ಬೆಂಗಳೂರು: ಮೊನ್ನೆಯಷ್ಟೇ ಅಂಕಮಿತಿ ಘೋಷಿಸದೆ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಿ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) ಈಗ ಮತ್ತೊಮ್ಮೆ ಅದೇ ರೀತಿಯ ಅನುಮಾನಕ್ಕೆ ಆಸ್ಪದ ಮಾಡಿಕೊಟ್ಟಿದೆ.
ಕರ್ನಾಟಕ ಲೋಕಸೇವಾ ಆಯೋಗ ಈಗ ಅಂಕ ಮರುಎಣಿಕೆ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಿರುವುದರಿಂದ ಅಭ್ಯರ್ಥಿಗಳಲ್ಲಿ ಗೊಂದಲ ಮೂಡಿರುವ ಜತೆಗೆ ಆಯೋಗದ ಕಾರ್ಯವೈಖರಿ ಬಗ್ಗೆಯೂ ತೀವ್ರ ಅನುಮಾನ ಮೂಡಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಕರ್ನಾಟಕ ಲೋಕಸೇವಾ ಆಯೋಗ ಎ ಮತ್ತು ಬಿ ಸಮೂಹದ ಗೆಜೆಟೆಡ್ ಪ್ರೊಬೆಷನರ್ಸ್ 362 ಹುದ್ದೆಗಳಿಗೆ 2011ರಲ್ಲಿ ಅರ್ಜಿ ಆಹ್ವಾನಿಸಿತ್ತು. ಆ ಪ್ರಕಾರ ಸಾವಿರಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅವರಲ್ಲಿ ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹರು ಎಂದು ಪರಿಗಣಿಸಲ್ಪಟ್ಟವರನ್ನು ಮುಖ್ಯ ಪರೀಕ್ಷೆ ಎದುರಿಸಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಮುಖ್ಯ ಪರೀಕ್ಷೆಯನ್ನು 2012ರ ಡಿ. 15 ರಿಂದ 2013ರ ಜ. 16ರ ವರೆಗೆ ನಡೆಸಲಾಗಿತ್ತು. ಇದರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಫಲಿತಾಂಶವನ್ನು ಮಾ. 16ರಂದು ಆಯೋಗ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿತ್ತು.
ಮರುಎಣಿಕೆ ಮುನ್ನ ಸಂದರ್ಶನ: ಹಾಗೆ ಸುಮಾರು 5 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳ ಫಲಿತಾಂಶವನ್ನು ಮಾ. 16ರಂದು ಅಂತರ್ಜಾಲದಲ್ಲಿ ಪ್ರಕಟಿಸಿರುವ ಆಯೋಗ ಅಭ್ಯರ್ಥಿಗಳು ಇಚ್ಛಿಸಿದಲ್ಲಿ ಅಂಕ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಮಾ. 27ರ ವರೆಗೆ ಅವಕಾಶ ಕಲ್ಪಿಸಿದೆ. ಆದರೆ ಈ ನಡುವೆ ಹುದ್ದೆಯ 1:3ರ ಅನುಪಾತದಲ್ಲಿ 1077 ಅಭ್ಯರ್ಥಿಗಳಿಗೆ ಏ. 1 ರಿಂದ ಏ. 24 ರ ನಡುವಿನ ಅವಧಿಯಲ್ಲಿ ನಿಗದಿತ ದಿನ ಹಾಗೂ ಸಮಯಕ್ಕೆ ಸರಿಯಾಗಿ ಸಂದರ್ಶನಕ್ಕೆ ಹಾಜರಾಗುವಂತೆ ಆಯೋಗ ಅಭ್ಯರ್ಥಿಗಳಿಗೆ ತಿಳಿಸಿದೆ. ಹೀಗೆ ಅಂಕ ಮರುಎಣಿಕೆ ಪ್ರಕ್ರಿಯೆ ಪೂರ್ಣಗೊಳ್ಳುವ ಮುಂಚೆಯೇ ಆಯೋಗ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಿರುವುದು ಅದರ ಕಾರ್ಯಶೈಲಿ ಬಗ್ಗೆ ಅನುಮಾನ ಉಂಟಾಗುವಂತೆ ಮಾಡಿದೆ ಎಂದು ಸಾರ್ವಜನಿಕರನೇಕರು ದೂರಿದ್ದಾರೆ.
ಅಂಕ ಮರುಎಣಿಕೆ ಪ್ರಕ್ರಿಯೆ ಮುಗಿದ ಮೇಲೆಯೇ ಸಂದರ್ಶನಕ್ಕೆ ಆಹ್ವಾನಿಸುವುದು ಕ್ರಮಬದ್ಧವಾದುದು. ಆದರೆ, ಅಂಕ ಮರುಎಣಿಕೆಗೆ ಅರ್ಜಿ ಸಲ್ಲಿಸಲು ಮಾ. 27ರ ವರೆಗೆ ಅವಕಾಶ ಕಲ್ಪಿಸಿರುವ ಆಯೋಗ ಅದಕ್ಕೂ 1 ವಾರದ ಮುಂಚೆಯೇ 1077 ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಿದೆ. ಆಯೋಗ ಈ ರೀತಿ ಮಾಡಿರುವುದರಿಂದ ಅಂಕ ಮರುಎಣಿಕೆ ಎಂಬುದು ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತಾಗಿದೆ. ಒಂದು ವೇಳೆ ಯಾವುದೇ ಅಭ್ಯರ್ಥಿ ಅಂಕ ಮರುಎಣಿಕೆಯಲ್ಲಿ ಅಂಕಮಿತಿ(ಕಟಾಫ್ ಮಾರ್ಕ್ಸ್)ಗಿಂತ ಹೆಚ್ಚು ಅಂಕ ಪಡೆದರೆ ಸಂದರ್ಶನಕ್ಕೆ ಅರ್ಹರಾಗುತ್ತಾರೆ. ಆದರೆ ಈಗಾಗಲೇ 1:3ರ ಅನುಪಾತದಲ್ಲಿ ಆಯ್ದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗಿರುವುದರಿಂದ ಮರುಎಣಿಕೆ ವೇಳೆ ಹೆಚ್ಚಿನ ಅಂಕ ಪಡೆದವರು ಸಂದರ್ಶನದಿಂದ ವಂಚಿತರಾಗುತ್ತಾರೆ. ಅಂಕ ಮರುಎಣಿಕೆ ಪ್ರಕ್ರಿಯೆ ಪೂರ್ಣಗೊಂಡ ಮೇಲೆ ಆಯ್ದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಿದ್ದರೆ ಇಂತಹ ಪರಿಸ್ಥಿತಿ ಸೃಷ್ಟಿಯಾಗುತ್ತಿರಲಿಲ್ಲ ಎಂದು ಹಲವು ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂದರ್ಶನ ತಡೆಗೆ ಮನವಿ
ರಾಜ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾ. 20ರಿಂದ ನೀತಿಸಂಹಿತೆ ಜಾರಿಗೆ ಬಂದಿದೆ. ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಯಾವುದೇ ನೇಮಕಾತಿ ಇತ್ಯಾದಿ ನಡೆಯುವಂತಿಲ್ಲ. ಹಾಗಿದ್ದರೂ ಸರ್ಕಾರದ್ದೇ ಸಂಸ್ಥ್ಥೆಯಾದ ಕೆಪಿಎಸ್ಸಿ ಸರ್ಕಾರದ ಹುದ್ದೆಗಳ ನೇಮಕಾತಿ ಸಲುವಾಗಿ ಸಂದರ್ಶನ ನಡೆಸುತ್ತಿರುವುದು ನಿಯಮಬಾಹಿರ. ಕೆಪಿಎಸ್ಸಿ ಅಧ್ಯಕ್ಷ ಹಾಗೂ ಸದಸ್ಯರೊಬ್ಬರ ಸೇವಾವಧಿ ಏಪ್ರಿಲ್ ತಿಂಗಳಾಂತ್ಯಕ್ಕೆ ಕೊನೆಗೊಳ್ಳಲಿರುವುದರಿಂದ ಈ ಎಲ್ಲ ಪ್ರಕ್ರಿಯೆಗಳನ್ನು ತರಾತುರಿಯಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದೆ. ಹಾಗಾಗಿ ಕೆಪಿಎಸ್ಸಿ ನಡೆಸಲಿರುವ ಸಂದರ್ಶನವನ್ನು ತಡೆ ಹಿಡಿಯಬೇಕು ಎಂದು ಕರ್ನಾಟಕ ಜನಹಿತ ವೇದಿಕೆ ಅಧ್ಯಕ್ಷ ಸಾಯಿದತ್ತ ಅವರು ಮುಖ್ಯ ಚುನಾವಣಾ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
- ರವಿಕಾಂತ ಕುಂದಾಪುರ