ಕ.ಪ್ರ.ವಾರ್ತೆ, ಬೆಂಗಳೂರು ಏ.1-
ವಿದ್ಯಾರ್ಥಿಗಳಿಲ್ಲದೆ ಸರ್ಕಾರಿ ಶಾಲೆಗಳು ಖಾಲಿ ಹೊಡೆಯುತ್ತಿರುವ ಸಂದರ್ಭದಲ್ಲೇ ಹೊಸದಾಗಿ ಶಾಲೆಗಳನ್ನು ಆರಂಭಿಸಲು ಸರ್ಕಾರಕ್ಕೆ 2013-2014ನೇ ಸಾಲಿನಲ್ಲಿ ಖಾಸಗಿ ಆಡಳಿತ ಮಂಡಳಿಗಳಿಂದ 3210 ಅರ್ಜಿಗಳು ಬಂದಿವೆ.
ಈ ಪೈಕಿ 1ರಿಂದ 5ನೇ ತರಗತಿವರೆಗಿನ 630 ಶಾಲೆಗಳನ್ನು ಆರಂಭಿಸಲು ಮತ್ತು 6ರಿಂದ 8ರ ವರೆಗೆ ತರಗತಿ ವಿಸ್ತರಿಸಲು 1243 ಅರ್ಜಿಗಳು ಬಂದಿವೆ.
2011ರ ಸಮೀಕ್ಷೆ ಪ್ರಕಾರ ರಾಜ್ಯದ 49,631 ಶಾಲೆಗಳ ಪೈಕಿ 359 ಶಾಲೆಗಳು ವಿದ್ಯಾರ್ಥಿಗಳಿಲ್ಲದೇ ಮುಚ್ಚಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ನೂತನವಾಗಿ 3210 ಶಾಲೆಗಳ ಆರಂಭಕ್ಕೆ ಅನುಮತಿ ನೀಡಿದರೆ ಮತ್ತಷ್ಟು ಸರ್ಕಾರಿ ಶಾಲೆಗಳಿಗೆ ಬೀಗ ಬೀಳುವುದು ಖಚಿತ. ಬೆಂಗಳೂರು ನಗರದಲ್ಲಿ 337 ಶಾಲೆಗಳು ಪ್ರಾರಂಭವಾಗಲಿದ್ದು ಈ ಪೈಕಿ 143 ಶಾಲೆಗಳು 1ರಿಂದ 5ನೇ ತರಗತಿಗೆ ಸೇರಲಿವೆ. ಉಳಿದಂತೆ 6ರಿಂದ 8ನೇ ತರಗತಿಗೆ 194 ಶಾಲೆಗಳು ವಿಸ್ತರಣೆಗೊಳ್ಳಲಿವೆ.
ಖಾಸಗಿಗೆ ಜೋರು: ಸರ್ಕಾರದಿಂದ ಅನುಮತಿ ಪಡೆದು ಖಾಸಗಿ ಶಾಲೆ ಪ್ರಾರಂಭಿಸಿದಲ್ಲಿ ನೂತವಾಗಿ ಶಾಲೆಗೆ ಸೇರುವ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ಸೇರುವುದು ಬಿಟ್ಟು ಮನೆ ಬಳಿ ಇರುವ ಹೆಚ್ಚು ಅಕರ್ಷಕವಾಗಿ ಕಾಣುವ ಖಾಸಗಿ ಶಾಲೆಗೆ ಸೇರಿಕೊಳ್ಳುತ್ತಾರೆ. ಇದರಿಂದ ಸರ್ಕಾರಿ ಶಾಲೆಕಡೆ ಮುಖ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗಲಿದೆ.
ಗುಣಮಟ್ಟ ಕಡಿಮೆ ಪ್ರತಿಷ್ಠೆ ಜಾಸ್ತಿ: ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಶಾಲೆ ಸೇರಿಕೊಳ್ಳಲಿ. ಹೆಚ್ಚಿನ ಮಕ್ಕಳು ಸಾಕ್ಷರಸ್ಥರಾಗಲಿ ಎಂಬ ಉದ್ದೇಶದಿಂದ ಶಿಕ್ಷಣ ಇಲಾಖೆ ಮಕ್ಕಳಿಗೆ ಉಚಿತ ಊಟ, ಬಟ್ಟೆ, ಬ್ಯಾಗ್, ಸೈಕಲ್ ನೀಡುತ್ತಿದೆ. ಅಲ್ಲದೆ, ಉಚಿತವಾಗಿ ಶೈಕ್ಷಣಿಕ ಪ್ರವಾಸ ಕೂಡ ಏರ್ಪಡಿಸುತ್ತಿದೆ. ಈ ಎಲ್ಲಾ ಸೌಲಭ್ಯ ಇದ್ದರೂ ಸಹ ಪೋಷಕರು ಮಾತ್ರ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವುದು ಕಡಿಮೆಯಾಗುವುದಿಲ್ಲ.
ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗುವವರು ವಿವಿಧ ಪದವಿಗಳಲ್ಲಿ ಹೆಚ್ಚಿನ ಅಂಕಗಳಿಸಿ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಆಯ್ಕೆಯಾಗಿ ತರಬೇತಿ ಪಡೆದು ಆನಂತರ ಶಿಕ್ಷಕರಾಗುತ್ತಾರೆ. ಆದರೆ, ಖಾಸಗಿ ಶಾಲೆಗಳಲ್ಲಿ ಕಡಿಮೆ ಓದಿದವರು ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಾರೆ. ಇಂತಹ ಸಂದರ್ಭದಲ್ಲಿ ಪೋಷಕರು ಗುಣಮಟ್ಟ ಶಿಕ್ಷಣ ಇಲ್ಲದ ಹೆಚ್ಚಿನ ಪ್ರತಿಷ್ಠೆ ಇರುವ ಶಾಲೆಗಳಿಗೆ ಮಕ್ಕಳು ಸೇರಿಸುವುದರಲ್ಲಿ ಅರ್ಥವಿಲ್ಲ ಎನ್ನುತ್ತಾರೆ ಶಿಕ್ಷಣ ತಜ್ಞರು.
ಸಂಖ್ಯೆ ಕ್ಷೀಣಿಸುತ್ತಿದೆ: ವಾರ್ಷಿಕ ಶಿಕ್ಷಣದ ವರದಿ (ಎಎಸ್ಇಆರ್) ಪ್ರಕಾರ, 21011ರಲ್ಲಿ ಭಾರತದಲ್ಲಿ 6ರಿಂದ 14ವಯೋವಾನದವರು ಶೇ.76.05ರಷ್ಟು ಮಂದಿ ಓದುತ್ತಿದ್ದರು ಇವರ ಸಂಖ್ಯೆ 2012ರವೇಳೆಗೆ ಶೇ. 75.09ಕ್ಕೆ ಇಳಿಕೆಯಾಗಿದೆ. 2011ನೇ ಸಾಲಿನಲ್ಲಿ 7ರಿಂದ 16ವಯೋವಾನವದರು ಶೇ.74.03ರ ಪ್ರಮಾಣದಲ್ಲಿ ಶಾಲೆಗಳಿಗೆ ಹೋಗುತ್ತಿದ್ದರು. ಇವರ ಸಂಖ್ಯೆ 2012ರವೇಳೆಗೆ ಶೇ.73.06ಕ್ಕೆ ಇಳಿಕೆಯಾಗಿದೆ.
ನಾವು ಹಾಲಿ ಇರುವ ಸರ್ಕಾರಿ ಶಾಲೆಗಳನ್ನು ಉಳಿಸಲು ಹೋರಾಟ ನಡೆಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಮತ್ತಷ್ಟು ಖಾಸಗಿ ಶಾಲೆಗಳಿಗೆ ಅನುಮತಿ ನೀಡುವುದು ಸರಿಯಾದ ಕ್ರಮವಲ್ಲ.
- ವಾಸುದೇಶ ಶರ್ಮಾ, ಮಕ್ಕಳ ಕಲ್ಯಾಣ ಆಯೋಗದ ಮಾಜಿ ಅಧ್ಯಕ್ಷ
- ದೇವರಾಜ್ ಎಲ್.