ಡಕಾಯಿತ ಪ್ರಕರಣ ಭೇದಿಸಿದ ಪೊಲೀಸರು

Updated on: 

ದೊಡ್ಡಬಳ್ಳಾಪುರ: 3 ಮಹತ್ವದ ಡಕಾಯಿತಿ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ದೊಡ್ಡಬಳ್ಳಾಪುರ ಪೊಲೀಸರು ಒಟ್ಟು 12 ಮಂದಿ ಅಂತರರಾಜ್ಯ ಡಕಾಯಿತರನ್ನು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರ ಉಪವಿಭಾಗ ಸರಹದ್ದಿನಲ್ಲಿ ಕಬ್ಬಿಣದ ಲೋಡ್ ಸಾಗಿಸುತ್ತಿದ್ದ ಲಾರಿಗಳನ್ನು ಅಪಹರಿಸಿದ್ದ ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ ಒಟ್ಟು 46 ಟನ್ ಕಬ್ಬಿಣ, 2 ಲಾರಿಗಳು, 1 ಕ್ಯಾಂಟರ್, 1 ಇನೋವಾ ಕಾರು ಮತ್ತು 1 ಟಾಟಾ ಸುಮೋ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ 40 ಲಕ್ಷ ಎಂದು ಅಂದಾಜಿಸಲಾಗಿದೆ.
ಪ್ರಕರಣ 1: ಬೆಂಗಳೂರು ಜಿಲ್ಲಾ ಪೊಲೀಸ್ ದೊಡ್ಡಬಳ್ಳಾಪುರ ಉಪವಿಭಾಗ ವ್ಯಾಪ್ತಿಯ ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂ.10ರಂದು ಸಂಜೆ 6.30ರ ವೇಳೆಯಲ್ಲಿ ವೆಂಕಟರಮಣಪ್ಪ ಎಂಬ ಲಾರಿ ಚಾಲಕ ಹಿಂದೂಪುರದ ಮೀನಾಕ್ಷಿ ಸ್ಟ್ರೀಲ್ ಕಂಪನಿಯಿಂದ 15 ಟನ್ 930 ಕೆಜಿ ಕಬ್ಬಿಣದ ಕಂಬಿಗಳನ್ನು ಲೋಡ್ ಮಾಡಿಕೊಂಡು ಕ್ಲೀನರ್ ಹರೀಶ್ ಜೊತೆ ಗೌರಿಬಿದನೂರು-ದೊಡ್ಡಬಳ್ಳಾಪುರ-ಬೆಂಗಳೂರು ರಸ್ತೆ ಮಾರ್ಗವಾಗಿ ಬಂದಿದ್ದಾರೆ.
 ಸಿಂಗನಾಯಕನಹಳ್ಳಿ ಬಳಿಯ ಆನಂದ್ ಸ್ಟೀಲ್ ಅಂಗಡಿ ಮುಂದೆ ಲಾರಿ ನಿಲ್ಲಿಸಿ ಮಲಗಿದ್ದಾಗ, ರಾತ್ರಿ 2 ಗಂಟೆ ವೇಳೆಯಲ್ಲಿ ಲಾರಿ ಬಳಿ ಬಂದ ಇಬ್ಬರು ಅಪರಿಚಿತರು ನಾವು ಸೇಲ್ಸ್ ಟ್ಯಾಕ್ಸ್‌ನವರು. ಬಿಲ್ ತೆಗೆದುಕೊಂಡು ಬನ್ನಿ, ಕಾರಿನಲ್ಲಿ ಅಧಿಕಾರಿಗಳು ಇದ್ದಾರೆ ಎಂದು ಚಾಲಕ ಮತ್ತು ಕ್ಲೀನರ್‌ನಲ್ಲಿ ಕಾರಿನ ಬಳಿ ಕರೆದೊಯ್ದು ಹಲ್ಲೆ ಲಾರಿಯ ಕೀ ಕಸಿದುಕೊಂಡು ಇಬ್ಬರು ಆರೋಪಿಗಳು ಲಾರಿಯನ್ನು ಯಲಹಂಕದ ಕಡೆ ತೆಗೆದುಕೊಂಡು ಪರಾರಿಯಾಗಿದ್ದಾರೆ. ಇನ್ನುಳಿದ 4 ಮಂದಿ ಆರೋಪಿಗಳು ಕ್ಲೀನರ್ ಮತ್ತು ಚಾಲಕನನ್ನು ಡಾಬಸ್‌ಪೇಟೆ ಕಡೆಗೆ ಕಾರಿನಲ್ಲಿ ಕರೆದುಕೊಂಡು ನಿರ್ಜನ ಪ್ರದೇಶದ ನೀಲಗಿರಿ ತೋಪಿನ ಬಳಿ ಬಿಟ್ಟು ಹೊರಟುಹೋಗಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳು ಲಾರಿ ಮತ್ತು 10 ಲಕ್ಷ ಮೌಲ್ಯದ ಕಬ್ಬಿಣ ದರೋಡೆ ಮಾಡಿದ್ದರು. ಈ ಬಗ್ಗೆ ಲಾರಿ ಚಾಲಕ ಮತ್ತು ಕ್ಲೀನರ್ ರಾಜಾನುಕುಂಟೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ 2: ಇದೇ ಮಾದರಿಯ ಪ್ರಕರಣ ಜೂ.23ರಂದು ಯಲಹಂಕ ಬೈಪಾಸ್ ಬಳಿ ಕೂಡ ನಡೆದಿದೆ. ಕ್ಯಾಂಟರ್ ಒಂದರಲ್ಲಿ 11 ಟನ್ ಕಬ್ಬಿಣದ ಕಂಬಿಗಳನ್ನು ಕೊಂಡೊಯ್ಯುತ್ತಿದ್ದ ಅಲ್ಲಬಕ್ಷ್ ಎಂಬ ಚಾಲಕನನ್ನು 4-5 ಜನರ ತಂಡ ಮಧ್ಯರಾತ್ರಿ 2.30ರ ವೇಳೆಯಲ್ಲಿ ಅಡ್ಡಗಟ್ಟಿ ಬೆದರಿಸಿ ಕಾರಿನಲ್ಲಿ ಆತನನ್ನು ಕೂರಿಸಿಕೊಂಡು ಕ್ಯಾಂಟರ್ ಸಮೇತ ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ ಆರೋಪಿಗಳು ಸುಮಾರು 6 ಲಕ್ಷ ಮೌಲ್ಯದ ಕಬ್ಬಿಣ ಅಪಹರಿಸಿದ್ದರು. ಈ ಬಗ್ಗೆ ಯಲಹಂಕ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು.
ಪ್ರಕರಣ 3: ನಂತರ ಒಂದೇ ದಿನದ ಅಂತರದಲ್ಲಿ ಜೂ.24ರಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗೌರಿಬಿದನೂರು-ಬೆಂಗಳೂರು ರಸ್ತೆಯ ಗುಂಜೂರು ಸಮೀಪ ಲಾರಿಯಲ್ಲಿ 20 ಟನ್ ಕಬ್ಬಿಣ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಲಾರಿಯನ್ನು ಅಡ್ಡಗಟ್ಟಿ ಚಾಲಕನನ್ನು ಥಳಿಸಿ, ಹಣ ಕಸಿದುಕೊಂಡು 15 ಲಕ್ಷ ಬೆಲೆ ಬಾಳುವ ಕಬ್ಬಿಣದ ಟಿಎಂಟಿ ಕಂಬಿಗಳು ಮತ್ತು ಲಾರಿಯನ್ನು ದರೋಡೆ ಮಾಡಿದ್ದರು. ಈ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
 ಈ 3 ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ರಾಜಾನುಕುಂಟೆ ಮತ್ತು ಯಲಹಂಕ ಪ್ರಕರಣದ ಆರೋಪಿಗಳಾದ ಸಲೀಂ, ಅಯೂಬ್ ಚಾನ್, ಶಾಬುದ್ದೀನ್, ಇಮ್ರಾನ್ ಹಾಗೂ ದೊಡ್ಡಬಳ್ಳಾಪುರ ಪ್ರಕರಣದ ಆರೋಪಿಗಳಾದ ಇರ್ಫಾನ್ ಖಾನ್, ಕೃಷ್ಣ, ಪ್ರಭು, ರೂಪೇಶ್, ರಾಕೇಶ್, ಕಿರಣ್, ಮೋಹನ್‌ಬಾಬು, ಮುದ್ದುರಾಮಯ್ಯ ಎಂಬುವವರನ್ನು ಬಂಧಿಸಿದ್ದಾರೆ. ಈ ಪೈಕಿ ದೊಡ್ಡಬಳ್ಳಾಪುರ ಪ್ರಕರಣದ ಆರೋಪಿಗಳು ಈ ಹಿಂದೆ ತಮಿಳುನಾಡಿನ ಚೆನ್ನೈ ಸಮೀಪ ಕೂಡ ಇದೇ ಮಾದರಿಯ ಕೃತ್ಯ ಎಸಗಿದ್ದರು. ರಾಜಗೋಪಾಲನಗರ ವ್ಯಾಪ್ತಿಯಲ್ಲೂ ಲಾರಿ ಕಳವು ಯತ್ನ ಮಾಡಿದ್ದರು. ಉಳಿದಂತೆ ಟಿ.ನರಸೀಪುರದ ಅಮ್ಜಾನ್ ಮತ್ತು ಆಂಧ್ರಪ್ರದೇಶದ ಚಿತ್ತೂರಿನ ಪ್ರತಾಪ್ ಎಂಬ ಇಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.ಜಿಲ್ಲಾ ಪೊಲೀಸ್ ಎಸ್ಪಿ ಮತ್ತು ಎಎಸ್ಪಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಕೋನಪ್ಪರೆಡ್ಡಿ, ಸಿಪಿಐ ಶಿವಾರೆಡ್ಡಿ, ರಾಜಾನುಕುಂಟೆ ಪಿಎಸೈ ಲೂಯಿರಾಮರೆಡ್ಡಿ, ದೊಡ್ಡಬಳ್ಳಾಪುರ ಪಿಎಸೈ ನವೀನ್‌ಕುಮಾರ್, ನಟರಾಜ್ ನೇತೃತ್ವದಲ್ಲಿ ಪತ್ತೆಹಚ್ಚಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com