ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಸುತ್ತಿನ ಸಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಬೆಳವಣಿಗೆ ಸುತ್ತ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕೇಂದ್ರಕ್ಕೆ ವರದಿ ನೀಡಿದ್ದಾರೆ. ರಾಜ್ಯದ ವಿದ್ಯಮಾನಗಳ ಬಗ್ಗೆ ರಾಜ್ಯಪಾಲರು ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ನೀಡಬೇಕಾಗುತ್ತದೆ. ಅದರ ಭಾಗವಾಗಿ ಬುಧವಾರ ನಡೆದ ಬೆಳವಣಿಗೆಯನ್ನು ರವಾನಿಸಿದ್ದಾರೆ. ಬಿಎಸ್ವೈ ಬಣದ ಶಾಸಕರು ರಾಜಭವನಕ್ಕೆ ಆಗಮಿಸುವುದಕ್ಕೆ ಮುನ್ನವೇ ಸಿಎಂ ಶೆಟ್ಟರ್ ಜತೆಯಲ್ಲೂ ಸಮಾಲೋಚಿಸಿರುವ ರಾಜ್ಯಪಾಲರು, ಕಾಂಗ್ರೆಸ್ನ ಡಿ.ಕೆ. ಶಿವಕುಮಾರ್ರನ್ನು ರಾಜಭವನಕ್ಕೆ ಕರೆಸಿಕೊಂಡು ಚರ್ಚಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.