಸಾರ ಸಾರ್ವಜನಿಕ ಉದ್ದೇಶದ ಜಾಗ ಬಿಡುತ್ತಿಲ್ಲ. ರಸ್ತೆಗೂ ಸೂಕ್ತ ಸ್ಥಳಾವಕಾಶವಿಲ್ಲ. ವಿದ್ಯುತ್ ಮತ್ತು ಕುಡಿಯುವ ನೀರಿನ ಸಂಪರ್ಕವನ್ನಂತೂ ಕಲ್ಪಿಸುತ್ತಿಲ್ಲ. ಇಂತಹ ಬಡಾವಣೆ ನಿವೇಶನಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟರೆ ಯಾವ ಶುಲ್ಕವೂ ಇಲ್ಲದೆ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಹೊಣೆ ಸರ್ಕಾರದ್ದಾಗುತ್ತದೆ. ಹೀಗಾಗಿ ಸರ್ಕಾರದ ಬೊಕ್ಕಸಕ್ಕೂ ನಷ್ಟ ತಪ್ಪಿದ್ದಲ್ಲ.

ದಾಖಲೆ ಇಲ್ಲದೆ ನೋಂದಣಿ
ರಿಯಲ್ ಎಸ್ಟೇಟ್ ಮಾಫಿಯಾದ ಕಪಿಮುಷ್ಠಿಗೆ ಸಿಲುಕಿರುವ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ನಿವೇಶನಗಳ ಮಾರಾಟದ ಪತ್ರ ನೋಂದಣಿ ಮಾಡುವ ವೇಳೆ ಭೂ ಪರಿವರ್ತನೆ, ಲೇಔಟ್ ಶುಲ್ಕ ಪಾವತಿ, ಖಾತೆಯ ದಾಖಲೆ ಪತ್ರಗಳನ್ನೇ ಪರಿಗಣಿಸುತ್ತಿಲ್ಲ. ತೆರಿಗೆ ಪಾವತಿಯ ಉದ್ದೇಶಕ್ಕೆ ನೀಡಲಾಗುವ ನಮೂನೆ 3 ಪತ್ರದ ಆಧಾರದ ಮೇಲಷ್ಟೇ ಸಹಸ್ರಾರು ನಿವೇಶನಗಳ ಕ್ರಯಪತ್ರಗಳ ನೋಂದಣಿ ನಡೆದಿದೆ. ಹೀಗಾಗಿ ಅಕ್ರಮ ಖಾತೆಗಳ ವಿಷಯದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಗಳ ಪಾಲು ಇರುವುದನ್ನು ಅಲ್ಲಗಳೆಯುವಂತಿಲ್ಲ. ಇನ್ನು, ಬೆಸ್ಕಾಂ ಅಧಿಕಾರಿಗಳು ಅಕ್ರಮ ಖಾತೆಗಳುಳ್ಳ ನಿವೇಶನಗಳಿಗೆ ದಾಖಲೆಗಳಿಲ್ಲದೆಯೂ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿದ್ದಾರೆ. ಹೀಗೆ ಮಾಡದಂತೆ ಸಬ್ ರಿಜಿಸ್ಟ್ರಾರ್ ಮತ್ತು ಬೆಸ್ಕಾಂಗೆ ನಗರಸಭೆ ಆಯುಕ್ತರು ಪತ್ರ ಬರೆದಿದ್ದರೂ ಕಾನೂನು ಪಾಲನೆ ಆಗುತ್ತಿಲ್ಲ.

ಪ್ರಾಧಿಕಾರದ್ದೂ ವೈಫಲ್ಯ
ನಗರಾಭಿವೃದ್ಧಿ ಪ್ರಾಧಿಕಾರಗಳ ಅಧಿನಿಯಮ 1987ರ 32(1) ಪ್ರಕಾರ ಯಾವುದೇ ಬಡಾವಣೆಗಳಿಗೆ ಅನುಮೋದನೆ ನೀಡುವಾಗ ಆಯಾ ಪೌರ ಸಂಸ್ಥೆಯ ಅನುಮತಿಯನ್ನೂ ಪಡೆದುಕೊಳ್ಳಬೇಕಿದೆ. ಆದರೆ, ನಗರಾಭಿವೃದ್ಧಿ ಪ್ರಾಧಿಕಾರ ನಿಯಮ ಪಾಲಿಸದೆ ಅನಧಿಕೃತ ಬಡಾವಣೆಗಳು ತಲೆ ಎತ್ತಲು ಕಾರಣವಾಗುತ್ತಿದೆ. ಬಡಾವಣೆಗಳಿಗೆ ಅನುಮೋದನೆ ವಿಷಯದಲ್ಲಿ ತಮ್ಮ ಅನುಮತಿ ಪಡೆಯದ ಬಗ್ಗೆ ನಗರಸಭೆಯು ರಾ-ಚ ಪ್ರಾಧಿಕಾರಕ್ಕೆ ಬರೆದ ಪತ್ರಕ್ಕೆ ಅಲ್ಲಿನ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ.

ದಲ್ಲಾಳಿಗಳು ನಾಪತ್ತೆ
ರಾಮನಗರ ನಗರಸಭೆಯಲ್ಲಿ ಮೂಲಗಳ ಪ್ರಕಾರ ಅಕ್ರಮ ಖಾತೆ ಸಹಿತ ಫೋರ್ಜರಿ ದಾಖಲೆಗಳನ್ನು ಮಾಡಿಸಿಕೊಡುವುದರಲ್ಲೇ ನಿರತರಾದ ನೂರಕ್ಕೂ ಹೆಚ್ಚು ದಲ್ಲಾಳಿಗಳು ಕಾರ್ಯ ನಿರ್ವಹಿಸುತ್ತಿರುವುದು ಜಗಜ್ಜಾಹೀರವಾಗಿದೆ. 1500ಕ್ಕೂ ಹೆಚ್ಚು ಅಕ್ರಮ ಖಾತೆಗಳ ವಿಶೇಷ ವರದಿ ಕನ್ನಡಪ್ರಭದ ಜೂ.19ರ ಸಂಚಿಕೆಯಲ್ಲಿ ಪ್ರಕಟವಾದ ಬೆನ್ನಲ್ಲೇ ನಗರಸಭೆ ಸಭಾಂಗಣ ಮತ್ತು ಆವರಣವನ್ನೇ ತಮ್ಮ ಕಾರ್ಯಸ್ಥಾನವಾಗಿಸಿಕೊಂಡ ದಲ್ಲಾಳಿಗಳ ಪೈಕಿ ಬಹುತೇಕರು ನಾಪತ್ತೆಯಾಗಿದ್ದರು.

ಆಯುಕ್ತರು ಸವಾಲು ಸ್ವೀಕರಿಸುವರೇ?
ಅನಧಿಕೃತ ಬಡಾವಣೆಗಳ ನಿವೇಶನಗಳಿಗೆ ಅಕ್ರಮ ಖಾತೆ ಮಾಡಿಕೊಡಲಾಗಿರುವ ಈ ಪ್ರಕರಣದಲ್ಲಿ ಪಕ್ಷಾತೀತವಾಗಿ ರಾಜಕಾರಣಿಗಳು ಶಾಮೀಲಾಗಿದ್ದಾರೆ. ಹೀಗಾಗಿ ಪ್ರಕರಣದ ತನಿಖೆ ಹಳ್ಳ ಹಿಡಿಯುವುದು ಖಚಿತ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ತಾವೆನ್ನುವ ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ್, ಅಂತೆಯೇ ನಗರಸಭೆಯಲ್ಲಿ ಅಮೂಲಾಗ್ರ ಬದಲಾವಣೆ ತರುವುದಾಗಿ ಹೇಳುವ ಆಯುಕ್ತ ಯಶವಂತ ಕುಮಾರ್ ಅವರಿಗೆ ನಿಜಕ್ಕೂ ಈ ಪ್ರಕರಣ ಸವಾಲಿನ ಪ್ರಶ್ನೆಯೇ ಸರಿ.

ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com