ಬೆಂಗಳೂರು: ರಾಜ್ಯದಲ್ಲಿ ಅಪ್ರಾಪ್ತ ಬಾಲಕಿ, ಬಾಲಕರ ನಾಪತ್ತೆ ಪ್ರಕರಣದ ಹೆಚ್ಚಳ ಕುರಿತು ಆತಂಕ ವ್ಯಕ್ತಪಡಿಸಿರುವ ಹೈಕೋರ್ಟ್, ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ತೆಗೆದುಕೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ಆದೇಶಿಸಿದೆ.
ರಾಜಗೋಪಾಲನಗರದ 14 ವರ್ಷದ ಬಾಲಕನ ನಾಪತ್ತೆ ಪ್ರಕರಣ ಸಂಬಂಧ ಪೋಷಕರು ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಕೆ.ಎಲ್.ಮಂಜುನಾಥ್ ಹಾಗೂ ನ್ಯಾ.ಎಚ್.ಎಸ್.ಕೆಂಪಣ್ಣ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಹೆಚ್ಚುತ್ತಿರುವ ಅಪ್ರಾಪ್ತ ಬಾಲಕ, ಬಾಲಕಿಯರ ಪ್ರಕರಣಗಳ ಕುರಿತು ಕಾಳಜಿ ವ್ಯಕ್ತಪಡಿಸಿದ ಪೀಠ, ಈ ಸಂಬಂಧ ಪೊಲೀಸರು ಸೂಕ್ತ ಕ್ರಮವನ್ನೇಕೆ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿತು. ಈ ಸಂಬಂಧ ಉತ್ತರಿಸಲು ನಗರ ಪೊಲೀಸ್ ಆಯುಕ್ತರನ್ನು ಮಧ್ಯಾಹ್ನದ ವೇಳೆಗೆ ಖುದ್ದು ಹಾಜರಾಗುವಂತೆ ಆದೇಶಿಸಿತು. ಆದರೆ, ನಂತರ ಆದೇಶ ಹಿಂಪಡೆದ ಪೀಠ, ಆಯುಕ್ತರಿಗೆ ಅಪ್ರಾಪ್ತರ ನಾಪತ್ತೆ ಪ್ರಕರಣಗಳ ಪತ್ತೆಗೆ ಶೀಘ್ರ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿತು.
ಇದರೊಂದಿಗೆ, ನಾಪತ್ತೆಯಾಗಿರುವ ರಾಜಗೋಪಾಲನಗರದ ಬಾಲಕನನ್ನು ಕೂಡ ಶೀಘ್ರ ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೀಠ ಆದೇಶಿಸಿತು.
Advertisement