ಬೆಂಗಳೂರು: ಎರಡೂವರೆ ವರ್ಷದ ಬಾಲಕ ನೀರಿನ ತೊಟ್ಟಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸರ್ಕಾರಿ ಆಯುರ್ವೇದಿಕ್ ಕಾಲೇಜು ಬಳಿ ಮಂಗಳವಾರ ಈ ದುರಂತ ನಡೆದಿದೆ.
ದೌಲತ್ ಹಾಗೂ ಅತಿಯಾ ಬೇಗಂ ದಂಪತಿ ಪುತ್ರ ಆಲ್ಮಾಸ್ ಮೃತ ಬಾಲಕ. ಗುಲ್ಬರ್ಗ ಜಿಲ್ಲೆ ಸುರಪುರ ಮೂಲದ ಇವರು ಕೆಲ ತಿಂಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ನಿರ್ಮಾಣ ಹಂತದ ಕಟ್ಟಡಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ದಂಪತಿಗೆ ಇಬ್ಬರು ಮಕ್ಕಳು.
ಮೇಸ್ತ್ರಿ ಕೆಲಸ ಮಾಡುತ್ತಿದ್ದ ಗುಲ್ಬರ್ಗದವರೇ ಆದ ಸ್ವಾಮಿ ಎಂಬುವವರು ಅವರನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು. ಆಯುರ್ವೇದಿಕ್ ಕಾಲೇಜಿನಲ್ಲ್ಲಿ ಕೆಲಸ ಮಾಡುತ್ತಿದ್ದ ದಂಪತಿ ಹಾಗೂ ಇತರೆ ಕಾರ್ಮಿಕರು ಕೆಲಸ ಮುಗಿದ ನಂತರ ಕಾಲೇಜು ಆವರಣದಲ್ಲಿ ಅವರಿಗಾಗಿ ನಿರ್ಮಿಸಿರುವ ಶೆಡ್ಗಳಲ್ಲಿ ವಾಸಿಸುತ್ತಿದ್ದರು.
ಮಂಗಳವಾರ ಸಂಜೆ ಬಾಲಕನ ಪೋಷಕರು ಕೆಲಸದಲ್ಲಿ ನಿರತರಾಗಿದ್ದರು. ಕಾರ್ಮಿಕರ ಮಕ್ಕಳು ಕಟ್ಟಡದ ಬಳಿ ಆಟವಾಡುತ್ತಿದ್ದರು. ಕೆಲ ಹೊತ್ತಿನ ನಂತರ ಆಲ್ಮಾಸ್ ಅಲ್ಲಿರಲಿಲ್ಲ. ಅನುಮಾನಗೊಂಡ ಪೋಷಕರು ಆತನಿಗಾಗಿ ಹುಡುಕಾಟ ನಡೆಸಿದರು. ಆಗ ನೀರಿನ ತೊಟ್ಟಿಯಲ್ಲಿ ಬಿದ್ದಿದ್ದುದು ತಿಳಿದುಬಂದಿದೆ.
ನೀರಿನ ತೊಟ್ಟಿಯಿಂದ ಮೇಲೆತ್ತಿ ವಾಣಿವಿಲಾಸ ಆಸ್ಪತ್ರೆಗೆ ಮಗವನ್ನು ಸಾಗಿಸಿದರು. ಆದರೆ, ಮಗು ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದರು.
ಮುಂಜಾಗ್ರತಾ ಕ್ರಮವಿಲ್ಲ: ಅವರು ವಾಸಿಸುತ್ತಿದ್ದ ಶೆಡ್ ಹಾಗೂ ಘಟನೆ ನಡೆದ ಸ್ಥಳಕ್ಕೆ 150 ಮೀಟರ್ ದೂರ. ಮಗು ಅಲ್ಲಿಗೆ ಹೇಗೆ ಹೋಯಿತು ಎಂಬ ಬಗ್ಗೆ ಅನುಮಾನ ಬರುತ್ತಿದೆ. ಅಲ್ಲದೆ, ತೊಟ್ಟಿ ಸುತ್ತ ಅಡ್ಡಗೋಡೆ ಇರಲಿಲ್ಲ. ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದ ಕಾರಣ ಈ ದುರಂತ ಸಂಭವಿಸಿದೆ ಎಂದು ಕುಟುಂಬ ಸದಸ್ಯರು ದೂರಿದ್ದಾರೆ. ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.