ರಾಜಿನಾಮೆ ಬಗ್ಗೆ ಪ್ರತಿಕ್ರಿಯಿಸಲು ಅಸಹ್ಯ: ಸೊಗಡು ಶಿವಣ್ಣ

Updated on: 

ಬೆಂಗಳೂರು: ಬಾಚಿಕೊಂಡು ಹೋಗುವವರು ಪಕ್ಷಕ್ಕೆ ಬಂದಿದ್ದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬಂತು. ಅವರು ಉಂಡು ಹೋದರು, ಕೊಂಡೂ ಹೋದರು...! ಸಚಿವರಾದ ಸಿ.ಎಂ. ಉದಾಸಿ, ಶೋಭಾ ಕರಂದ್ಲಾಜೆ ಸೇರಿದಂತೆ ಹದಿಮೂರು ಶಾಸಕರ ರಾಜಿನಾಮೆ ಪ್ರಹಸನದ ಬಗ್ಗೆ ಪರಿಸರ ಖಾತೆ ಸಚಿವ ಸೊಗಡು ಶಿವಣ್ಣ ಮಾಡಿರುವ ವ್ಯಾಖ್ಯಾನ ಇದು. 1983ರಿಂದ ನಾವೆಲ್ಲ ಸೇರಿ ಕಟ್ಟಿದ ಪಕ್ಷಕ್ಕೆ ಮತ್ತು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಟೀಕಿಸಿ  ಹೊರ ಹೋಗುತ್ತಿರುವ ಇವರ ಬಗ್ಗೆ ಪ್ರತಿಕ್ರಿಯೆ ನೀಡುವುದಕ್ಕೂ ನಾಚಿಕೆ ಮತ್ತು ಅಸಹ್ಯವಾಗುತ್ತಿದೆ. ಅನೇಕ ಪ್ರಜ್ಞಾವಂತರು ನನಗೆ ಫೋನ್ ಮಾಡಿ ಏನಿದು ಎಂದು ಕೇಳುತ್ತಿದ್ದಾರೆ. ಅವರ ಬಗ್ಗೆ ಮಾತನಾಡುವುದೇ ಅವಮಾನ ಎಂದು ಸಚಿವರು ಅಭಿಪ್ರಾಯಪಟ್ಟರು. ಇವರೆಲ್ಲ ಯಾವ ಪುರುಷಾರ್ಥಕ್ಕೆ ರಾಜಿನಾಮೆ ನೀಡುತ್ತಿದ್ದಾರೆ? ಏಕೆ ಹೊರ ಹೋಗುತ್ತಿದ್ದಾರೆ? ಬಿಜೆಪಿಯಲ್ಲಿ ಏನಾದರೂ ಸ್ಫೋಟ ಆಗಿತ್ತಾ? ಸುನಾಮಿ ಬಂದಿತ್ತಾ ಎಂದು ಪ್ರಶ್ನಿಸಿದ ಅವರು, ಇವೆರೆಲ್ಲ ಪಕ್ಷದಲ್ಲಿ ಅಧಿಕಾರವನ್ನು ಉಂಡರು. ಈಗ ಅಪವಾದವನ್ನೂ ಕೊಂಡು ಹೋಗುತ್ತಿದ್ದಾರೆ. ಇದರಿಂದ ಪಕ್ಷ ಸ್ವಚ್ಚವಾಗಿದೆ. ಇನ್ನೂ ಕೆಲವು ಕಲ್ಮಷಗಳು ಇವೆ. ನಾವೇ ಸ್ವಚ್ಚ ಮಾಡುತ್ತೇವೆ ಎಂದು ವ್ಯಂಗ್ಯವಾಡಿದರು.
ಸಿಎಂ ಮಾಡೋಕ್ಕಾಗುತ್ತಾ?:  ಶೋಭಾ ಕರಂದ್ಲಾಜೆ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿಲ್ಲ ಎಂಬ ಸಿಟ್ಟಿಗೆ ರಾಜಿನಾಮೆ ನೀಡಿದರೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಬಿಜೆಪಿ ಸ್ವಾಮಿ. 'ಬಳಕೊಂಡು ಹೋಗುವವರನ್ನೆಲ್ಲ ಇಲ್ಲಿ ಸಿಎಂ ಮಾಡೋಕೆ ಆಗೊಲ್ಲ' ಎಂದು ಕಿಡಿಕಾರಿದರು. ಸಚಿವ ಉದಾಸಿ ಕೆಲಸ ಮಾಡಿದ್ದಾರೋ ಇಲ್ಲವೋ ಎಂಬುದನ್ನು ನಾನು ಈಗ ಹೇಳುವುದಕ್ಕೆ ಬಯಸುವುದಿಲ್ಲ. ಆದರೆ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ನಿರ್ಮಾಣ ಮಾಡಿದ ರಸ್ತೆಗಳಲ್ಲಿ ಪ್ರಯಾಣಿಸಿದಾಗ ಖುಷಿಯಾಗುತ್ತದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com