ಸೀಡಿಯಲ್ಲಿ ಸಿಗುತ್ತೆ ವಿಕಸನ

Updated on: 

ಕ.ಪ್ರ. ವಾರ್ತೆ   ಬೆಂಗಳೂರು   ಏ.1-
ದ್ವಿತೀಯ ಪಿಯು ವಿಜ್ಞಾನ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಸೀಡಿ ಮೂಲಕ ತರಬೇತಿ ಕಾರ್ಯಕ್ರಮ ನಡೆಯಲಿದೆ.
ಕಳೆದ ಕೆಲ ಶೈಕ್ಷಣಿಕ ವರ್ಷದಿಂದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ವಿಕಸನ ತರಬೇತಿ ಆಯೋಜಿಸಲಾಗಿತ್ತು. ಚಂದನ ವಾಹಿನಿ ಮೂಲಕ ನಡೆಸುತ್ತಿದ್ದ ತರಬೇತಿಯನ್ನು ಸೀಡಿಗೆ ವರ್ಗಾಯಿಸಿ ಎಲ್ಲ ಕಾಲೇಜುಗಳಿಗೆ ವಿತರಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಇಲಾಖೆಯ ತರಬೇತಿ ಕಾರ್ಯಕ್ರಮಗಳು ಎಲ್ಲ ಪಿಯು ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಇದೇ ಕಾರಣದಿಂದ ಶೈಕ್ಷಣಿಕ ವರ್ಷದ ಮಧ್ಯದಲ್ಲಿಯೇ ರಾಜ್ಯದ ಎಲ್ಲ ಪದವಿಪೂರ್ವ ಕಾಲೇಜುಗಳಿಗೆ ಭೌತಶಾಸ್ತ್ರ, ರಾಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರ ವಿಷಯಗಳ ಸಿಡಿಯನ್ನು ವಿತರಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಗಳು ತಿಳಿಸಿವೆ. ಈ ಮೂಲಕ ಕೆಲ ದಿನಗಳಿಂದ ತರಬೇತಿಗೆ ಸಂಬಂಧಿಸಿ ನಡೆಯುತ್ತಿದ್ದ ಗೊಂದಲಗಳಿಗೆ ತೆರೆ ಎಳೆಯಲು ಇಲಾಖೆ ಮುಂದಾಗಿದೆ.
ಸಿಡಿ ವಿತರಣೆ ಹೇಗೆ?: ವಿಜ್ಞಾನ ವಿಭಾಗದ ಭೌತಶಾಸ್ತ್ರ, ರಾಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರ ವಿಷಯಗಳಿಗೆ ಸಂಬಂಧಿಸಿ ಅಂತಿಮ ಪರೀಕ್ಷೆ ಹಾಗೂ ಸಿಇಟಿಗಾಗಿ ವಿಕಸನ ತರಬೇತಿಯನ್ನು ಚಂದನ ವಾಹಿನಿಯಲ್ಲಿ ಪ್ರಸಾರ ಮಾಡಲಾಗುತ್ತಿದೆ. ಈ ನಾಲ್ಕು ವಿಷಯಗಳ ಎಲ್ಲ ಪಠ್ಯಗಳನ್ನು ಈ ತರಬೇತಿಯಲ್ಲಿ ಅಳವಡಿಸಲಾಗಿತ್ತು. ಇದಲ್ಲದೇ ಮಾದರಿ ಪ್ರಶ್ನೆಗಳು, ಅಣಕು ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು.
ಆದರೆ ಚಂದನವಾಹಿನಿಯಲ್ಲಿನ ಕಾರ್ಯಕ್ರಮಗಳು ಎಲ್ಲರನ್ನೂ ತಲುಪುತ್ತಿಲ್ಲ ಎಂಬ ವಾದವೂ ಇತ್ತು. ಇದರ ಬದಲಾಗಿ ಎಜುಸ್ಯಾಟ್ ಮೂಲಕ ತರಬೇತಿ ನೀಡುವ ಬಗೆಗೂ ಚಿಂತನೆಯಿತ್ತು. ಆದರೆ ದರ ಬದಲಾಗಿ ತರಬೇತಿಯ ಎಲ್ಲ ಅಂಶಗಳನ್ನು ಒಳಗೊಂಡ ಸೀಡಿಯನ್ನು ವಿತರಿಸಿದರೆ ಎಲ್ಲ ವಿದ್ಯಾರ್ಥಿಗಳನ್ನು ಸಂಪರ್ಕಿಸಬಹುದೆಂದು ಇಲಾಖೆ ಚಿಂತನೆ ನಡೆಸಿದೆ.
ಪ್ರಶ್ನೆ ಪತ್ರಿಕೆ, ತರಬೇತಿಯ ವಿಡಿಯೋ ಅವತರಣಿಕೆ ಹಾಗೂ ತರಬೇತಿಯ ಇತರ ಸಾಮಗ್ರಿಗಳು ಸೀಡಿಯಲ್ಲಿ ಲಭ್ಯವಿರಲಿವೆ. ವಿಜ್ಞಾನದ ಈ ನಾಲ್ಕು ವಿಷಯಗಳನ್ನು ಒಳಗೊಂಡ ಸಿಡಿಗಳನ್ನು ಕಾಲೇಜುಗಳಿಗೆ ನೀಡಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಹಂಚಲು ಅವಕಾಶ ನೀಡಲಾಗಿದೆ. ಇದರಿಂದ ಕಾಲೇಜಿನಲ್ಲೂ ವಿದ್ಯಾರ್ಥಿಗಳಿಗೆ ಸಿಡಿ ಪ್ರದರ್ಶನ ಏರ್ಪಡಿಸಬಹುದು, ಇಲ್ಲವಾದಲ್ಲಿ ವಿದ್ಯಾರ್ಥಿಗಳಿಗೆ ಮನೆಗೆ ತೆಗೆದುಕೊಂಡು ಹೋಗಲು ಅವಕಾಶವಿರುತ್ತದೆ.
ಮುಂದಿನ ಶೈಕ್ಷಣಿಕ ವರ್ಷದಿಂದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಸಿಬಿಎಸ್‌ಇ ಪಠ್ಯಕ್ರಮ ಅಳವಡಿಕೆ ಆಗಿರುವುದರಿಂದ ಕೆಲ ಬದಲಾವಣೆ ಅನಿವಾರ್ಯವಾಗುತ್ತದೆ. ಈಗಾಗಲೇ ತರಬೇತಿ ನೀಡಿರುವ ವಿಡಿಯೋಗಳೆಲ್ಲವನ್ನೂ ಪುನರಾವರ್ತಿಸಲು ಸಾಧ್ಯವಿಲ್ಲ.
ಸಿಇಟಿಗೂ ತರಬೇತಿ ಆರಂಭಿಸಿದ ಇಲಾಖೆ: ವಿಕಸನ ತರಬೇತಿಯನ್ನು ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಗೆ ಸೀಮಿತಗೊಳಿಸಿರುವುದನ್ನು ಬದಲಾಯಿಸಿ ಸಿಇಟಿಗೂ ವಿಸ್ತರಿಸಿ ಇಲಾಖೆ ಆದೇಶ ಹೊರಡಿಸಿದೆ.
ವಿಕಸನ ತರಬೇತಿ ಅವಧಿಯನ್ನು ಕಡಿಮೆಗೊಳಿಸಿ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲಾಗಿದೆ ಎಂದು 'ಕನ್ನಡಪ್ರಭ' ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ್ದ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರು. ಪರೀಕ್ಷಾ ಪ್ರಾಧಿಕಾರದ ವತಿಯಿಂದ ಮಾ.29ರಿಂದ ಏ.27ರವರೆಗೆ 60 ತರಗತಿಗಳು ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿವೆ.
ಪ್ರತಿ ದಿನ ಬೆಳಗ್ಗೆ 40 ನಿಮಿಷ ಹಾಗೂ ರಾತ್ರಿ 45 ನಿಮಿಷಗಳ ತರಗತಿಯು ಪ್ರಸಾರವಾಗುತ್ತದೆ. ವಾರದ ಎಲ್ಲ ದಿನಗಳನ್ನೂ ಇದೇ ಸಮಯ ಪಾಲನೆ ಮಾಡಲಾಗುತ್ತದೆ. ಪ್ರತಿ ವಿಷಯದ ಮೇಲೂ 15 ತರಗತಿಗಳನ್ನು ಪ್ರಸಾರ ಮಾಡಲು ಕೆಇಎ ನಿರ್ಧರಿಸಿದೆ.


ಅಣಕು ಪರೀಕ್ಷೆ ಮರೆತಂತಿದೆ!
ಕಳೆದ ವರ್ಷದ ಸಿಇಟಿ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ 6 ಅಣಕು ಪರೀಕ್ಷೆ ನಡೆಸಲಾಗಿತ್ತು. ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳು ಅಣಕು ಪರೀಕ್ಷೆ ಬರೆದು ಸ್ವಯಂ ಮೌಲ್ಯಮಾಪನಕ್ಕೆ ಅವಕಾಶ ಮಾಡಲಾಗಿತ್ತು. ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ ಅಥವಾ ವಿಕಸನ ಅಧಿಕಾರಿಗಳ ಪ್ರಕಾರ ಇವತ್ತಿನವರೆಗೆ ಈ ಅಣಕು ಪರೀಕ್ಷೆ ಬಗ್ಗೆ ಇಲಾಖೆ ಚಿಂತನೆ ನಡೆಸಿಲ್ಲ. ತರಬೇತಿಯನ್ನು ನೀಡಲು ಮರು ನಿರ್ಧಾರ ಮಾಡಿರುವ ಇಲಾಖೆಯು ಅಣಕು ಪರೀಕ್ಷೆ ಕುರಿತಂತೆಯೂ ಚಿಂತನೆ ನಡೆಸಬೇಕಿದೆ.


ವಿಕಸನ ತರಬೇತಿಯ ಮುಂದಿನ ಭಾಗವಾಗಿ ಎಲ್ಲ ಪದವಿಪೂರ್ವ ಕಾಲೇಜುಗಳಿಗೆ ತರಬೇತಿಯ ಸೀಡಿಯನ್ನು ನೀಡಲು ಚಿಂತಿಸಲಾಗಿದೆ. ಪ್ರಾಥಮಿಕ ಹಂತದಲ್ಲಿ ಇದನ್ನು ಭೌತಶಾಸ್ತ್ರ, ರಾಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರ ವಿಷಯಗಳಿಗೆ ಸೀಮಿತಗೊಳಿಸಲಾಗುತ್ತಿದೆ.
- ಚಕ್ರವರ್ತಿ ಮೋಹನ್, ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು

- ರಾಜೀವ ಹೆಗಡೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com