ಬೆಂಗಳೂರು: ಹಾಲಿ ಇರುವ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಸುಧಾರಿಸಲು ಶಿಕ್ಷಕರಿಗೆ ಹೆಚ್ಚುವರಿ ತರಬೇತಿ ನೀಡಲು 2013- 14ನೇ ಸಾಲಿಗೆ ಶಿಕ್ಷಣ ಇಲಾಖೆಗೆ 1731.58 ಕೋಟಿ ಅಗತ್ಯವಿದೆಯಂತೆ!
ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಸರ್ಕಾರದ ಯೋಜನೆ ಮತ್ತು ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚಿಸಿ ಪೂರ್ವಭಾವಿಯಾಗಿ ಬೇಕಾಗಿರುವ ಅನುದಾನದ ಬಗ್ಗೆ ಪಟ್ಟಿ ಮಾಡಿದ್ದಾರೆ.
ಈ ಪಟ್ಟಿಯನ್ನು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಸಲ್ಲಿಸಿ ಹೆಚ್ಚುವರಿ ಅನುದಾನ ಪಡೆಯುವ ನಿರೀಕ್ಷೆಯಲ್ಲಿದೆ ಉನ್ನತ ಶಿಕ್ಷಣ.
ಶಾಲಾ- ಕಾಲೇಜುಗಳಿರುವ ಸ್ಥಳಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ. ಹೆಚ್ಚಿಸಲು ಹಾಗೂ ಗುಣಮಟ್ಟ ಶಿಕ್ಷಣ ನೀಡಲು ಶಿಕ್ಷಕರಿಗೆ ತರಬೇತಿ ನೀಡುವ ಉದ್ದೇಶ ಸೇರಿದಂತೆ ಅಭಿವೃದ್ಧಿ ಕಾರ್ಯಕ್ರಮಕ್ಕೆ ಉನ್ನತ ಶಿಕ್ಷಣ ಇಲಾಖೆ 1731.58 ಕೋಟಿ ಅವಶ್ಯಕವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 1030 ಕೋಟಿ ಹೆಚ್ಚಳವಾಗಿದೆ.
ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಸುಮಾರು 360 ಪ್ರಥಮ ದರ್ಜೆ ಕಾಲೇಜುಗಳಿವೆ. ಈ ಕಾಲೇಜುಗಳ ಪೈಕಿ ಬಹುತೇಕ ಶೇ.50ರಷ್ಟು ಕಾಲೇಜಿನಲ್ಲಿ ಇಂದಿಗೂ ಮೂಲ ಸೌಕರ್ಯವೇ ಇಲ್ಲ.
ಹೀಗಾಗಿ ಈ ಕಾಲೇಜುಗಳಿಗೆ ಅಗತ್ಯ ಸೌಲಭ್ಯ ನೀಡಲು ಸರ್ಕಾರಕ್ಕೆ ಅನುದಾನ ಅವಶ್ಯಕ ಎಂದು ಉನ್ನತ ಶಿಕ್ಷಣ ಇಲಾಖೆ ಸಚಿವ ಸಿ.ಟಿ. ರವಿ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಯುಜಿಸಿ ಸಂಬಳವೇ ದುಬಾರಿ: ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಯಂ ಉಪನ್ಯಾಸಕರಿಗೆ ಸಂಬಳ ನೀಡುತ್ತಿರುವುದೆ ಶಿಕ್ಷಣ ಇಲಾಖೆಗೆ ಹೊರೆ. ಅತಿಥಿ ಉಪನ್ಯಾಸಕರು ಹೊರತುಪಡಿಸಿ ಕಾಯಂ ಉಪನ್ಯಾಸಕರಿಗೆ ವಿಶ್ವವಿದ್ಯಾಲಯ
ಧನ ಸಹಾಯ ಆಯೋಗ(ಯುಜಿಸಿ) ನೀಡುವ ಸಂಬಳ 40 ರಿಂದ 1.20 ಲಕ್ಷ. ಹೆಚ್ಚಿನ ಸಂಬಳ ನೀಡಿದ್ದರೂ ಸಾಕಷ್ಟು ಉಪನ್ಯಾಸಕರು ಕಾಲೇಜಿನ ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ಮಾತ್ರ ಕಡಿಮೆ. ಇದೇ ಸಂಬಳದಲ್ಲಿ ಇಬ್ಬರು ಅತಿಥಿ ಉಪನ್ಯಾಸಕರಿಗೆ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಬಹುದು.
ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಗೆ ದೊರೆಯುವ ಅನುದಾನದಲ್ಲಿ ಶೇ.50 ಸಂಬಳಕ್ಕೆ ಖಾಲಿಯಾಗುತ್ತದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
-ದೇವರಾಜ್ ಎಲ್.