ಬೆಂಗಳೂರು: ಟ್ರ್ಯಾಕ್ಟರ್ ತಯಾರಿಕಾ ಕಂಪನಿ 'ಟಾಫೆ' ದೊಡ್ಡಬಳ್ಳಾಪುರದಲ್ಲಿ ಶುಕ್ರವಾರ(ಮಾ. 15) 'ಕರ್ನಾಟಕ ರೈತರ ದಿನಾಚರಣೆ' ಹಮ್ಮಿಕೊಂಡಿದೆ.
ಕೃಷಿ ಕೇತ್ರದಲ್ಲಿ ಆಹಾರ-ಧಾನ್ಯ ಮುಂತಾದ ಬೆಳೆಗಳ ಉತ್ಪಾದನೆಯಲ್ಲಿ ಹೆಚ್ಚಿನ ಸಾಧನೆ ಸಾಧ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಕೃಷಿ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸರಣಿ 'ರೈತ ಸ್ನೇಹಿ' ಕಾರ್ಯಕ್ರಮಗಳಿಂದ ಉತ್ತೇಜಿತರಾಗಿರುವ ಟಾಫೆ, ಈಗ ಮುಂದಿನ ಹೆಜ್ಜೆಯಾಗಿ 'ಕರ್ನಾಟಕ ರೈತರ ದಿನಾಚರಣೆ'ಗೆ ಮುಂದಾಗಿದೆ.
ಕಾರ್ಯಕ್ರಮದಲ್ಲಿ ತೋಟಗಾರಿಕೆ ವಲಯವನ್ನು ಮುಖ್ಯವಾಗಿ ಪರಿಗಣಿಸಲಾಗಿದ್ದು, ಹಣ್ಣು ಮತ್ತು ತರಕಾರಿ ಬೆಳೆಗಳಲ್ಲಿ ಹೆಚ್ಚಿನ ಸುಧಾರಣೆ ತರುವ ಸಲುವಾಗಿ 'ಟಾಫೆ' ತಜ್ಞರು ಒತ್ತು ನೀಡಲಿದ್ದಾರೆ. ಜತೆಗೆ, ಮಾವು, ದ್ರಾಕ್ಷಿ, ಸಪೋಟ, ಬಾಳೆ, ಸೀಬೆ, ಪಪ್ಪಾಯ ಮೊದಲಾದ ತೋಟಗಾರಿಕೆ ಬೆಳೆಗಳ ಹಾಗೂ ಹೂಕೋಸು, ಗೆಡ್ಡೆಕೋಸು, ಬದನೆಕಾಯಿ, ಟೊಮೆಟೊ ಮತ್ತಿತರ ತರಕಾರಿ ಬೆಳೆ ಕುರಿತು ರೈತರಿಗೆ ಹೆಚ್ಚಿನ ಮಾಹಿತಿ ನೀಡಿ ಆ ನಿಟ್ಟಿನಲ್ಲಿ ಅವರಲ್ಲಿ ಜಾಗೃತಿ ಮೂಡಿಸಲಾಗುವುದು.
ಕಾರ್ಯಕ್ರಮದಲ್ಲಿ 'ಟಾಫೆ' ರೈತ ಸಮೂಹದ ಜತೆ ಸಂವಾದ ನಡೆಸುವ ಜತೆಗೆ ಉತ್ತಮ ಸಾಧನೆ ತೋರಿದ ರೈತರನ್ನು ಸನ್ಮಾನಿಸಲಿದೆ. ಕೃಷಿ ಕ್ಷೇತ್ರದಲ್ಲೂ ಮಹಿಳೆಯರಿಗೆ ಭಾಗವಹಿಸಲು ಸಮಾನ ಅವಕಾಶ ಒದಗಿಸಬೇಕು ಎನ್ನುವ ಸಲುವಾಗಿ ಟ್ರ್ಯಾಕ್ಟರ್ ಚಾಲನೆ, ಕೃಷಿ ಯಂತ್ರೋಪಕರಣ ಬಳಕೆ ವಿಚಾರದಲ್ಲಿ ರೈತ ಮಹಿಳೆಯರನ್ನು ಪ್ರೋತ್ಸಾಹಿಸುವ ಮತ್ತು ತರಬೇತಿ ನೀಡುವ ಯೋಜನೆಗೂ ಇದೇ ವೇಳೆ ಚಾಲನೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.