ರಾಮನಗರ 'ಆರೋಗ್ಯ' ಕಡೆಗಣನೆ!

Updated on: 

ರಾಮನಗರ: ಆರೋಗ್ಯ ಕ್ಷೇತ್ರದಲ್ಲಿ ಈ ಜಿಲ್ಲೆ ಕಡೆಗಣಿಸಲ್ಪಟ್ಟಿದೆ. ಮಂಜೂರಾಗಿ 8 ವರ್ಷವೇ ಕಳೆದರೂ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಸ್ಥಾಪನೆ ಕನಸು ನನಸಾಗಲಿಲ್ಲ. ಸುಸಜ್ಜಿತ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೂ ಅಡಿಗಲ್ಲು ಭಾಗ್ಯವಿಲ್ಲ.
ವಿಪರ್ಯಾಸದ ಸಂಗತಿಯೆಂದರೆ, ಮಹತ್ವಾಕಾಂಕ್ಷಿ ಉಭಯ ಯೋಜನೆಗಳಿಗೂ ಆಡಳಿತಾತ್ಮಕ ಮತ್ತು ಆರ್ಥಿಕ ಮಂಜೂರಾತಿ ದೊರೆತು ವರ್ಷಗಳೇ ಉರುಳಿವೆ. ಜಾಗದ ಗೊಂದಲ ಬಗೆಹರಿಸಿ ಕಾಮಗಾರಿ ಪ್ರಾರಂಭಿಸುವ ನಿಟ್ಟಿನಲ್ಲಿ ಪ್ರಯತ್ನ ಫಲಪ್ರದವಾಗಿಲ್ಲ.  ಒಂದೊಮ್ಮೆ ರಾಜೀವ್ ಗಾಂಧಿ ಆರೋಗ್ಯ ವಿವಿ ಸ್ಥಾಪನೆಗೊಂಡಿದ್ದರೂ ಜಿಲ್ಲಾಸ್ಪತ್ರೆ ಅಗತ್ಯ ಕಂಡು ಬರುತ್ತಿರಲಿಲ್ಲ. ಈಗ ಎರಡೂ ಯೋಜನಗಳೂ ಜಾರಿಯಾಗದ ಪರಿಣಾಮ ಜಿಲ್ಲೆಯ ಅನಾರೋಗ್ಯ ಪೀಡಿತರು ಬೆಂಗಳೂರಿನ ಆಸ್ಪತ್ರೆಗಳನ್ನೇ ಆಶ್ರಯಿಸುವಂತಾಗಿದೆ.
ಎರಡಕ್ಕೂ ಅಡೆತಡೆ: ರಾಜೀವ್ ಗಾಂಧಿ ಆರೋಗ್ಯ ವಿವಿ ಮತ್ತು ಸುಸಜ್ಜಿತ ಜಿಲ್ಲಾಸ್ಪತ್ರೆ ಈ ಉಭಯ ಯೋಜನೆಗಳೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೊಡುಗೆಗಳೇ. ಆದರೆ, ಅವರು ಅಧಿಕಾರದಿಂದ ಇಳಿದ ಮೇಲೆ ಪ್ರಾರಂಭಕ್ಕೆ ರಾಜಕಾರಣವೂ ಸಹಿತ ನಾನಾ ಅಡ್ಡಿಗಳು ಎದುರಾಗಿವೆ.
 ರಾಜೀವ್ ಗಾಂಧಿ ಆರೋಗ್ಯ ವಿವಿ ರು.ಮುನ್ನೂರು ಕೋಟಿ ವೆಚ್ಚದ ಬೃಹತ್ ಯೋಜನೆ. ಹೈಟೆಕ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಆಡಳಿತ ಭವನ, ಕಾಲೇಜು, ವಸತಿಗೃಹ ಸಂಕೀರ್ಣವನ್ನು ಒಳಗೊಂಡ ಯೋಜನೆಯ ಭೂ ಸ್ವಾಧೀನ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಇನ್ನು, ರು.30 ಕೋಟಿ ಮಂಜೂರಾಗಿದ್ದು, ಜಿಲ್ಲಾಡಳಿತ ಮತ್ತು ಜಿ.ಪಂ. ಭವನ ಕಟ್ಟಡಗಳ ನಡುವೆ ಇರುವ ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗವನ್ನೂ ಗುರುತಿಸಲಾಗಿದೆ. ಜಾಗ ಹಸ್ತಾಂತರ ಪ್ರಕ್ರಿಯೆ ಪೂರ್ಣವಾಗದ ಪರಿಣಾಮ ಹಣ ಬಿಡುಗಡೆಯಾಗಿಲ್ಲ.
ಜಿಲ್ಲಾಸ್ಪತ್ರೆ ಅವ್ಯವಸ್ಥೆ: ರಾಜೀವ್ ಗಾಂಧಿ ವಿವಿ ಸ್ಥಾಪನೆಗೆ ಹಿಡಿದ ಗ್ರಹಣ ಸದ್ಯಕ್ಕೆ ಬಿಡುವಂತೆ ಕಾಣುತ್ತಿಲ್ಲ. ಹಾಗೊಮ್ಮೆ ವಿವಿ ಸ್ಥಾಪನೆ ಆಗಿದ್ದರೆ ಜಿಲ್ಲಾಸ್ಪತ್ರೆ ಅಗತ್ಯವೇ ಬೀಳುತ್ತಿರಲಿಲ್ಲ. ವಿವಿ ವಿವಾದ ಸದ್ಯಕ್ಕೆ ಮುಗಿಯುವ ಲಕ್ಷಣ ಗೋಚರಿಸದ ಹಿನ್ನೆಲೆಯಲ್ಲಿ ಸುಸಜ್ಜಿತ ಜಿಲ್ಲಾಸ್ಪತ್ರೆಯ ತುರ್ತು ಅನಿವಾರ್ಯತೆ ಎದುರಾಗಿದೆ.  ಜಿಲ್ಲೆ ಘೋಷಣೆ ಆಗುವುದಕ್ಕೂ ಮುಂಚೆ ಇದ್ದ ತಾಲೂಕು ಆಸ್ಪತ್ರೆಯನ್ನೇ ಜಿಲ್ಲಾಸ್ಪತ್ರೆ ಎಂದು ಮರು ನಾಮಕರಣ ಮಾಡಿ ಫಲಕವನ್ನೇನೋ ಬದಲಿಸಲಾಗಿದೆ. ಆದರೆ, ಒಂದು ಜಿಲ್ಲಾಸ್ಪತ್ರೆಗೆ ಇರಬೇಕಾದ ಮೂಲ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಆಸ್ಪತ್ರೆಯು ಫಲಕ, ಕಡತ ಬಿಟ್ಟು ಬೇರೆ ಯಾವ ವಿಷಯದಲ್ಲೂ ಮೇಲ್ದರ್ಜೆಗೇರಲಿಲ್ಲ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (ಎನ್.ಎಚ್.ಆರ್.ಎಂ.) ಯೋಜನೆಯಡಿ ಮಂಜೂರಾದ ರು.30 ಕೋಟಿಯು ಸರ್ಕಾರದ ಖಜಾನೆಯಲ್ಲೇ ಉಳಿದಿದೆ. ಜಾಗದ ಸರ್ವೇ, ಹಸ್ತಾಂತರದ ಪ್ರಕ್ರಿಯೆಯು ಆಮೆವೇಗದಲ್ಲಿ ಸಾಗುತ್ತಿದೆಯಷ್ಟೇ.
ಸಮಸ್ಯೆಗಳ ಆಗರ: ಹೇಳಿ ಕೇಳಿ ರಾಮನಗರದಲ್ಲಿ ವಿಶಾಲವಾದ ರಸ್ತೆಗಳಿಲ್ಲ. ಜನ ವಸತಿಯುಳ್ಳ ಕಿಷ್ಕಿಂದೆಯಂತಹ  ಪ್ರದೇಶದಲ್ಲಿ ಹೆಸರಿಗಷ್ಟೇ ಜಿಲ್ಲಾಸ್ಪತ್ರೆ ಎನ್ನುವ ಫಲಕವುಳ್ಳ ಈ ಸರ್ಕಾರಿ ಆಸ್ಪತ್ರೆಗೆ ಹೋಗಲು ಇರುವ ರಸ್ತೆ ಮಾರ್ಗವು ಸದಾ ವಾಹನ, ಜನ ನಿಬಿಡವಾಗಿರುತ್ತದೆ. ಮೂಲ ಸೌಲಭ್ಯಗಳನ್ನು ಕಲ್ಪಿಸುವ ಮಾತು ಹಾಗಿರಲಿ. ಒಂದು ಆಸ್ಪತ್ರೆಗೆ ಇರಬೇಕಾದಂತಹ ಉತ್ತಮವಾದ ಪರಿಸರವೂ ಅಲ್ಲಿಲ್ಲ. ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ವಾಹನಗಳಲ್ಲಿ ಕರೆತರಲು ಕೆಲವೊಮ್ಮೆ ಸಾಕಷ್ಟು ತೊಂದರೆಯೂ ಆಗುತ್ತಿದೆ. ರಾಜಕಾರಣ ಅಡ್ಡಿಯೇ: ರಾಜೀವ್ ಗಾಂಧಿ ಆರೋಗ್ಯ ವಿವಿ ಸ್ಥಾಪನೆ ನೆನಗುದಿಗೆ ಬೀಳಲು ಬಿಜೆಪಿ ಸರ್ಕಾರದ ತಾರತಮ್ಯ ಮತ್ತು ಸೇಡಿನ ಕ್ರಮವೇ ಕಾರಣ ಎನ್ನುವುದು ಜೆಡಿಎಸ್ ಆರೋಪ. ಬಿಜೆಪಿ ಸರ್ಕಾರದಲ್ಲಿ ಭೂ ಸಂತ್ರಸ್ತರ ಜತೆ ಒಮ್ಮೆಯಷ್ಟೆ ಮಾತುಕತೆ ನಡೆಸಿ, ಕೈತೊಳೆದುಕೊಳ್ಳಲಾಯಿತು. ವಿವಿ ಸ್ಥಾಪನೆ ಸಂಬಂಧ ಎಚ್.ಡಿ.ಕುಮಾರಸ್ವಾಮಿ ಹೋರಾಟದ ಎಚ್ಚರಿಕೆ ನೀಡಿದಾಗ ಅಡಿಗಲ್ಲು ಬಿತ್ತು. ಮತ್ತೆ ಆ ವಿಷಯದಲ್ಲಿ ಸರ್ಕಾರದಿಂದ ಪ್ರಾಮಾಣಿಕ ಪ್ರಯತ್ನ ನಡೆದಿಲ್ಲ. ಈಗಿನ ಕಾಂಗ್ರೆಸ್ ಸರ್ಕಾರಕ್ಕೂ ರಾಜೀವ್ ಗಾಂಧಿ ವಿವಿ ಸ್ಥಾಪನೆ ರಾಮನಗರದಲ್ಲೇ ಆಗಬೇಕೆನ್ನುವ ಕಳಕಳಿ ಕಾಣದಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರು ರಾಜೀವ್ ಗಾಂಧಿ ವಿವಿ ಸ್ಥಾಪನೆ ವಿಷಯದಲ್ಲಿ ಸ್ಪಷ್ಟ ನಿಲುವು ವ್ಯಕ್ತಪಡಿಸುತ್ತಲೇ ಇಲ್ಲ. ಶಾಸಕ ಕುಮಾರಸ್ವಾಮಿ ಮತ್ತೆ ಹೋರಾಟಕ್ಕೆ ಅಣಿಯಾಗುವ ಸಂದೇಶವನ್ನು ಈಗಿನ ಸರ್ಕಾರಕ್ಕೆ ಇನ್ನೂ ರವಾನಿಸಿಲ್ಲ.
ಕಳಕಳಿ ಅಗತ್ಯವಾಗಿದೆ: ರಾಮನಗರ ಜಿಲ್ಲೆ ಜನತೆ ಹಿತಾಸಕ್ತಿಗಾಗಿ ರಾಜೀವ್ಗಾಂಧಿ ಆರೋಗ್ಯ ವಿವಿ ಸ್ಥಾಪನೆ ವಿಷಯದಲ್ಲಿ ಈ ಭಾಗದ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಕಳಕಳಿ ತೋರಬೇಕಿದೆ.

ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com