ಬೆಂಗಳೂರು: ಪ್ರಥಮ ಪಿಯುಸಿ ಪರೀಕ್ಷೆಗೆ ಇನ್ನು ಕೇವಲ 28ದಿನಗಳು ಬಾಕಿ. ಆದರೆ ಪ್ರಶ್ನೆ ಪತ್ರಿಕೆಗಳು ಹೇಗಿರಬೇಕೆಂಬ ಬಗ್ಗೆ ಇವತ್ತಿನವರೆಗೆ ಇಲಾಖೆ ನಿರ್ಧರಿಸಿಲ್ಲ. ಮತ್ತೊಂದೆಡೆ ಸಿಸಿಇ ನಿಯಮ ಜಾರಿಗೆ ಬಂದ 7 ತಿಂಗಳ ಬಳಿಕ ನಿಯಮವನ್ನೇ ಕೈಬಿಡಲು ಇಲಾಖೆ ನಿರ್ಧರಿಸಿದೆ.
ರಾಜ್ಯದ ಪದವಿಪೂರ್ವ ಶಿಕ್ಷಣ ವಿದ್ಯಾರ್ಥಿಗಳ ಮೇಲೆ ಇಲಾಖೆ ತೋರುತ್ತಿರುವ ಕಾಳಜಿಯಿದು. ಫೆಬ್ರವರಿ 22ರಿಂದ ರಾಜ್ಯದಲ್ಲಿನ ಎಲ್ಲ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ಆರಂಭವಾಗುತ್ತಿದೆ. ಆದರೆ ಇವತ್ತಿನವರೆಗೆ ಇಲಾಖೆಯು ಪರೀಕ್ಷೆಯ ರೂಪರೇಷೆ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ವಿದ್ಯಾರ್ಥಿಗಳ ಶೈಕ್ಷಣಿಕ ಗೊಂದಲ ತಿಳಿ ಮಾಡುವ ಪ್ರಯತ್ನವನ್ನೂ ಮಾಡಿಲ್ಲ.
ಕಳೆದ ಜೂನ್ನಲ್ಲಿ ಹೊಸದಾಗಿ ಜಾರಿಗೆ ತಂದಿದ್ದ ಸಿಸಿಇ ಪದ್ಧತಿಯನ್ನು ನಿಲ್ಲಿಸಲು ಮುಂದಾಗಿರುವುದರಿಂದ ಮತ್ತೆ ಈ ಗೊಂದಲ ಏರ್ಪಟ್ಟಿದೆ. ಸಿಸಿಇ ನಿಯಮದ ಪ್ರಕಾರ ಪ್ರಾಯೋಗಿಕ ಪರೀಕ್ಷೆ ಇದ್ದರೆ 60, ಇಲ್ಲದಿದ್ದರೆ 80 ಅಂಕಗಳ ಪರೀಕ್ಷೆ ನಡೆಸಲು ಚಿಂತಿಸಲಾಗಿತ್ತು. ಆದರೆ ಈಗ ಸಿಸಿಇ ರದ್ದಾಗುತ್ತಿರುವ ಕಾರಣದಿಂದ ಪರೀಕ್ಷೆಯ ಅಂಕವನ್ನು ಹೆಚ್ಚಿಸಬೇಕಿದೆ. ಕಳೆದ 7 ತಿಂಗಳಿಂದ ಪರೀಕ್ಷೆಗೆ ತಯಾರಾಗುತ್ತಿದ್ದ ವಿದ್ಯಾರ್ಥಿಗಳು ಮತ್ತೆ ತಮ್ಮ ಮನಃಸ್ಥಿತಿ ಬದಲಿಸಿಕೊಳ್ಳಬೇಕಿದೆ.
ಬದಲಾಗಿತ್ತು ಪಠ್ಯ: ವಿಜ್ಞಾನ ವಿಭಾಗದ ಭೌತಶಾಸ್ತ್ರ, ರಾಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರದ ಪಠ್ಯವನ್ನು ಬದಲಿಸಲಾಗಿತ್ತು. ಶೇ.30ಕ್ಕೂ ಅಧಿಕ ಪಠ್ಯಕ್ರಮ ಸೇರಿದ್ದರಿಂದ ವಿದ್ಯಾರ್ಥಿಗಳು ಆತಂಕದಲ್ಲಿಯೇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಇದಲ್ಲದೇ ಕಿರುಪರೀಕ್ಷೆಗಳಲ್ಲಿ ಉತ್ತಮ ಸಾಧನೆಗೈದರೆ ಹಾಗೂ ಉತ್ತಮ ಹಾಜರಾತಿ ಹೊಂದಿದ್ದರೆ 'ಪಾಕೆಟ್' ಅಂಕ ದೊರೆಯುತ್ತದೆ, ಕೇವಲ 60 ಅಂಕಗಳಿಗೆ ಪರೀಕ್ಷೆ ನಡೆಯುತ್ತದೆ ಎಂಬ ಸಂತಸದಲ್ಲಿದ್ದರು. ಆದರೆ ವಿದ್ಯಾರ್ಥಿಗಳಿಗೆ ಇಲಾಖೆ ಹೊಸ ಶಾಕ್ ನೀಡಿದೆ. ಕಾಲೇಜುಗಳಿಗೆ ಈ ಬಗ್ಗೆ ಮಾಹಿತಿ ನೀಡಿಲಾಗಿದೆಯಾದರೂ, ವಿದ್ಯಾರ್ಥಿಗಳಿಗೆ ಈ ಬಗ್ಗೆ ಮಾಹಿತಿ ಇಲ್ಲ. ಇಲಾಖೆಯ ಉನ್ನತ ಮೂಲದ ಪ್ರಕಾರ ಮತ್ತೆ ಹಳೆಯ ಮಾದರಿಯಲ್ಲೇ ಪರೀಕ್ಷೆಗಳು ನಡೆಯಲಿವೆ. ಏಕೆಂದರೆ ಪದವಿ ಪೂರ್ವ ಇಲಾಖೆಯ ಜಡ್ಡು ಹಿಡಿದ ಅಧಿಕಾರಿಗಳಿಗೆ ಹೊಸತನ ಎಂದರೆ ಅಲರ್ಜಿ.
ಸಿಸಿಇ(ನಿರಂತರ ಸಮಗ್ರ ಮೌಲ್ಯಮಾಪನ) ರದ್ದು: ಬಹು ನಿರೀಕ್ಷಿತ ಸಿಸಿಇ ನಿಯಮಕ್ಕೆ ತಿಲಾಂಜಲಿ ಇಡಲು ಇಲಾಖೆ ನಿರ್ಧರಿಸಿದೆ. ಇದಕ್ಕೆ ಸ್ವತಃ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಯವರೇ ಮುದ್ರೆ ಒತ್ತಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ತಜ್ಞರ ಸಲಹೆ ಪಡೆದು ಜಾರಿಗೆ ತರಲು ಪರಿಶೀಲನೆ ನಡೆಸಬಹುದು ಎಂಬ ಒಕ್ಕಣಿಕೆಯನ್ನು ಜತೆಗೆ ಹಾಕಲಾಗಿದೆ.
ಹಾಗಿದ್ದರೆ ಈ ನಿಯಮ ಸೂಕ್ತವಾಗಿಲ್ಲ, ಗೊಂದಲದಿಂದ ಕೂಡಿದೆ ಎಂದು ತಿಳಿಯಲು ಸಚಿವ ಕಾಗೇರಿ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳಿಗೆ 7 ತಿಂಗಳ ಕಾಲಾವಕಾಶ ಬೇಕಾಯಿತೆ?
ಸಿಸಿಇ ನಿಯಮಗಳು ಸಮರ್ಪಕವಾಗಿಲ್ಲ ಎಂದಾಗಿದ್ದರೆ ಶಿಕ್ಷಣ ಸಚಿವರು, ಪ್ರಾಂಶುಪಾಲರು ಹಾಗೂ ಹಿರಿಯ ಅಧಿಕಾರಿಗಳು ಇಷ್ಟು ದಿನ ಸುಮ್ಮನಿರಲು ಕಾರಣವೇನು?
2012- 13ನೇ ಸಾಲಿನ ಪ್ರಥಮ ಪಿಯುಸಿ ಪರೀಕ್ಷೆಗಳನ್ನು ನಿರಂತರ ಸಮಗ್ರ ಮೌಲ್ಯಮಾಪನ ಪದ್ಧತಿ(ಸಿಸಿಇ) ಜಾರಿಗೊಳಿಸಲು ತೀರ್ಮಾನಿಸಲಾಗಿತ್ತು. ಸಿಸಿಇ ಪದ್ಧತಿಯೇ ಜಾರಿಯಾಗುತ್ತದೆ ಎಂದು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಪರೀಕ್ಷೆ ಎದುರಿಸಲು ಸಿದ್ಧರಾಗಿದ್ದರು. ಆದರೆ ಸಿಸಿಇಯನ್ನು ರದ್ದುಗೊಳಿಸುವ ಸಲುವಾಗಿ ಜ.28ರಂದು ಪ್ರಾಂಶುಪಾಲರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಯುತ್ತಿದೆ. ಸಿಸಿಇಯನ್ನು ರದ್ದುಗೊಳಿಸುವಂತೆ ಈಗಾಗಲೇ ಎಲ್ಲ ಕಾಲೇಜುಗಳಿಗೆ ಮೌಖಿಕ ಸಂದೇಶ ಕಳುಹಿಸಲಾಗಿದೆ. ಇನ್ನೊಂದೆಡೆ ಪರೀಕ್ಷೆಯನ್ನು ರಾಜ್ಯ ಅಥವಾ ಜಿಲ್ಲಾ ಮಟ್ಟದಲ್ಲಿ ನಡೆಸಬೇಕೆ ಎಂಬ ಬಗೆಗೂ ಅಂತಿಮ ತೀರ್ಮಾನ ಕೈಗೊಂಡಿಲ್ಲ.
ವಿದ್ಯಾರ್ಥಿಗಳಿಗೆ ಅನ್ಯಾಯ: ಉಪನ್ಯಾಸಕು ಈಗಾಗಲೇ ಸಿಸಿಇ ಪದ್ಧತಿಯಲ್ಲಿ 4 ಪರೀಕ್ಷೆ ನಡೆಸಿದ್ದಾರೆ. ಸಿಸಿಇ ಮಾದರಿಯಲ್ಲಿ ಅಂಕ ಲೆಕ್ಕಾಚಾರ ಮಾಡುವುದು ಸುಲಭವಲ್ಲ. ಈ ನಿಯಮದ ಮೂಲಕ ಮುಂದಿನ ಶೈಕ್ಷಣಿಕ ವರ್ಷಕ್ಕೆ 10 ಪಾಕೆಟ್ ಅಂಕ ಬರುತ್ತದೆ ಎಂಬ ಆಸೆಯಲ್ಲಿ ವಿದ್ಯಾರ್ಥಿಗಳಿದ್ದರು. ಪಠ್ಯಕ್ರಮ ಹೆಚ್ಚಾದ ತಲೆನೋವಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಸಿಸಿಇ ಲೆಕ್ಕಾಚಾರದಲ್ಲೂ ನಿರತರಾಗಿದ್ದರು. ಆದರೆ ಕಳೆದ 7 ತಿಂಗಳ ಶ್ರಮಗಳೆಲ್ಲವೂ ವ್ಯರ್ಥವಾಗಿದೆ. ಇಲಾಖೆಯ ದೊಡ್ಡ ತಲೆಗಳು ಮಕ್ಕಳೊಂದಿಗೆ ಚೆಲ್ಲಾಟವಾಡುವುದನ್ನು ನಿಲ್ಲಿಸುವ ಲಕ್ಷಣಗಳು ಕಾಣುತ್ತಿಲ್ಲ.
- ರಾಜೀವ ಹೆಗಡೆ/ದೇವರಾಜ್ ಎಲ್.