ಬೆಂಗಳೂರು: ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಸಿ.ಎಂ.ಉದಾಸಿ ಅವರಿಗೆ ಪಕ್ಷಾಂತರ ಅಂಟು ಜಾಡ್ಯವಾಗಿದ್ದು, ಅವರು ಪಕ್ಷದ ಶಾಸಕರನ್ನು ದಾರಿ ತಪ್ಪಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಸಹ ವಕ್ತಾರರಾದ ಅಶ್ವತ್ಥನಾರಾಯಣ ಹಾಗೂ ಡಿ.ಎಸ್. ವೀರಯ್ಯ ಆಪಾದಿಸಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಆರೋಪ ಮಾಡಿರುವ ಅವರು, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಲಜ್ಜೆಗೇಡಿ ಎಂದು ಏಕವಚನದಲ್ಲಿ ನಿಂದಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯದ ಜನತೆಯ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು. ಉತ್ತರ ಕರ್ನಾಟಕದಿಂದ ಬಂದಿರುವ ಶೆಟ್ಟರ್ ಅವರನ್ನು ವಿಧಾನಸೌಧದ ಮೊಗಸಾಲೆಯಲ್ಲಿ ಯಡಿಯೂರಪ್ಪ ಏಕವಚನದಲ್ಲಿ ನಿಂದಿಸಿದ್ದಾರೆ. ಇದು ಆ ಭಾಗದ ಜನತೆಗೆ ಮಾಡಿದ ಅವಮಾನ ಎಂದು ಹೇಳಿದರು.