ಬೆಂಗಳೂರು: ಕುಮಾರಸ್ವಾಮಿ ಬಡಾವಣೆ ಠಾಣೆ ಪೊಲೀಸರು ಮಂಗಳವಾರ ಮುಂಜಾನೆ ರೌಡಿ ಶೀಟರ್ ದಸ್ತಗಿರ್ ಅಲಿಯಾಸ್ ದಸ್ತು ಮೇಲೆ ಗುಂಡು ಹಾರಿಸಿದ್ದಾರೆ. ಸರಬಂಡೆಪಾಳ್ಯದ ಬನಶಂಕರಿ ದೇವಸ್ಥಾನದ ಸಮೀಪ ಘಟನೆ ನಡೆದಿದೆ.
ಸರಬಂಡೆಪಾಳ್ಯದ ನಿವಾಸಿಯಾದ ದಸ್ತಗಿರ್ನನ್ನು ಪೊಲೀಸರು ಬಂಧಿಸಲು ಹೋದಾಗ, ಪೊಲೀಸ್ ಪೇದೆಯೊಬ್ಬರಿಗೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ. ಈ ವೇಳೆ ಕುಮಾರಸ್ವಾಮಿ ಬಡಾವಣೆ ಠಾಣೆಯ ಸಬ್ಇನ್ಸ್ಪೆಕ್ಟರ್ ಅಶೋಕ್ ಕುಮಾರ್ ದಸ್ತಗಿರ್ ಎಡಗಾಲಿಗೆ ಗುಂಡು ಹಾರಿಸಿದ್ದಾರೆ. ಆತ ಅಲ್ಲಿಯೇ ಕುಸಿದುಬಿದ್ದ.
ತಕ್ಷಣ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆಯಲ್ಲಿ ಗಾಯಗೊಂಡ ಪೊಲೀಸ್ ಪೇದೆ ಎಂ.ಜಿ. ಅಭಿಜಿತ್ಗೌಡ ಅವರು ಕುಮಾರಸ್ವಾಮಿ ಬಡಾವಣೆಯಲ್ಲಿರುವ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹಿಂತಿರುಗಿದ್ದಾರೆ.
ಒಂಟಿ ಮಹಿಳೆಯರೇ ಗುರಿ, ಮುಂಜಾನೆ ಕೃತ್ಯ: ಬಂಧಿತ ದಸ್ತಗಿರ್ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಳ್ಳುತ್ತಿದ್ದ. ಮುಂಜಾನೆ ಹಾಗೂ ಸಂಜೆ ವೇಳೆ ವಾಕಿಂಗ್ ಹೋಗಿದ್ದ ವೇಳೆ ಅವರನ್ನು ಹಿಂಬಾಲಿಸಿ ಬೆದರಿ, ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ.
ದಸ್ತಗಿರ್ ಕುಮಾರಸ್ವಾಮಿ ಬಡಾವಣೆಯಲ್ಲಿ ರೌಡಿ ಶೀಟರ್ ಆಗಿದ್ದು, ಕೊಲೆ, ಸುಲಿಗೆ, ಬೆದರಿಕೆ, ಸರಗಳ್ಳತನ, ದರೋಡೆಯಂತಹ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಸುಬ್ರಮಣ್ಯಪುರ, ಜಯನಗರ, ಕುಮಾರಸ್ವಾಮಿ ಬಡಾವಣೆ ಠಾಣೆ ಪೊಲೀಸರಿಗೆ ವಿವಿಧ 15 ಕೃತ್ಯಗಳಲ್ಲಿ ಬೇಕಾಗಿದ್ದ.
ಕಳೆದ ಮೂರು ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ ಈತನನ್ನು ಬಂಧಿಸುವಂತೆ ನ್ಯಾಯಾಲಯ ಸುಬ್ರಮಣ್ಯಪುರ ಪೊಲೀಸರಿಗೆ ಸೂಚಿಸಿ ವಾರೆಂಟ್ ಹೊರಡಿಸಿತ್ತು.
ಅಸಭ್ಯ ವರ್ತನೆ: ಇತ್ತೀಚೆಗೆ ನಡೆದ ಪ್ರಕರಣವೊಂದರಲ್ಲಿ ಮಹಿಳೆಯನ್ನು ಬೆದರಿಸಿ ಚನ್ನಾಭರಣ ಕಿತ್ತುಕೊಂಡ ದಸ್ತಗಿರ್, ಘಟನೆ ನಂತರ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ಮೈ ಕೈ ಗಾಯಗೊಳಿಸಿ ಪರಾರಿಯಾಗಿದ್ದ.
ಮತ್ತೊಂದು ಪ್ರಕರಣದಲ್ಲಿ ಓಲೆ ಕಿತ್ತುಕೊಳ್ಳುವ ಉದ್ದೇಶದಿಂದ ಇಬ್ಬರು ಯುವತಿಯರ ಮೇಲೆ ಹಲ್ಲೆ ಮಾಡಿ ಅವರ ಕಿವಿಗಳನ್ನು ಗಾಯಗೊಳಿಸಿದ್ದ. ಘಟನೆಯಲ್ಲಿ ಯುವತಿಯರು ಗಂಭೀರವಾಗಿ ಗಾಯಗೊಂಡಿದ್ದರು.
ಇತ್ತೀಚೆಗೆ ಸಾರಕ್ಕಿ ಜಂಕ್ಷನ್ನಲ್ಲಿ ದೇವೇಂದ್ರಸಿಂಗ್ ಎಂಬವರನ್ನು ಬೆದರಿಸಿ ಅವರ ಬಳಿ ಇದ್ದ ಬೆಲೆಬಾಳುವ ವಸ್ತುಗಳನ್ನು ದೋಚಿ, ಕೊಲೆಗೆ ಯತ್ನಿಸಿದ್ದ. ಈ ಸಂಬಂಧ ಕುಮಾರಸ್ವಾಮಿ ಬಡಾವಣೆ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಮುಂಜಾನೆ ಗುಂಡಿನ ದಾಳಿ: ದಸ್ತಗಿರ್ ಸರಬಂಡೆಪಾಳ್ಯಕ್ಕೆ ಆಗಾಗ ಬಂದುಹೋಗುವ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ಮಂಗಳವಾರ ಮುಂಜಾನೆ 3.30ರ ವೇಳೆಗೆ ಆತನನ್ನು ಬಂಧಿಸಲು ಮುಂದಾದರು. ಕುಮಾರಸ್ವಾಮಿ ಬಡಾವಣೆ ಠಾಣೆಯ ಪಿಎಸ್ಐ ಅಶೋಕ್ ಕುಮಾರ್ ಅವರ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಮಂದಿ ದಾಳಿ ಮಾಡಿದಾಗ ಆತ ತಪ್ಪಿಸಿಕೊಳ್ಳಲು ಯತ್ನಿಸಿದ.
ಈ ವೇಳೆ ಅಭಿಜಿತ್ ಅವರಿಗೆ 2 ಬಾರಿ ಚಾಕುವಿನಿಂದ ಇರಿದಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.